ವಿದ್ಯಾರ್ಥಿಗಳ ಆತ್ಮಹತ್ಯೆ ವ್ಯವಸ್ಥಿತ ವೈಫಲ್ಯ: ಸುಪ್ರೀಂ ಕಿಡಿ

| Published : Jul 27 2025, 12:00 AM IST

ವಿದ್ಯಾರ್ಥಿಗಳ ಆತ್ಮಹತ್ಯೆ ವ್ಯವಸ್ಥಿತ ವೈಫಲ್ಯ: ಸುಪ್ರೀಂ ಕಿಡಿ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದಾದ್ಯಂತ ಹೆಚ್ಚುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳ ಕುರಿತು ಸುಪ್ರೀಂ ಕೋರ್ಟ್‌ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಇದೊಂದು ‘ವ್ಯವಸ್ಥಿತ ವೈಫಲ್ಯ’ ಎಂದು ಅಭಿಪ್ರಾಯಪಟ್ಟಿದೆ. ವಿದ್ಯಾರ್ಥಿಗಳು ಸಾವಿನ ದಾರಿ ಹಿಡಿಯುವುದನ್ನು ತಡೆಯಲು ಅವರ ಮಾನಸಿಕ ಆರೋಗ್ಯ ಕಾಪಾಡುವ ವ್ಯವಸ್ಥೆ ಹಾಗೂ ಶೈಕ್ಷಣಿಕ ಸುಧಾರಣೆಯ ಅಗತ್ಯವಿದೆ ಎಂದು ಹೇಳಿದೆ. ಜತೆಗೆ, ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಯಲೆಂದೇ ಶಿಕ್ಷಣ ಸಂಸ್ಥೆಗಳಿಗೆ 15 ಮಾರ್ಗಸೂಚಿ ಬಿಡುಗಡೆ ಮಾಡಿ ಆದೇಶಿಸಿದೆ.

ಆತ್ಮಹತ್ಯೆ ತಡೆಗೆ ಸುಪ್ರೀಂನಿಂದ 15 ಮಾರ್ಗಸೂಚಿ

ಶೈಕ್ಷಣಿಕ ಸಂಸ್ಥೆಗಳಿಗಾಗಿ ಈ ಮಾರ್ಗಸೂಚಿ ರಚನೆನವದೆಹಲಿ: ದೇಶದಾದ್ಯಂತ ಹೆಚ್ಚುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳ ಕುರಿತು ಸುಪ್ರೀಂ ಕೋರ್ಟ್‌ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಇದೊಂದು ‘ವ್ಯವಸ್ಥಿತ ವೈಫಲ್ಯ’ ಎಂದು ಅಭಿಪ್ರಾಯಪಟ್ಟಿದೆ. ವಿದ್ಯಾರ್ಥಿಗಳು ಸಾವಿನ ದಾರಿ ಹಿಡಿಯುವುದನ್ನು ತಡೆಯಲು ಅವರ ಮಾನಸಿಕ ಆರೋಗ್ಯ ಕಾಪಾಡುವ ವ್ಯವಸ್ಥೆ ಹಾಗೂ ಶೈಕ್ಷಣಿಕ ಸುಧಾರಣೆಯ ಅಗತ್ಯವಿದೆ ಎಂದು ಹೇಳಿದೆ. ಜತೆಗೆ, ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಯಲೆಂದೇ ಶಿಕ್ಷಣ ಸಂಸ್ಥೆಗಳಿಗೆ 15 ಮಾರ್ಗಸೂಚಿ ಬಿಡುಗಡೆ ಮಾಡಿ ಆದೇಶಿಸಿದೆ.

ಸುಪ್ರೀಂ ಕೋರ್ಟ್‌ ರೂಪಿಸಿರುವ ಈ ನೂತನ ಮಾರ್ಗಸೂಚಿ ಪ್ರಕಾರ ಇನ್ನು ಮುಂದೆ ವಿದ್ಯಾರ್ಥಿಗಳಿಗೆ ಕಡ್ಡಾಯ ಮಾನಸಿಕ ಆರೋಗ್ಯ ಕೌನ್ಸೆಲಿಂಗ್‌, ಕುಂದು-ಕೊರತೆ ಆಲಿಸುವ ವ್ಯವಸ್ಥೆ ಸೇರಿ ಹಲವು ಕ್ರಮಗಳನ್ನು ಶೈಕ್ಷಣಿಕ ಸಂಸ್ಥೆಗಳು ಕೈಗೊಳ್ಳಬೇಕಿದೆ. ಸರ್ಕಾರವು ಈ ಕುರಿತು ಕಾನೂನು ರೂಪಿಸುವವರೆಗೂ ಈ ಮಾರ್ಗಸೂಚಿ ಅಸ್ತಿತ್ವದಲ್ಲಿರಲಿದೆ ಎಂದು ಇದೇ ವೇಳೆ ಕೋರ್ಟ್ ತಿಳಿಸಿದೆ.

ಕಾಲೇಜು, ಶಾಲೆ, ಕೋಚಿಂಗ್‌ ಸೆಂಟರ್‌ಗಳು, ವಿಶ್ವವಿದ್ಯಾಲಯಗಳು, ತರಬೇತಿ ಕೇಂದ್ರಗಳು ಮತ್ತು ಹಾಸ್ಟೆಲ್‌ಗಳಲ್ಲಿ ಹೆಚ್ಚುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ ಹಿನ್ನೆಲೆಯಲ್ಲಿ ನ್ಯಾಯಾಲಯವು ಈ ಕ್ರಮ ಕೈಗೊಂಡಿದೆ. ಶೈಕ್ಷಣಿಕ ಒತ್ತಡ, ಪರೀಕ್ಷೆ ಒತ್ತಡ ಮತ್ತು ಸಂಸ್ಥೆಗಳಿಂದ ಸಿಗದ ಪೂರಕ ಬೆಂಬಲದಿಂದಾಗಿ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ನ್ಯಾ. ವಿಕ್ರಂನಾಥ್‌ ಮತ್ತು ನ್ಯಾ. ಸಂದೀಪ್‌ ಮೆಹ್ತಾ ಅವರಿದ್ದ ಪೀಠ ಹೇಳಿದೆ.

ಏನೇನು ಮಾರ್ಗಸೂಚಿ?

- ವಿದ್ಯಾರ್ಥಿಗಳ ಸಣ್ಣ ಸಮೂಹಕ್ಕೆ ಕೌನ್ಸೆಲರ್‌ಗಳ ಒದಗಿಸಬೇಕು. ಪರೀಕ್ಷೆ, ಶೈಕ್ಷಣಿಕ ಬದಲಾವಣೆ ಅವಧಿಯಲ್ಲಿ ಅವರಿಗೆ ನಿರಂತರ ಧೈರ್ಯ ತುಂಬುವ ಕೆಲಸ ಮಾಡಬೇಕು.

- ಎಲ್ಲ ಬೋಧಕರು, ಬೋಧಕೇತರ ಸಿಬ್ಬಂದಿ ಕಡ್ಡಾಯವಾಗಿ ವರ್ಷಕ್ಕೆರಡು ಬಾರಿ ಮಾನಸಿಕ ಆರೋಗ್ಯ ತರಬೇತಿ ಪಡೆಯಬೇಕು.

- ಮಾನಸಿಕವಾಗಿ ಕುಗ್ಗಿರುವ ವಿದ್ಯಾರ್ಥಿಗಳ ಗುರುತಿಸುವುದು, ತಮಗೆ ತಾವೇ ಹಾನಿ ಮಾಡಿಕೊಂಡವರ ಗಮನಿಸಿ ಪ್ರತಿಕ್ರಿಯಿಸಬೇಕು.

- ನಿರ್ಲಕ್ಷ್ಯಕ್ಕೊಳಗಾದ, ದುರ್ಬಲ ವರ್ಗದ ಸಮುದಾಯದ ವಿದ್ಯಾರ್ಥಿಗಳ ಕುರಿತು ಸಿಬ್ಬಂದಿ ಸೂಕ್ಷ್ಮತೆ ಪ್ರದರ್ಶಿಸುವಂತೆ ನೋಡಿಕೊಳ್ಳಬೇಕು.

- ಲೈಂಗಿಕ ದೌರ್ಜನ್ಯ, ರ್‍ಯಾಗಿಂಗ್‌ ದೂರು ಸಂಬಂಧ ಶೈಕ್ಷಣಿಕ ಸಂಸ್ಥೆಗಳು ಆಂತರಿಕ ಸಮಿತಿ ಅಥವಾ ಪ್ರಾಧಿಕಾರ ರಚಿಸಬೇಕು

- ವಿದ್ಯಾರ್ಥಿಗಳ ಮಾನಸಿಕ ಆರೋಗ್ಯಕ್ಕಾಗಿ ತಂದೆ-ತಾಯಿಗಳಿಗಾಗಿ ನಿಯಮಿತವಾಗಿ ಕಾರ್ಯಕ್ರಮ ಆಯೋಜಿಸಬೇಕು.

- ಮಾನಸಿಕ ಆರೋಗ್ಯ ಸಾಕ್ಷರತೆ, ಜೀವನ ಕೌಶಲ್ಯ ಶಿಕ್ಷಣ ಮತ್ತು ಮನೋ ನಿಗ್ರಹವನ್ನು ವಿದ್ಯಾರ್ಥಿಗಳ ಚಟುವಟಿಕೆಯ ಭಾಗ ಮಾಡಬೇಕು.

- ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಗೌಪ್ಯ ದಾಖಲೆ ಪಿಟ್ಟುಕೊಳ್ಳಬೇಕು. ಅದರಲ್ಲಿ ಅವರ ಮಾನಸಿಕ ಆರೋಗ್ಯ ಸೇರಿ ಇತರೆ ಬದಲಾವಣೆ ಉಲ್ಲೇಖಿಸಿರಬೇಕು.

- ಆತ್ಮಹತ್ಯೆ ತಡೆ ಹೆಲ್ಪ್‌ಲೈನ್‌ಗಳಾದ ಟೆಲಿ-ಮಾನಸ್‌ ಮತ್ತು ಇತರೆ ರಾಷ್ಟ್ರೀಯ ಸೇವೆಗಳ ಕುರಿತು ಹಾಸ್ಟೆಲ್‌ಗಳು, ತರಗತಿ ಕೋಣೆಗಳು, ಇತರೆಡೆ ಪ್ರದರ್ಶಿಬೇಕು.

- ಶೈಕ್ಷಣಿಕ ಹೊರೆ ಕಡಿಮೆಗೆ, ಅಂಕ ಹಾಗೂ ರ್‍ಯಾಂಕ್‌ನ ಆಚೆಗೂ ಭವಿಷ್ಯ ರೂಪಿಸಿಕೊಳ್ಳಲು ಕಾಲಕಾಲಕ್ಕೆ ಪರೀಕ್ಷಾ ವಿಧಾನದ ಕುರಿತು ಪರಿಶೀಲನೆ ನಡೆಸಬೇಕು.

- ಕೋಚಿಂಗ್‌ ಸೆಂಟರ್‌ ಸಹಿತ ಎಲ್ಲ ಶೈಕ್ಷಣಿಕ ಸಂಸ್ಥೆಗಳಲ್ಲಿ ಮಕ್ಕಳು ಮತ್ತು ಪೋಷಕರಿಗಾಗಿ ನಿಯಮಿತವಾಗಿ ಕೆರಿಯರ್ ಕೌನ್ಸೆಲಿಂಗ್‌ ಸೇವೆ ಒದಗಿಸಬೇಕು.

- ಒಂದು ವೇಳೆ ಶಿಕ್ಷಣ ಸಂಸ್ಥೆ ನಿರ್ಲಕ್ಷ್ಯದಿಂದಾಗಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡರೆ ಆ ಸಂಸ್ಥೆಯನ್ನು ಕಾನೂನು ಪ್ರಕಾರ ಹೊಣೆಗಾರನನ್ನಾಗಿ ಮಾಡಬೇಕು

==

2022ರಲ್ಲಿ 13,044 ವಿದ್ಯಾರ್ಥಿಗಳು ಆತ್ಮಹತ್ಯೆ

ಸುಪ್ರೀಂಕೋರ್ಟ್‌ ಈ 15 ಮಾರ್ಗಸೂಚಿಗಳನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೋ ವರದಿ ಆಧಾರವಾಗಿಟ್ಟುಕೊಂಡು ರಚಿಸಿದೆ. ಅದರ ಪ್ರಕಾರ 2022ರಲ್ಲಿ 13,044 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2021ರಲ್ಲಿ 5,425 ವಿದ್ಯಾರ್ಥಿಗಳು ಸಾವಿಗೆ ಶರಣವಾಗಿದ್ದಾರೆ. ವರದಿ ಪ್ರಕಾರ ಪ್ರತಿ 100 ವಿದ್ಯಾರ್ಥಿಗಳಲ್ಲಿ ಎಂಟು ಮಂದಿ ವಿದ್ಯಾರ್ಥಿಗಳಾಗಿದ್ದಾರೆ. ಅಲ್ಲದೆ, ಪರೀಕ್ಷಾ ವೈಫಲ್ಯದಿಂದಾಗಿಯೇ ಸುಮಾರು 2,248 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.