ಇತ್ತೀಚೆಗೆ ಲೆಬನಾನ್‌ನಲ್ಲಿ ಪೇಜರ್‌ಗಳನ್ನು ಹ್ಯಾಕ್‌ ಮಾಡಿದ ರೀತಿಯಲ್ಲಿ ಭಾರತೀಯ ಚುನಾವಣೆಗಳಲ್ಲಿ ಎಲೆಕ್ಟ್ರಾನಿಕ್‌ ವೋಟಿಂಗ್‌ ಮಷಿನ್‌ಗಳನ್ನೂ ಹ್ಯಾಕ್‌ ಮಾಡಬಹುದು ಎಂಬ ಅನುಮಾನ ಮತ್ತು ಆರೋಪಗಳನ್ನು ಕೇಂದ್ರ ಚುನಾವಣಾ ಆಯೋಗ ಸ್ಪಷ್ಟವಾಗಿ ತಳ್ಳಿಹಾಕಿದೆ.

ನವದೆಹಲಿ: ಇತ್ತೀಚೆಗೆ ಲೆಬನಾನ್‌ನಲ್ಲಿ ಪೇಜರ್‌ಗಳನ್ನು ಹ್ಯಾಕ್‌ ಮಾಡಿದ ರೀತಿಯಲ್ಲಿ ಭಾರತೀಯ ಚುನಾವಣೆಗಳಲ್ಲಿ ಎಲೆಕ್ಟ್ರಾನಿಕ್‌ ವೋಟಿಂಗ್‌ ಮಷಿನ್‌ಗಳನ್ನೂ ಹ್ಯಾಕ್‌ ಮಾಡಬಹುದು ಎಂಬ ಅನುಮಾನ ಮತ್ತು ಆರೋಪಗಳನ್ನು ಕೇಂದ್ರ ಚುನಾವಣಾ ಆಯೋಗ ಸ್ಪಷ್ಟವಾಗಿ ತಳ್ಳಿಹಾಕಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌, ‘ಪೇಜರ್‌ಗಳು ಅಂತರ್ಜಾಲಕ್ಕೆ ಸಂಪರ್ಕ ಹೊಂದಿರುತ್ತವೆ. ಆದರೆ ಇವಿಎಂಗಳು ಹಾಗಿಲ್ಲ. ಜೊತೆಗೆ ಪೇಜರ್‌ಗಳಲ್ಲಿ ಬಳಸುವ ಬ್ಯಾಟರಿಗೂ, ಇವಿಎಂ ಬ್ಯಾಟರಿಗೂ ವ್ಯತ್ಯಾಸವಿದೆ. ಇವಿಎಂಗಳಲ್ಲಿ ಒಮ್ಮೆ ಮಾತ್ರ ಬಳಸಬಹುದಾದ ಕ್ಯಾಲ್ಕುಲೇಟರ್‌ ರೀತಿಯ ಬ್ಯಾಟರಿ ಬಳಸಲಾಗಿರುತ್ತದೆ. ಹೀಗಾಗಿ ಅದನ್ನು ಹ್ಯಾಕ್‌ ಮಾಡಲು ಸಾಧ್ಯವಿಲ್ಲ’ ಎಂದು ಸ್ಪಷ್ಟನೆ ನೀಡಿದರು.

ಇದೇ ವೇಳೆ ಇತ್ತೀಚಿನ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಇವಿಎಂಗಳನ್ನು ಹ್ಯಾಕ್ ಮಾಡಲಾಗಿತ್ತು ಎಂಬ ಕಾಂಗ್ರೆಸ್‌ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ರಾಜೀವ್‌ ಕುಮಾರ್‌, ‘ಇವಿಎಂಗಳ ಬಗ್ಗೆ ಈ ಹಿಂದೆಯೂ ಪ್ರಶ್ನೆಗಳನ್ನು ಎತ್ತಲಾಗಿತ್ತು. ಒಬ್ಬರಿಗೆ ಹಾಕಿದ ಮತ ಮತ್ತೊಬ್ಬರಿಗೆ ಬಿದ್ದಿದೆ ಎಂದು ಹೇಳಲಾಗಿತ್ತು. ಆದರೆ ಇದೀಗ ಬ್ಯಾಟರಿಗಳ ಕುರಿತು ಪ್ರಶ್ನೆಗಳನ್ನು ಎತ್ತಲಾಗಿದೆ. ಮುಂದೆ ಇನ್ನೇನು ಬರುತ್ತದೆಯೋ ಎಂಬ ಅಚ್ಚರಿಯಲ್ಲಿ ನಾವು ಇದ್ದೇವೆ. ಏಕೆಂದರೆ ಇಂಥ ಆರೋಪಗಳು ನಿಲ್ಲುವುದಿಲ್ಲ. ಆದರೆ ನಾವು ಬಯಸಿದ ಫಲಿತಾಂಶ ಬಂದಿಲ್ಲ ಎಂದಾಕ್ಷಣ ಅದು ತಪ್ಪಾಗಿದೆ ಎಂದು ಹೇಳುವುದು ಸರಿಯಲ್ಲ.ಕಳೆದ 15-20 ಚುನಾವಣೆಗಳಲ್ಲಿ ಬೇರೆ ಬೇರೆ ರೀತಿ ಫಲಿತಾಂಶ ಬಂದಿದೆ. ಈ ಅಂಶವೇ ಇವಿಎಂಗಳು ದೋಷಪೂರಿತವಾಗಿಲ್ಲ, ಬದಲಾಗಿ ಅವು ಮತದಾರರ ಆಯ್ಕೆಯನ್ನು ತೋರಿಸುತ್ತವೆ ಎಂದು ರಾಜೀವ್‌ ಕುಮಾರ್‌ ಹೇಳಿದ್ದಾರೆ.