ಸಾರಾಂಶ
ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಸೋಲುಂಡರೂ ನಿರ್ಗಮಿತ ಸಿಎಂ ಆತಿಶಿ ಸಿಂಗ್ ಕಾಲ್ಕಾಜಿ ಕ್ಷೇತ್ರದಲ್ಲಿ ಜಯ ಗಳಿಸಿದ್ದಾರೆ.
ನವದೆಹಲಿ: ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಸೋಲುಂಡರೂ ನಿರ್ಗಮಿತ ಸಿಎಂ ಆತಿಶಿ ಸಿಂಗ್ ಕಾಲ್ಕಾಜಿ ಕ್ಷೇತ್ರದಲ್ಲಿ ಜಯ ಗಳಿಸಿದ್ದಾರೆ. ತಮ್ಮ ಗೆಲುವಿನ ಸಂಭ್ರಮಾಚರಣೆ ವೇಳೆ ಅವರು ಡ್ಯಾನ್ಸ್ ಮಾಡಿರುವುದು ಈಗ ಟೀಕೆಗೆ ಗ್ರಾಸವಾಗಿದೆ. ಈ ಕುರಿತು ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ‘ಇದ್ಯಾವ ರೀತಿಯ ನಾಚಿಕೆಗೇಡಿನ ವರ್ತನೆ? ಪಕ್ಷ ಸೋತಿದೆ, ಎಲ್ಲ ಘಟಾನುಘಟಿ ನಾಯಕರು ಸೋತಿದ್ದಾರೆ, ಆತಿಶಿ ಮರ್ಲೆನಾ ಮಾತ್ರ ಸಂಭ್ರಮಿಸುತ್ತಿದ್ದಾರೆ’ ಎಂದು ಕುಟುಕಿದ್ದಾರೆ.
ಗಡಿ ದಾಟಿದ ಆರೋಪದಡಿ14 ಭಾರತೀಯ ಬೆಸ್ತರಬಂಧಿಸಿದ ಲಂಕಾ ಸೇನೆ
ರಾಮನಾಥಪುರಂ: ಅಂತಾರಾಷ್ಟ್ರೀಯ ಸಮುದ್ರ ಗಡಿ ರೇಖೆಯ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಶ್ರೀಲಂಕಾ ನೌಕಾಪಡೆಯು ಭಾರತದ 14 ಮೀನುಗಾರರನ್ನು ಬಂಧಿಸಿದೆ. ರಾಮೇಶ್ವರಂ ಮತ್ತು ತಂಗಚಿಮಾಡಂನ ಮೀನುಗಾರರನ್ನು ಬಂಧಿಸಿದ್ದು, ಕಾನೂನು ಪ್ರಕ್ರಿಯೆಗಳಿಗಾಗಿ ಶ್ರೀಲಂಕಾಗೆ ಕರೆದೊಯ್ಯಲಾಗಿದೆ. ಮೀನುಗಾರಿಕೆ ಇಲಾಖೆಯ ಮಾಹಿತಿ ಪ್ರಕಾರ ಶನಿವಾರ ಐಎಂಬಿಎಲ್ ಬಳಿ ಮೀನುಗಾರಿಕೆ ನಡೆಸುತ್ತಿದ್ದಾಗ ರಾಮೇಶ್ವರನಿಂದ ಸುಮಾರು 470 ದೋಣಿಗಳು ಸಮುದ್ರಕ್ಕೆ ಇಳಿದಿದ್ದವು. ಶ್ರೀಲಂಕಾದ ಜಲಪ್ರದೇಶವನ್ನು ಪ್ರವೇಶಿಸಿದ ಗುಂಪೊಂದನ್ನು ಶ್ರೀಲಂಕಾ ನೌಕಾಪಡೆಯ ಗಸ್ತು ಘಟಕವು ಓಡಿಸಿತು.ಆದರೆ ಶ್ರೀಲಂಕಾದಲ್ಲಿ ಎರಡು ದೋಣಿಗಳು ಉಳಿದುಕೊಂಡಿದ್ದರಿಂದ, ಶ್ರೀಲಂಕಾ ನೌಕಾಪಡೆಯು ದೋಣಿಯಲ್ಲಿದ್ದ 14 ಮೀನುಗಾರರೊಂದಿಗೆ ಅವರನ್ನು ಬಂಧಿಸಿದೆ.
ಮಹಾಕುಂಭ ಕಲ್ಪವಾಸಿ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: 4ನೇ ಬೆಂಕಿ ಅವಘಡ
ಮಹಾಕುಂಭ ನಗರ: ಇಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಭಾನುವಾರ ಮತ್ತೆ ಬೆಂಕಿ ಅವಘಡ ಸಂಭವಿಸಿದೆ. ಅನಿಲ ಸಿಲಿಂಡರ್ ಸೋರಿಕೆಯಿಂದಾಗಿ ಮಹಾಕುಂಭದ 19ನೇ ವಲಯದಲ್ಲಿನ ಕಲ್ಪವಾಸಿ ಶಿಬಿರಕ್ಕೆ ಬೆಂಕಿ ಹೊತ್ತಿಕೊಂಡಿದೆ. ಆದರೆ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಸೇವಾ ಸಮಿತಿಯೊಂದು ಸ್ಥಾಪಿಸಿದ ಶಿಬಿರಕ್ಕೆ ಬೆಂಕಿ ಹೊತ್ತಿಕೊಂಡಿದ್ದು ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ 10 ನಿಮಿಷಗಳಲ್ಲಿ ಬೆಂಕಿ ನಂದಿಸಿದರು. ಆದರೆ ಅಷ್ಟರಲ್ಲಿ ಶಿಬಿರ ಸಂಪೂರ್ಣ ಹಾನಿಯಾಗಿತ್ತು ಎಂದು ಕುಂಭ ಮೇಳದ ಮುಖ್ಯ ಅಗ್ನಿಶಾಮಕ ಅಧಿಕಾರಿ ಪ್ರಮೋದ್ ಶರ್ಮಾ ಪಿಟಿಐಗೆ ತಿಳಿಸಿದರು. ಮಹಾಕುಂಭ ಆರಂಭವಾದಾಗಿನಿಂದ ಇದು ನಾಲ್ಕನೇ ಬೆಂಕಿ ಅವಘಡವಾಗಿದೆ.