ಯುದ್ಧ ಹಾಗೂ ಇತರ ಜಾಗತಿಕ ಸವಾಲುಗಳ ನಡುವೆಯೂ ಭಾರತದ ಆರ್ಥಿಕತೆ 2025-26ರಲ್ಲಿ ಶೇ.7.7ರ ದರದಲ್ಲಿ ಬೆಳವಣಿಗೆ ಕಂಡಿದೆ. ಇದು 2024-25ರಲ್ಲಿ ಶೇ.7.1ರ ಬೆಳವಣಿಗೆಗಿಂತ ಸಾಕಷ್ಟು ಹೆಚ್ಚಾಗಿದ್ದು, ಆರ್ಥಿಕ ವಲಯಕ್ಕೆ ಚೇತೋಹಾರಿಯಾಗಿ ಪರಿಣಮಿಸುವ ನಿರೀಕ್ಷೆ ಇದೆ.
ನವದೆಹಲಿ : ಯುದ್ಧ ಹಾಗೂ ಇತರ ಜಾಗತಿಕ ಸವಾಲುಗಳ ನಡುವೆಯೂ ಭಾರತದ ಆರ್ಥಿಕತೆ 2025-26ರಲ್ಲಿ ಶೇ.7.7ರ ದರದಲ್ಲಿ ಬೆಳವಣಿಗೆ ಕಂಡಿದೆ. ಇದು 2024-25ರಲ್ಲಿ ಶೇ.7.1ರ ಬೆಳವಣಿಗೆಗಿಂತ ಸಾಕಷ್ಟು ಹೆಚ್ಚಾಗಿದ್ದು, ಆರ್ಥಿಕ ವಲಯಕ್ಕೆ ಚೇತೋಹಾರಿಯಾಗಿ ಪರಿಣಮಿಸುವ ನಿರೀಕ್ಷೆ ಇದೆ.
‘ಸರ್ಕಾರಿ ದತ್ತಾಂಶದ ಪ್ರಕಾರ 2025-2026ರ ಕೊನೆಯ ತ್ರೈಮಾಸಿಕದಲ್ಲಿ ದೇಶೀಯ ಉತ್ಪನ್ನ (ಜಿಡಿಪಿ) ಶೇ.7.8ರಷ್ಟು ಬೆಳವಣಿಗೆ ಕಂಡಿದೆ. ಇದು ಒಟ್ಟಾರೆ ಇಡೀ ವಿತ್ತೀಯ ವರ್ಷದ ಜಿಡಿಪಿಯನ್ನು ಶೇ.7.7ಕ್ಕೆ ಹೆಚ್ಚಿಸಲು ಸಹಕಾರಿಯಾಗಿದೆ’ ಎಂದು ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ತಿಳಿಸಿದೆ.
ಇರಾನ್ ಯುದ್ಧದಿಂದ ಉಂಟಾದ ಅಡೆತಡೆಗಳು ಜನವರಿ-ಮಾರ್ಚ್ ಅವಧಿಯಲ್ಲಿ ಕೇವಲ 1 ತಿಂಗಳು ಮಾತ್ರ ಸಂಭವಿಸಿವೆ. ಇದರಿಂದ ಜಿಡಿಪಿ ಬೆಳವಣಿಗೆ ಅಬಾಧಿತವಾಗಿದೆ ಎನ್ನಲಾಗಿದೆ. ಆದರೆ ತೈಲ ಬೆಲೆ ಏರಿಕೆ, ಎಲ್‌ಪಿಜಿ ಪೂರೈಕೆಯಂಥ ಸಮಸ್ಯೆಗಳು ಪ್ರಸ್ತುತ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಸಂಪೂರ್ಣವಾಗಿ ಗೋಚರಿಸುತ್ತವೆ. ಹೀಗಾಗಿ ಈ ತ್ರೈಮಾಸಿಕದ ಜಿಡಿಪಿ ಏನಾಗಲಿದೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
ಮೋದಿ ಹರ್ಷ:
ಜಿಡಿಪಿ ಉತ್ತಮ ಬೆಳವಣಿಗೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ.
‘ಭಾರತದ ಬೆಳವಣಿಗೆಯ ಆವೇಗವು ಬಲವಾಗಿ ಮುಂದುವರೆದಿದೆ. ಶೇ.7.8ರ ಜಿಡಿಪಿ ಬೆಳವಣಿಗೆ ದರವು ನಮ್ಮ ಆರ್ಥಿಕತೆಯ ಅಂತರ್ಗತ ಶಕ್ತಿ, ಸುಧಾರಣೆಗಳ ಯಶಸ್ಸು ಮತ್ತು 140 ಕೋಟಿ ಭಾರತೀಯರ ಕಠಿಣ ಪರಿಶ್ರಮವನ್ನು ಪ್ರತಿಬಿಂಬಿಸುತ್ತದೆ. ಜೀವನದ ಸುಲಭತೆ ಮತ್ತು ವ್ಯವಹಾರ ಮಾಡುವ ಸುಲಭತೆಯನ್ನು ಸುಧಾರಿಸಲು ಮತ್ತು ನಮ್ಮ ಯುವಕರಿಗೆ ಅವಕಾಶಗಳನ್ನು ಹೆಚ್ಚಿಸಲು ನಾವು ಯಾವುದೇ ಅವಕಾಶವನ್ನು ವ್ಯರ್ಥ ಮಾಡುವುದಿಲ್ಲ’ ಎಂದಿದ್ದಾರೆ.
ಮುಂದಿನ ಸಲವೂ ಜಿಡಿಪಿ ಶೇ.7 ದಾಟಲಿದೆ’
ಇದೇ ವೇಳೆ, ಮುಖ್ಯ ಆರ್ಥಿಕ ಸಲಹೆಗಾರ ಅನಂತ ನಾಗೇಶ್ವರನ್ ಮಾತನಾಡಿ, ‘ಜಾಗತಿಕ ಪರಿಸ್ಥಿತಿ ಸುಧಾರಿಸಿದರೆ ಮುಂದಿನ ಸಲವೂ ಜಿಡಿಪಿ ಶೇ.7 ದಾಟಲಿದೆ’ ಎಂದಿದ್ದಾರೆ.

