ಸಾರಾಂಶ
ನವದೆಹಲಿ : ಬಿಜೆಪಿ ಹಾಗೂ ಕಾಂಗ್ರೆಸ್ ಪಾಲಿಗೆ ಪ್ರತಿಷ್ಠೆಯ ಪ್ರಶ್ನೆ ಆಗಿರುವ ಮಹಾರಾಷ್ಟ್ರ, ಜಾರ್ಖಂಡ್ ವಿಧಾನಸಭೆಗೆ ಬರುವ ನವೆಂಬರ್ ತಿಂಗಳಲ್ಲಿ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಿದೆ. ಇದರ ಜೊತೆಜೊತೆಗೇ, ಕರ್ನಾಟಕದ 3 ಸೇರಿ ವಿವಿಧ ರಾಜ್ಯಗಳ 48 ವಿಧಾನಸಭೆ ಉಪಚುನಾವಣೆಗಳು ಹಾಗೂ ಕೇರಳದ ವಯನಾಡು, ಮಹಾರಾಷ್ಟ್ರದ ನಾಂದೇಡ್ ಲೋಕಸಭಾ ಕ್ಷೇತ್ರಗಳಿಗೂ ಉಪಚುನಾವಣೆ ದಿನಾಂಕಗಳನ್ನು ಚುನಾವಣಾ ಆಯೋಗ ಮಂಗಳವಾರ ಪ್ರಕಟಿಸಿದೆ.
ಈ ಪ್ರಕಾರ, 288 ಕ್ಷೇತ್ರಗಳ ಮಹಾರಾಷ್ಟ್ರದಲ್ಲಿ ಏಕ ಹಂತದಲ್ಲಿ- ಅಂದರೆ ನ.20ಕ್ಕೆ ಮತದಾನ ನಡೆಯಲಿದೆ. 81 ಕ್ಷೇತ್ರಗಳ ಜಾರ್ಖಂಡ್ ಚುನಾವಣೆಯು ನ.13 ಮತ್ತು ನ.20ರಂದು 2 ಹಂತಗಳಲ್ಲಿ ನಡೆಯಲಿದೆ.
ಇದೇ ವೇಳೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ರಾಜೀನಾಮೆಯಿಂದ ತೆರವಾಗಿರುವ ಕೇರಳದ ವಯನಾಡಲ್ಲಿ ನ.13ರಂದು, ಉತ್ತರಾಖಂಡದ ಕೇದಾರನಾಥ್ ವಿಧಾನಸಭೆ ಹಾಗೂ ಮಹಾರಾಷ್ಟ್ರದ ನಾಂದೇಡ್ ಲೋಕಸಭಾ ಕ್ಷೇತ್ರದಲ್ಲಿ ನ.20ರಂದು ಉಪಚುನಾವಣೆ ನಡೆಯಲಿದೆ.
2 ರಾಜ್ಯಗಳ ವಿಧಾನಸಭೆ ಚುನಾವಣೆ, 48 ವಿಧಾನಸಭಾ ಉಪಚುನಾವಣೆ ಹಾಗೂ ವಯನಾಡ್, ನಾಂದೇಡ್ ಲೋಕಸಭಾ ಉಪಚುನಾವಣಾ ಫಲಿತಾಂಶಗಳು ಒಟ್ಟಿಗೇ ನ.23ರಂದು ಘೋಷಣೆ ಆಗಲಿವೆ. ಭಾರತೀಯ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಘೋಷಿಸಿದ್ದಾರೆ.
ಬಿಜೆಪಿ, ಕಾಂಗ್ರೆಸ್‌ಗೆ ಪ್ರತಿಷ್ಠೆ:
ಹಾಲಿ ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ (ಶಿಂಧೆಬಣ)- ಎನ್‌ಸಿಪಿ (ಅಜಿತ್ ಬಣ) ಮೈತ್ರಿಕೂಟ ಅಧಿಕಾರದಲ್ಲಿದೆ. ಅದನ್ನು ಕೆಳಗಿಳಿಸಲು ಕಾಂಗ್ರೆಸ್-ಎನ್‌ಸಿಪಿ (ಶರದ್ ಬಣ)-ಶಿವಸೇನೆ (ಠಾಕ್ರೆ ಬಣ) ಮೈತ್ರಿಕೂಟ ಸಾಹಸ ನಡೆಸುತ್ತಿದೆ.
ಜಾರ್ಖಂಡ್‌ನಲ್ಲಿ ಜೆಎಂಎಂ-ಕಾಂಗ್ರೆಸ್ ಕೂಟ ಅಧಿಕಾರದಲ್ಲಿದೆ. ಈ ಕೂಟ ಕೆಳಗಿಳಿಸಲು ಬಿಜೆಪಿ ಯತ್ನಿಸುತ್ತಿದೆ.
ಮಹಾರಾಷ್ಟ್ರವಿಧಾನಸಭೆಯ ಅವಧಿ ನ.26ಕ್ಕೆ ಕೊನೆಗೊಳ್ಳಲಿದ್ದು, ಜಾರ್ಖಂಡ್‌ನ ಅವಧಿ 2025ರ ಜ.5ಕ್ಕೆ ಮುಕ್ತಾಯವಾಗಲಿದೆ. 2019ರ ಜಾರ್ಖಂಡ್ ವಿಧಾನಸಭಾ ಚುನಾವಣೆಯು 5 ಹಂತಗಳಲ್ಲಿ ನಡೆದಿದ್ದರೆ, ಮಹಾರಾಷ್ಟ್ರದಲ್ಲಿ ಕೇವಲ ಒಂದು ಹಂತ ಮತದಾನ ನಡೆದಿತ್ತು.