ಅಶ್ಲೀಲ ಹಾಗೂ ವಯಸ್ಕರ ಸಿನಿಮಾಗಳ ವಿತರಣೆ ಜತೆ ನಂಟು : ಶಿಲ್ಪಾ ಶೆಟ್ಟಿ ಪತಿಗೆ ಮತ್ತೆ ಇ.ಡಿ. ಶಾಕ್‌

| Published : Nov 30 2024, 12:47 AM IST / Updated: Nov 30 2024, 05:02 AM IST

Shilpa Shetty Raj Kundra

ಸಾರಾಂಶ

ಅಶ್ಲೀಲ ಹಾಗೂ ವಯಸ್ಕರ ಸಿನಿಮಾಗಳ ವಿತರಣೆ ಜತೆ ನಂಟು ಹೊಂದಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಮಂಗಳೂರು ಮೂಲದ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್‌ ಕುಂದ್ರಾ ಅವರಿಗೆ ಸೇರಿದ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ಶುಕ್ರವಾರ ದಾಳಿ ನಡೆಸಿದೆ.

 ಮುಂಬೈ : ಅಶ್ಲೀಲ ಹಾಗೂ ವಯಸ್ಕರ ಸಿನಿಮಾಗಳ ವಿತರಣೆ ಜತೆ ನಂಟು ಹೊಂದಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಮಂಗಳೂರು ಮೂಲದ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್‌ ಕುಂದ್ರಾ ಅವರಿಗೆ ಸೇರಿದ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ಶುಕ್ರವಾರ ದಾಳಿ ನಡೆಸಿದೆ. ಇದರಿಂದಾಗಿ ಕುಂದ್ರಾಗೆ ಮತ್ತೊಮ್ಮೆ ಇ.ಡಿ. ಶಾಕ್‌ ಎದುರಾಗಿದೆ.

ಮುಂಬೈ ಹಾಗೂ ಉತ್ತರಪ್ರದೇಶದಲ್ಲಿರುವ ಕುಂದ್ರಾ ಮತ್ತು ಇತರೆ ಆರೋಪಿಗಳಿಗೆ ಸಂಬಂಧಿಸಿದ 15 ಸ್ಥಳಗಳಲ್ಲಿ ಇ.ಡಿ. ಅಧಿಕಾರಿಗಳು ಜಾಲಾಡಿದ್ದಾರೆ. ಕುಂದ್ರಾ ಅವರ ಮನೆ ಹಾಗೂ ಕಚೇರಿಯೂ ಇದರಲ್ಲಿ ಸೇರಿದೆ. ಈ ಪೈಕಿ ಒಂದು ಸ್ಥಳದಲ್ಲಿ ಕುಂದ್ರಾ ಅವರ ವಿಚಾರಣೆಯನ್ನೂ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮುಂಬೈ ಪೊಲೀಸರು ಈ ಹಿಂದೆ ಎರಡು ಎಫ್‌ಐಆರ್‌ ದಾಖಲಿಸಿ, ಕುಂದ್ರಾ ಮತ್ತಿತರರನ್ನು ಬಂಧಿಸಿ ಚಾರ್ಜ್‌ಶೀಟ್‌ಗಳನ್ನು ಸಲ್ಲಿಕೆ ಮಾಡಿದ್ದರು. ಅದರ ಆಧಾರದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಇ.ಡಿ. ದಾಖಲಿಸಿಕೊಂಡಿತ್ತು. ಇದು ಕುಂದ್ರಾ ವಿರುದ್ಧದ ಎರಡನೇ ಪ್ರಕರಣವಾಗಿದೆ. ವರ್ಷಾರಂಭದಲ್ಲಿ ಕ್ರಿಪ್ಟೋ ಕರೆನ್ಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ. ಶಿಲ್ಪಾಶೆಟ್ಟಿ ಹಾಗೂ ಕುಂದ್ರಾ ದಂಪತಿಯ 98 ಕೋಟಿ ರು.ಗಳನ್ನು ಇ.ಡಿ. ಮುಟ್ಟುಗೋಲು ಹಾಕಿಕೊಂಡಿತ್ತು. ಅದಕ್ಕೆ ಬಾಂಬೆ ಹೈಕೋರ್ಟ್‌ ಮೊರೆ ಹೋಗಿ ದಂಪತಿ ರಿಲೀಫ್‌ ಪಡೆದಿತ್ತು.

ಅವಕಾಶ ಬಯಸುತ್ತಿರುವ ನಟಿಯರನ್ನು ಸೆಳೆದು ಅವರ ಇಚ್ಛೆಗೆ ವಿರುದ್ಧವಾಗಿ ನಗ್ನ ಅಥವಾ ಅರೆನಗ್ನ ಚಿತ್ರಗಳನ್ನು ಸೆರೆ ಹಿಡಿದು ಅದನ್ನು ಅಶ್ಲೀಲ ಆ್ಯಪ್‌ನಲ್ಲಿ ಅಪ್‌ಲೋಡ್‌ ಮಾಡಿ ಹಣ ಗಳಿಸಿದ ಆರೋಪ ಕುಂದ್ರಾ ಮೇಲೆ ಇದೆ.