ಸಾರಾಂಶ
ನವದೆಹಲಿ: ಜಗತ್ತಿನ ಮುಂಚೂಣಿ ಎಲೆಕ್ಟ್ರಿಕ್ ಕಾರು ಉತ್ಪಾದನಾ ಕಂಪನಿ ಟೆಸ್ಲಾದ ಮಾಲೀಕ ಎಲಾನ್ ಮಸ್ಕ್ ತಮ್ಮ ಭಾರತ ಭೇಟಿಯನ್ನು ಮುಂದೂಡಿದ್ದಾರೆ.
ಪೂರ್ವ ನಿಗದಿತ ಕಾರ್ಯಕ್ರಮದ ಅನ್ವಯ ಏ.21-22ರಂದು ಮಸ್ಕ್ ಭಾರತಕ್ಕೆ ಭೇಟಿ ನೀಡಿ, ಭಾರತದಲ್ಲಿನ ತಮ್ಮ ಕಾರು ಉತ್ಪಾದನಾ ಘಟಕ ಆರಂಭದ ಕುರಿತು ಘೋಷಣೆ ಮಾಡಬೇಕಿತ್ತು.ಆದರೆ ಶನಿವಾರ ಹೇಳಿಕೆ ಬಿಡುಗಡೆ ಮಾಡಿರುವ ಮಸ್ಕ್, ‘ಟೆಸ್ಲಾದ ಅತ್ಯಂತ ತುರ್ತು ಬಾಧ್ಯತೆಗಳ ಅನ್ವಯ ಭಾರತ ಭೇಟಿ ವಿಳಂಬವಾಗಲಿದೆ. ಆದರೆ ವರ್ಷಾಂತ್ಯದ ವೇಳೆಗೆ ಭಾರತದ ಭೇಟಿಯನ್ನು ನಾನು ಎದುರು ನೋಡುತ್ತಿದ್ದೇನೆ’ ಎಂದು ಪ್ರತಿಕ್ರಿಯಿಸಿದ್ದಾರೆ.
ಮಸ್ಕ್ ತಮ್ಮ ಭಾರತ ಭೇಟಿ ವೇಳೆ ಪ್ರಧಾನಿ ಮೋದಿ ಭೇಟಿ, ಭಾರತದಲ್ಲಿನ ತಮ್ಮ ಬಂಡವಾಳ ಹೂಡಿಕೆ ಮತ್ತು ಕಾರು ಉತ್ಪಾದನಾ ಘಟಕದ ಸ್ಥಳದ ಕುರಿತು ಘೋಷಣೆ ಮಾಡುವ ನಿರೀಕ್ಷೆ ಇತ್ತು.
ಆದರೆ ಇತ್ತೀಚೆಗೆ ಬಿಡುಗಡೆ ಮಾಡಿದ ಟೆಸ್ಲಾದ ತ್ರೈಮಾಸಿಕ ವರದಿಯಲ್ಲಿ ಕಳೆದ 4 ವರ್ಷಗಳಲ್ಲೇ ಮೊದಲ ಬಾರಿಗೆ ಕಂಪನಿಯ ಕಾರು ಮಾರಾಟ ಇಳಿಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಅತ್ತ ತುರ್ತು ಗಮನ ನೀಡಲು ಮಸ್ಕ್ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಮಾರಾಟ ಇಳಿಕೆ ಕಂಡ ಬೆನ್ನಲ್ಲೇ ಟೆಸ್ಲಾ ತನ್ನ 14000 ಸಿಬ್ಬಂದಿಗಳನ್ನು ತೆಗೆದುಹಾಕುವ ಘೋಷಣೆಯನ್ನು ಮಾಡಿತ್ತು.
ಹಾಲಿ ಭಾರತದಲ್ಲಿ ಮಾರಾಟ ಆಗುತ್ತಿರುವ ಟೆಸ್ಲಾ ಕಾರುಗಳು ಸಂಪೂರ್ಣ ವಿದೇಶಿ ನಿರ್ಮಿತ. ಇವುಗಳ ಮೇಲೆ ಶೇ.30-ಶೇ.70ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಹೀಗಾಗಿ ಭಾರತದಲ್ಲೇ ಕಾರು ಉತ್ಪಾದನೆ ಮಾಡುವ ಜೊತೆಗೆ ಅದನ್ನು ಇಲ್ಲಿಂದಲೇ ವಿದೇಶಗಳಿಗೆ ರಫ್ತು ಮಾಡುವ ಗುರಿಯನ್ನು ಟೆಸ್ಲಾ ಹಾಕಿಕೊಂಡಿದೆ.