ಸಾರಾಂಶ
ನವದೆಹಲಿ : ಮುಂದಿನ ವರ್ಷದ ಆರಂಭದಲ್ಲಿ ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ದೆಹಲಿಯ ಆಮ್‌ಆದ್ಮಿ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಿದೆ. ಪಕ್ಷದ ಹಿರಿಯ ನಾಯಕ, ಸಾರಿಗೆ ಸಚಿವ ಕೈಲಾಶ್ ಗೆಹ್ಲೋಟ್ ಭಾನುವಾರ ಸಚಿವ ಸ್ಥಾನಕ್ಕೆ ಹಾಗೂ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅದರ ಬೆನ್ನಲ್ಲೇ ರಾಜೀನಾಮೆಯನ್ನು ಕೇಜ್ರಿವಾಲ್ ಸ್ವೀಕರಿಸಿದ್ದಾರೆ.
ರಾಜೀನಾಮೆ ಪತ್ರದಲ್ಲಿ ಆಪ್ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರನ್ನೇ ಟಾರ್ಗೆಟ್ ಮಾಡಿರುವ ಗೆಹ್ಲೋಟ್, ‘ಶೀಷ್‌ಮಹಲ್ ರೀತಿಯ ಕೆಲವೊಂದು ಪೇಚಿನ ಮತ್ತು ಮುಜುಗರದ ಸನ್ನಿವೇಶಗಳು, ಪಕ್ಷವು ಇನ್ನೂ ‘ಆಮ್‌ಆದ್ಮಿ’ ಕಲ್ಪನೆಯಲ್ಲಿ ನಂಬಿಕೆ ಹೊಂದಿದೆಯೇ ಎಂಬ ಅನುಮಾನ ಜನರಲ್ಲಿ ಮೂಡುವಂತೆ ಮಾಡಿದೆ’ ಎಂದಿದ್ದಾರೆ. ಈ ಮೂಲಕ ‘ಕೇಜ್ರಿವಾಲ್ ತಮ್ಮ ಸರ್ಕಾರಿ ಮನೆ ನವೀಕರಣಕ್ಕೆ ದುಂದುವೆಚ್ಚ ಮಾಡಿದ್ದರು. ಸರ್ಕಾರಿ ಹಣದಲ್ಲಿ ಮನೆಯನ್ನು ‘ಶೀಷ್ ಮಹಲ್’ ರೀತಿ ಮಾಡಲು ಯತ್ನಿಸಿದ್ದರು‘ ಎಂಬ ಇತ್ತೀಚಿನ ಬಿಜೆಪಿ ಆರೋಪವನ್ನು ಉಲ್ಲೇಖಿಸಿದ್ದಾರೆ.
ಇದೇ ವೇಳೆ, ‘ಆಮ್ ಆದ್ಮಿ ಪಕ್ಷ ಗಂಭೀರ ಸವಾಲುಗಳನ್ನು ಎದುರಿಸುತ್ತಿದೆ. ನಾವೆಲ್ಲಾ ಆಪ್‌ನಲ್ಲಿ ಒಂದುಗೂಡಲು ಕಾರಣವಾಗಿದ್ದ ಮೌಲ್ಯಗಳಿಗೆ ಪಕ್ಷದೊಳಗಿನಿಂದಲೇ ಸವಾಲು ಎದುರಾಗುತ್ತಿದೆ. ಜನರ ಕಡೆಗಿನ ನಮ್ಮ ಬದ್ಧತೆಗಿಂತ ರಾಜಕೀಯ ಮಹತ್ವಾಕಾಂಕ್ಷೆಗಳು, ಹೆಚ್ಚಿನ ಮಹತ್ವ ಪಡೆದಿದ್ದು, ನಾವು ನೀಡಿದ್ದ ಹಲವು ಭರವಸೆಗಳು ಹಾಗೆಯೇ ಉಳಿಯಲು ಕಾರಣವಾಗಿದೆ’ ಎಂದಿದ್ದಾರೆ,
ಅಲ್ಲದೆ, ಯುಮುನಾ ನದಿ ಸ್ವಚ್ಛ ಸೇರಿದಂತೆ ಜನರ ಹಕ್ಕುಗಳಿಗೆ ಹೋರಾಡಬೇಕಿದ್ದ ಪಕ್ಷ ತನ್ನ ರಾಜಕೀಯ ಅಜೆಂಡಾಗಾಗಿ ಹೋರಾಡುವುದರಲ್ಲಿ ಮುಳುಗಿದೆ. ’ ಎಂದು ಹೇಳಿದ್ದಾರೆ.
ಈ ನಡುವೆ ರಾಜೀನಾಮೆ ಕುರಿತು ಪ್ರತಿಕ್ರಿಯೆ ನೀಡಿರುವ ಆಮ್ ಆದ್ಮಿ ಪಕ್ಷ, ‘ಐಟಿ, ಸಿಬಿಐ ಮತ್ತು ಇ.ಡಿ. ಪ್ರಕರಣದ ಎದುರಿಸುತ್ತಿರುವ ಕೈಲಾಶ್ ಅವರು ಆಪ್‌ಗೆ ರಾಜೀನಾಮೆ ನೀಡಿ ಬಿಜೆಪಿ ಸೇರದೇ ವಿಧಿಯೇ ಇಲ್ಲ. ದೆಹಲಿ ವಿಧಾನಸಭಾ ಚುನಾವಣೆಗೂ ಮುನ್ನ ಇದು ಬಿಜೆಪಿಯ ಕೊಳಕು ರಾಜಕೀಯಕ್ಕೆ ಸಾಕ್ಷಿ’ ಎಂದು ಕಿಡಿಕಾರಿದೆ.
ಕೇಜ್ರಿವಾಲ್ ಜೈಲಿಗೆ ಹೋದಾಗ, ಈಗ ಸಿಎಂ ಆಗಿರುವ ಆಗಿನ ಸಚಿವೆ ಆತಿಶಿ ಬದಲು ಗೆಹ್ಲೋಟ್‌ಗೆ ಆ.15ರಂದು ರಾಷ್ಟ್ರಧ್ವಜಾರೋಹಣ ಮಾಡಲು ಉಪರಾಜ್ಯಪಾಲರು ಅನುಮತಿಸಿದ್ದರು. ಇದು ಕೇಜ್ರಿವಾಲ್ ಕೆಂಗಣ್ಣಿಗೆ ಕಾರಣವಾಗಿತ್ತು.
ದಿಲ್ಲಿ ಬಿಜೆಪಿ ಹಿರಿಯ ನಾಯಕ ಅನಿಲ್ ಝಾ ಆಪ್‌ಗೆ
ನವದೆಹಲಿ: ಬಿಜೆಪಿಯ ಪೂರ್ವಾಂಚಲಿ ನಾಯಕ ಹಾಗೂ ಕಿರಾರಿಯಿಂದ 2 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಮಾಜಿ ಶಾಸಕ ಅನಿಲ್ ಝಾ ಭಾನುವಾರ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.ಸಾರಿಗೆ ಸಚಿವ ಕೈಲಾಶ್ ಗೆಹಲೋತ್ ಆಪ್ ತೊರೆದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಪಕ್ಷದ ಪ್ರಧಾನ ಕಚೇರಿಯಲ್ಲಿ ಅನಿಲ್ ಝಾ ಅವರನ್ನು ಆಪ್ ಸಂಚಾಲಕ ಕೇಜ್ರಿವಾಲ್ ಸ್ವಾಗತಿಸಿದರು ಹಾಗೂ ಅನಿಲ್ ಅವರ ಆಗಮನದಿಂದ ಪಕ್ಷಕ್ಕೆ ಇನ್ನಷ್ಟು ಬಲ ಬಂದಂತಾಗಿದೆ ಎಂದರು.ಮುಂದಿನ ಫೆಬ್ರವರಿಯಲ್ಲಿ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಿರಾರಿ ಕ್ಷೇತ್ರದಿಂದ ಅನಿಲ್ ಝಾ ಅವರನ್ನು ಕಣಕ್ಕೆ ಇಳಿಸಬಹುದು ಎಂದು ಮೂಲಗಳು ತಿಳಿಸಿವೆ.