- ಜೆನ್‌-ಝೀಗಳು ಕಡೆಗಣಿಸಲಾಗದ ಶಕ್ತಿಗಳು

- ಜೆನ್‌-ಝೀಗಳಿಂದ ಭಾರತ ವಿಶ್ವಗುರು ಆಗಲಿದೆ

- ಅವರನ್ನು ದಾರಿತಪ್ಪಿಸುವ ಪ್ರಯತ್ನ ನಡೆಯಿತು

- ಇಂಥ ಯತ್ನ ನಡೆದಿದ್ದಕ್ಕೇ ರಾಜೀನಾಮೆ ನೀಡಿದೆ

- ನಾನು ಒಡಿಶಾದ ಗೌರವ ಹಾಳು ಮಾಡುವವನಲ್ಲ


- ಅಂಥ ಕೆಲಸ ಮಾಡುವುದೂ ಇಲ್ಲ: ಮಾಜಿ ಸಚಿವ ಭುವನೇಶ್ವರ: ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ರಾಜೀನಾಮೆ ನೀಡಿದ ನಿರ್ಗಮಿತ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಜೆನ್‌ ಝೀಗಳನ್ನು ಕಡೆಗಣಿಸಲಾಗದ ಶಕ್ತಿಗಳು ಎಂದು ಹೊಗಳಿದ್ದಾರೆ. ಜೆನ್‌ ಝೀಗಳು ಭಾರತವನ್ನು ವಿಶ್ವಗುರು ಮಾಡಲಿದ್ದಾರೆ. ಆದರೆ ಅವರನ್ನು ನೀಟ್‌ ಪ್ರತಿಭಟನೆ ವೇಳೆ ತಪ್ಪುದಾರಿಗೆಳೆಯುವ ಪ್ರಯತ್ನ ನಡೆಯಿತು. ಈ ಹಿನ್ನೆಲೆಯಲ್ಲಿ ನಾನು ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು ಎಂದಿದ್ದಾರೆ.

ಭುವನೇಶ್ವರದ ಜಿಎಂ ವಿವಿಯಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ನಾನು ರಾಜೀನಾಮೆ ನೀಡಿದ ಎರಡು ವಾರಗಳ ಬಳಿಕ ದೆಹಲಿಯ ಜಂತರ್‌ಮಂತರ್‌ನಲ್ಲಿ ಆಯೋಜಿಸಿದ್ದ ಪ್ರತಿಭಟನೆ ಕೈಬಿಡಲಾಯಿತು. ಜೆನ್‌-ಝೀಗಳು ನಮ್ಮ ಮಕ್ಕಳು. ಕೆಲವರು ಅವರನ್ನು ತಪ್ಪುದಾರಿಗೆಳೆಯಲೆತ್ನಿಸಿದರು. ಯಾವುದೇ ಒತ್ತಡ, ಅಹಂಕಾರ ಅಥವಾ ಬೇರೆ ವೈಯಕ್ತಿಕ ಕಾರಣಗಳಿಗೆ ನಾನು ರಾಜೀನಾಮೆ ನೀಡಿಲ್ಲ. ಪ್ರತಿವರ್ಷ ದೇಶದಲ್ಲಿ 2 ಕೋಟಿ ಜನ ಹುಟ್ಟುತ್ತಾರೆ. ಕಳೆದ 10 ವರ್ಷಗಳಲ್ಲಿ 20 ಕೋಟಿ ಮಕ್ಕಳು ಹುಟ್ಟಿದ್ದಾರೆ. ಅವರಿಗೆ ಭಾರೀ ಆಕಾಂಕ್ಷೆಗಳಿವೆ ಹಾಗೂ ಅವರು ಭಾರತವನ್ನು ವಿಶ್ವಗುರು ಮಾಡಲಿದ್ದಾರೆ ಎಂದು ತಿಳಿಸಿದರು.

ಇದೇ ವೇಳೆ ನನ್ನ ಪಾಲಿಗೆ ಯಾವತ್ತೂ ಪದವಿ ಮುಖ್ಯ ಅಲ್ಲ. ನಾನೇ ಪ್ರಧಾನಿ ಮೋದಿ ಅವರಿಗೆ ವೈಯಕ್ತಿಕವಾಗಿ ಮನವಿ ಮಾಡಿ ರಾಜೀನಾಮೆ ಸಲ್ಲಿಸಿದೆ. ಯುವಜನರ ದೃಢ ಸಂಕಲ್ಪ ಮತ್ತು ಮಹತ್ವಾಕಾಂಕ್ಷೆಗಳ ಮುಂದೆ ಶಿಕ್ಷಣ ಸಚಿವನ ಹೊಣೆಗಾರಿಕೆ ಎಂಬುದು ದೊಡ್ಡದಲ್ಲ ಎಂದು ಹೇಳಿ ನಾನು ಪ್ರಧಾನಿ ಮೋದಿ ಅವರಿಗೆ ವಸ್ತುಸ್ಥಿತಿ ಅರ್ಥಮಾಡಿಸಲು ಪ್ರಯತ್ನಪಟ್ಟೆ. ಆ ಬಳಿಕ ಮೋದಿ ಅವರೂ ಯುವಜನರ ಜತೆಗೆ ಸಂವಾದ ನಡೆಸಲು ಮುಂದಾದರು ಎಂದ ಪ್ರಧಾನ್‌, ದೇಶಕ್ಕಿಂತ ದೊಡ್ಡದು ಯಾವುದೂ ಅಲ್ಲ ಎಂದರು.

ಪ್ರತಿಯೊಂದು ತಲೆಮಾರುಗಳು ಕೂಡ ದೇಶಕ್ಕಾಗಿ ಬಲಿದಾನ ಮಾಡಿದ ಯುವಜನರನ್ನು ಸೃಷ್ಟಿಸಿದೆ. ಇತಿಹಾಸವನ್ನು ತೆರೆದು ನೋಡಿದರೆ ದೇಶಕ್ಕಾಗಿ ಬಲಿದಾನ ಮಾಡಿದವರು ಮತ್ತು ಬದಲಾವಣೆಯ ನಾಯಕತ್ವ ವಹಿಸಿದವರು ಯುವಜನರೇ ಆಗಿದ್ದಾರೆ. ಆಯಾ ತಲೆಮಾರಿನ ಯುವಜನರು ಆ ಕಾಲದ ಜೆನ್‌ಝೀಗಳು ಆಗಿದ್ದಾರೆ ಎಂದರು.

ಗೋ ಬ್ಯಾಕ್‌ ಪ್ರತಿಭಟನೆಗೆ ತಿರುಗೇಟು:

ತಮ್ಮ ವಿರುದ್ಧ ಬಿಜೆಡಿ ನೇತೃತ್ವದಲ್ಲಿ ಒಡಿಶಾದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಗೆ ರಾಯ್‌ರಖೋಲ್‌ನಲ್ಲಿ ಆಯೋಜಿಸಿದ್ದ ಸಭೆಯಲ್ಲಿ ತಿರುಗೇಟು ನೀಡಿದ ಅವರು, ನಾನು ಹೋದಲ್ಲೆಲ್ಲ ‘ವಾಪಸ್‌ ಹೋಗಿ’ ಎಂಬ ಬಿಜೆಡಿ ಕಾರ್ಯಕರ್ತರ ಪ್ರತಿಭಟನೆ ಮತ್ತು ಘೋಷಣೆಗಳಿಂದ ತಲೆಕೆಡಿಸಿಕೊಂಡಿಲ್ಲ. ನವೀನ್‌ ಬಾಬು ನಾನು ಒಡಿಶಾದ ಜನರ ಪಾಲಿಗೆ ಅವಮಾನ ಹಾಗೂ ನಾನು ಕೆಟ್ಟ ವ್ಯಕ್ತಿ ಎಂದು ಆರೋಪಿಸುತ್ತಿದ್ದಾರೆ. ಆದರೆ ನಾನು ಯಾವತ್ತೂ ನನ್ನ ಕೆಲಸದ ಮೂಲಕ ರಾಜ್ಯದ ಜನರಿಗೆ ಅವಮಾನ ಮಾಡುವ ಕೆಲಸ ಮಾಡಿಲ್ಲ. ರಾಜ್ಯದ ಗೌರವ ಹಾಳುಗೆಡಹುವ ಯಾವುದೇ ಕೆಲಸ ಮಾಡುವುದಿಲ್ಲ ಎಂದು ಹೇಳಿದರು.