ಸಾರಾಂಶ
ನವದೆಹಲಿ: ಇಪ್ಪತ್ತೇಳು ವರ್ಷಗಳ ಬಳಿಕ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ಆಪ್‌ಗೆ ಶಾಕ್ ನೀಡಿದ್ದ ಬಿಜೆಪಿ, ಇದೀಗ ಮತ್ತೊಂದು ಆಘಾತ ನೀಡಲು ಮುಂದಾಗಿದೆ.
ಆಪ್ ಭಾರೀ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಚುನಾವಣೆಯ ಪ್ರಚಾರದುದ್ದಕ್ಕೂ ಭರ್ಜರಿ ಆರೋಪ ಮಾಡುತ್ತಲೇ ಬಂದಿದ್ದ ಬಿಜೆಪಿ, ಇದೀಗ ಹೊಸ ಸರ್ಕಾರ ಮೊದಲ ಸಚಿವ ಸಂಪುಟ ಸಭೆಯಲ್ಲೇ ಆಪ್ ಸರ್ಕಾರದ ಭ್ರಷ್ಟಾಚಾರಗಳ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವುದಾಗಿ ಘೋಷಿಸಿದೆ.
ಬಿಜೆಪಿಯು ಭ್ರಷ್ಟಾಚಾರದ ಕುರಿತು ಶೂನ್ಯ ಸಹಿಷ್ಣುತೆಯನ್ನು ಹೊಂದಿದೆ ಮತ್ತು ಯಾರು ಹಗರಣಗಳಲ್ಲಿ ಭಾಗಿಯಾಗಿದ್ದಾರೋ ಅವರನ್ನು ಉತ್ತರದಾಯಿಗಳನ್ನಾಗಿ ಮಾಡಲಾಗುವುದು ಎಂದು ಪಕ್ಷದ ರಾಜ್ಯಾಧ್ಯಕ್ಷ ವಿರೇಂದ್ರ ಸಚ್‌ದೇವ್ ಹೇಳಿದ್ದಾರೆ.
ಸಿಎಜಿ ವರದಿಯನ್ನು ಮೊದಲ ಕ್ಯಾಬಿನೆಟ್‌ನಲ್ಲೇ ಮಂಡಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅನೇಕ ಬಾರಿ ಹೇಳಿದ್ದಾರೆ. ಅದರಂತೆ ನಾವು ಮೊದಲ ಕ್ಯಾಬಿನೆಟ್ ಸಭೆಯಲ್ಲೇ ಆ ವರದಿಯನ್ನು ಮಂಡಿಸುತ್ತೇವೆ. ಇದರ ಜತೆಗೆ, ಎಲ್ಲಾ ಹಗರಣ ಪ್ರಕರಣಗಳ ಕುರಿತ ತನಿಖೆಗೆ ಎಸ್‌ಐಟಿಯನ್ನೂ ರಚಿಸುತ್ತೇವೆ ಎಂದು ಹೇಳಿದರು.