ಸಾರಾಂಶ
ನವದೆಹಲಿ: ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಮೇಲ್ವರ್ಗದವರದ್ದೇ ಪ್ರಾಬಲ್ಯವಿದ್ದು, ಮಧ್ಯಮ ಮತ್ತು ಕೆಳವರ್ಗದವರಿಗೆ ಪ್ರಾತಿನಿಧ್ಯವೇ ಇಲ್ಲ. ಮುಕ್ತ ಹಾಗೂ ವೈಜ್ಞಾನಿಕ ಆಲೋಚನೆಗೆ ಅವಕಾಶವೇ ಇಲ್ಲ’ ಎಂದು ಚಿಲಿ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ‘ಭಾರತದಲ್ಲಿ ಪ್ರಜಾಪ್ರಭುತ್ವದ ಮೇಲೆ ದಾಳಿಯಾಗುತ್ತಿದೆ’ ಎಂಬ ಹೇಳಿಕೆಯ ಬೆನ್ನಲ್ಲೇ ಬಂದ ಈ ಉಕ್ತಿಗೆ ಬಿಜೆಪಿ ಪ್ರತಿಕ್ರಿಯಿಸಿ, ವಿದೇಶದಲ್ಲಿ ನಿಂತು ಭಾರತದ ವಿರುದ್ಧ ಅವರು ನೀಡಿದ ಹೇಳಿಕೆಯನ್ನು ಖಂಡಿಸಿದೆ.
‘ಭಾರತದಲ್ಲಿ ಉನ್ನತ ಜಾತಿಯವರಿಗಷ್ಟೇ ಆದ್ಯತೆ ನೀಡಲಾಗುತ್ತಿದೆ. ಆದರೆ ಅತ್ಯಧಿಕ ಸಂಖ್ಯೆಯಲ್ಲಿರುವ ಕೆಳಜಾತಿಯವರಿಗೆ ಪ್ರಾತಿನಿಧ್ಯವೇ ಸಿಗುತ್ತಿಲ್ಲ. ನಾನು ಶಿಕ್ಷಣ ವ್ಯವಸ್ಥೆಯಲ್ಲಿ ಆದಿವಾಸಿ, ಬುಡಕಟ್ಟು ಜನ, ಮಧ್ಯಮ ಮತ್ತು ಕೆಳಜಾತಿಗಳ ಇತಿಹಾಸ ಮತ್ತು ಸಂಪ್ರದಾಯಗಳನ್ನು ಸೇರಿಸಲು ಬಯಸುತ್ತೇನೆ’ ಎಂದು ರಾಹುಲ್ ಗಾಂಧಿ, ದೇಶದ ಶಿಕ್ಷಣದ ವ್ಯವಸ್ಥೆಯ ಬಗ್ಗೆ ಚಿಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೊಂದಿಗಿನ ಸಂಭಾಷಣೆ ವೇಳೆ ಹೇಳಿದ್ದಾರೆ.
ವೈಜ್ಞಾನಿಕ ದೃಷ್ಟಿ, ಪ್ರಶ್ನಿಸುವ ಹಕ್ಕಿಲ್ಲ:
‘ಕಳೆದೊಂದು ದಶಕದಲ್ಲಿ ದೇಶದಲ್ಲಿ ವೈಜ್ಞಾನಿಕ ಮನೋಭಾವ, ತಾರ್ಕಿಕ ಮತ್ತು ಮುಕ್ತ ಚಿಂತನೆ ಕ್ಷೀಣಿಸುತ್ತಿದೆ. ಇದರಿಂದ ಭಾರೀ ಹಾನಿಯಾಗಿದೆ. ಶಿಕ್ಷಣೆವಂಬುದು ಕುತೂಹಲ, ಸ್ವತಂತ್ರ ಯೋಚನೆ ಮತ್ತು ಸಾಮಾಜಿ, ರಾಜಕೀಯ ವಿಷಯಗಳ ಬಗ್ಗೆ ಮುಕ್ತವಾಗಿ ಪ್ರಶ್ನೆ ಕೇಳುವ ಅಭ್ಯಾಸದಿಂದ ಶುರುವಾಗುತ್ತದೆ. ಇದು ಸ್ವಾತಂತ್ರ್ಯದ ಬುನಾದಿಯಾಗಿರುವುದರಿಂದ ಕೆಲವರ ಸ್ವತ್ತಾಗಬಾರದು. ಭಾರತಕ್ಕೆ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ, ವಿಮರ್ಶಾತ್ಮಕ ಚಿಂತನೆಯನ್ನು ಪ್ರೋತ್ಸಾಹಿಸುವ ಮತ್ತು ರಾಷ್ಟ್ರದ ಶ್ರೀಮಂತ ವೈವಿಧ್ಯತೆಯನ್ನು ಪ್ರತಿಬಿಂಬಿಸುವ ಶಿಕ್ಷಣ ವ್ಯವಸ್ಥೆಯ ಅಗತ್ಯವಿದೆ’ ಎಂದು ರಾಹುಲ್ ಅಭಿಪ್ರಾಯಪಟ್ಟಿದ್ದಾರೆ.
ರಾಹುಲ್ ಬೂಟಾಟಿಕೆಯ ನಾಯಕ: ಭಾರತದ ಶಿಕ್ಷಣ ವ್ಯವಸ್ಥೆಯನ್ನು ವಿದೇಶದಲ್ಲಿ ಟೀಕಿಸಿರುವ ರಾಹುಲ್ ಗಾಂಧಿ ಅವರ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದ್ದು, ‘ಅವರು ರೋಧ ಪಕ್ಷದ ನಾಯಕನಲ್ಲ, ಪ್ರಚಾರ ಮತ್ತು ಬೂಟಾಟಿಕೆಯ ನಾಯಕ. ಅವರು ವಿದೇಶಗಳಿಗೆ ಹೋಗಿ ಭಾರತದ ಸಾಂವಿಧಾನಿಕ ಸಂಸ್ಥೆಗಳು, ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ, ನ್ಯಾಯಾಂಗ ಮತ್ತು ಸಾರ್ವಭೌಮತ್ವದ ವಿರುದ್ಧ ಮಾತನಾಡುತ್ತಾರೆ. ಭಾರತದ ವಿರುದ್ಧ ಹೋರಾಡುತ್ತಿರುವುದಾಗಿ ಹೇಳುವ ಅವರು, ದೇಶದ ಬಗ್ಗೆ ಸುಳ್ಳನ್ನು ಹರಡುತ್ತಿದ್ದಾರೆ’ ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲ ಹರಿಹಾಯ್ದಿದ್ದಾರೆ.
ಜತೆಗೆ, ‘ಮುಕ್ತ ಯೋಚನೆಗೆ ಜಾಗ ಇಲ್ಲದಿರುವುದು ಕಾಂಗ್ರೆಸ್ ಪಕ್ಷದಲ್ಲಿ. ಯಾರಾದರೂ ರಾಹುಲ್ ವಿರುದ್ಧ ಮಾತನಾಡಿದರೆ ಏನಾಗುತ್ತದೆ ಎಂಬುದಕ್ಕೆ ಸಂಸದ ಶಶಿ ತರೂರ್ ಅವರೇ ಸಾಕ್ಷಿ’ ಎಂದು, ಆಪರೇಷನ್ ಸಿಂದೂರವನ್ನು ಬೆಂಬಲಿಸಿ ಅವರು ಕಾಂಗ್ರೆಸ್‌ನ ಕೆಂಗಣ್ಣಿಗೆ ಗುರಿಯಾಗಿದ್ದನ್ನು ನೆನಪಿಸಿ ತಿರುಗೇಟು ನೀಡಿದ್ದಾರೆ.