ಸಾರಾಂಶ
ಹಿಂದಿ ಭಾಷೆ ಹಿಂದೂಗಳದ್ದು, ಉರ್ದು ಮುಸ್ಲಿಂ ಸಮುದಾಯದವರದ್ದು ಎನ್ನುವುದು ಶೋಚನೀಯ. ಉರ್ದು ಈ ನೆಲದಲ್ಲಿ ಹುಟ್ಟಿದ ಭಾಷೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ನವದೆಹಲಿ: ಹಿಂದಿ ಭಾಷೆ ಹಿಂದೂಗಳದ್ದು, ಉರ್ದು ಮುಸ್ಲಿಂ ಸಮುದಾಯದವರದ್ದು ಎನ್ನುವುದು ಶೋಚನೀಯ. ಉರ್ದು ಈ ನೆಲದಲ್ಲಿ ಹುಟ್ಟಿದ ಭಾಷೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ಮಹಾರಾಷ್ಟ್ರದ ಪುರಸಭೆಯೊಂದರ ಸೂಚನಾ ಫಲಕದಲ್ಲಿ ಉರ್ದು ಬಳಕೆಯನ್ನು ಪ್ರಶ್ನಿಸಿ ಅಕೋಲ ಜಿಲ್ಲೆಯ ಪಾತೂರ್‌ನ ಮಾಜಿ ಕೌನ್ಸಿಲರ್ ಆಗಿದ್ದ ವರ್ಷಾತಾಯಿ ಎನ್ನುವವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ‘ಪುರಸಭೆಯ ಎಲ್ಲಾ ಕಾರ್ಯಗಳು ಹಿಂದಿಯಲ್ಲಿ ನಡೆಯಬೇಕು’ ಎನ್ನುವುದು ಅವರ ವಾದವಾಗಿತ್ತು. ಇದರ ವಿಚಾರಣೆಯನ್ನು ಕೈಗೆತ್ತಿಕೊಂಡ ಕೋರ್ಟ್‌ಗೆ, ಸ್ಥಳೀಯರಲ್ಲಿ ಬಹುತೇಕರು ಉರ್ದು ಬಳಸುವವರಾದ್ದರಿಂದ ಆ ಭಾಷೆಯನ್ನೂ ಫಲಕದಲ್ಲಿ ಸೇರಿಸಿಕೊಳ್ಳಲಾಗಿತ್ತು ಎಂಬುದು ಗಮನಕ್ಕೆ ಬಂತು.
ಆದಕಾರಣ ಅದನ್ನು ಪ್ರಶ್ನಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾ। ಸುಧಾಂಶು ಧುಲಿಯಾ ಮತ್ತು ಕೆ. ವಿನೋದ್ ಚಂದ್ರನ್ ಅವರ ಪೀಠ, ‘ಭಾಷೆ ಧರ್ಮವಲ್ಲ. ಅದು ಸಂಸ್ಕೃತಿ. ಭಾಷೆಯೆಂಬುದು ಸಮುದಾಯಗಳ ನಾಗರೀಕತೆಯನ್ನು ಅಳೆಯುವ ಮಾಪಕ. ಅದರಲ್ಲೂ ಉರ್ದು ಗಂಗೆ, ಯಮುನೆ ತಟದಲ್ಲಿ ಹುಟ್ಟಿಕೊಂಡದ್ದು. ನಾವು ಭಾಷೆ ಸೇರಿ ವಿವಿಧ ವೈವಿಧ್ಯತೆಗಳನ್ನು ಆನಂದಿಸಬೇಕು. ಪುರಸಭೆಯು ಸಂವಹನವನ್ನು ಪರಿಣಾಮಕಾರಿಯಾಗಿಸಲು ಯತ್ನಿಸಿದೆಯಷ್ಟೇ’ ಎಂದು ಹೇಳಿದೆ.
==‘ವಿವಿಧ ಸಾಂಸ್ಕೃತಿಕ ಪರಿಸರಕ್ಕೆ ಸೇರಿದವರ ಸಂವಹನದಿಂದಾಗಿ ಉರ್ದು ಬೆಳೆಯಿತು. ಕಾಲ ಕಳೆದಂತೆ ಅದು ಪರಿಷ್ಕರಣೆಗೊಂಡು ಅನೇಕ ಕವಿಗಳ ಪ್ರಿಯವಾದ ಭಾಷೆಯಾಯಿತು. ಉರ್ದು ಪದ ಬಳಸದೆ ಹಿಂದಿಯಲ್ಲಿ ಮಾತಾಡುವುದು ಅಸಂಭವ. ಹಿಂದಿ ಎಂಬ ಪದ ಬಂದಿರುವುದೇ ಪರ್ಶಿಯನ್ ಭಾಷೆಯ ಹಿಂದವಿ ಪದದಿಂದ ಬಂದಿದೆ’ ಎಂದು ಕೋರ್ಟ್ ಬಣ್ಣಿಸಿದೆ.