ಸಾರಾಂಶ
ಕಕ್ಷಿದಾರರಿಗೆ ಕಾನೂನು ಸಲಹೆ ನೀಡಿದ್ದ ಇಬ್ಬರು ಹಿರಿಯ ವಕೀಲರಿಗೆ ಇ.ಡಿ. ನೋಟಿಸ್ ನೀಡಿದ್ದನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂಕೋರ್ಟ್, ಜಾರಿ ನಿರ್ದೇಶನಾಲಯ ತನ್ನ ಎಲ್ಲಾ ಎಲ್ಲೆಗಳನ್ನೂ ಮೀರುತ್ತಿದೆ. ಈ ಬಗ್ಗೆ ನಾವು ಕೆಲವೊಂದು ನಿಯಮಾವಳಿ ರೂಪಿಸಲಿದ್ದೇವೆ ಎಂದು ಹೇಳಿದೆ.
ನವದೆಹಲಿ: ಕಂಡಿದ್ದೆಲ್ಲವನ್ನೂ ತನಿಖೆ ಮಾಡಲು ಜಾರಿ ನಿರ್ದೇಶನಾಲಯವು ‘ಸೂಪರ್ ಕಾಪ್’ ಅಲ್ಲ ಎಂದು ಇ.ಡಿ. ವಿರುದ್ಧ ಮದ್ರಾಸ್ ಹೈಕೋರ್ಟ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಬೆನ್ನಲ್ಲೇ, ಕಕ್ಷಿದಾರರಿಗೆ ಕಾನೂನು ಸಲಹೆ ನೀಡಿದ್ದ ಇಬ್ಬರು ಹಿರಿಯ ವಕೀಲರಿಗೆ ಇ.ಡಿ. ನೋಟಿಸ್ ನೀಡಿದ್ದನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂಕೋರ್ಟ್, ಜಾರಿ ನಿರ್ದೇಶನಾಲಯ ತನ್ನ ಎಲ್ಲಾ ಎಲ್ಲೆಗಳನ್ನೂ ಮೀರುತ್ತಿದೆ. ಈ ಬಗ್ಗೆ ನಾವು ಕೆಲವೊಂದು ನಿಯಮಾವಳಿ ರೂಪಿಸಲಿದ್ದೇವೆ ಎಂದು ಹೇಳಿದೆ.
ಹಿರಿಯ ವಕೀಲರಾದ ಅರವಿಂದ್ ದಾತಾರ್ ಮತ್ತು ಪ್ರತಾಪ್ ವೇಣುಗೋಪಾಲ್ ಅವರು ವ್ಯಕ್ತಿಯೊಬ್ಬರಿಗೆ ಕಾನೂನು ಸಲಹೆ ನೀಡಿದ್ದನ್ನು ಪ್ರಶ್ನಿಸಿ ಇ.ಡಿ ಸಮನ್ಸ್ ಜಾರಿಗೊಳಿಸಿತ್ತು.
ಈ ಕುರಿತು ಸ್ವಯಂಪ್ರೇರಿತ ವಿಚಾರಣೆ ನಡೆಸಿದ ಮುಖ್ಯ ನ್ಯಾ.ಬಿ.ಆರ್.ಗವಾಯಿ ಹಾಗೂ ನ್ಯಾ.ಕೆ.ವಿನೋದ್ ಚಂದ್ರನ್ ಅವರಿದ್ದ ಪೀಠ, ‘ವಕೀಲರು ಕಾನೂನು ಸಲಹೆ ನೀಡಿದ್ದಕ್ಕಾಗಿ ಇ.ಡಿ ನೋಟಿಸ್ ನೀಡಲು ಸಾಧ್ಯವಿಲ್ಲ. ವಕೀಲರು ಮತ್ತು ಕಕ್ಷಿದಾರರ ನಡುವಿನ ಸಂವಹನವು, ಒಂದು ವೇಳೆ ಅದು ತಪ್ಪಾಗಿದ್ದರು ಸಹ ವಿಶೇಷ ಸಂವಹನವೇ ಆಗಿದೆ. ಅವರ ವಿರುದ್ಧ ಇ.ಡಿ ನೋಟಿಸ್ ನೀಡಲಾಗದು. ಇ.ಡಿ ಎಲ್ಲ ಮಿತಿಗಳನ್ನು ಮೀರುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದೆ.