ತೆಲಂಗಾಣ ಐಬಿ ಮುಖ್ಯಸ್ಥರೇ ಫೋನ್‌ ಕದ್ದಾಲಿಕೆ ಕಿಂಗ್‌ಪಿನ್‌

| Published : Mar 26 2024, 01:02 AM IST / Updated: Mar 26 2024, 11:31 AM IST

ಸಾರಾಂಶ

ತೆಲಂಗಾಣದಲ್ಲಿ ಭಾರೀ ರಾಜಕೀಯ ಬಿರುಗಾಳಿ ಎಬ್ಬಿಸಿರುವ ಫೋನ್‌ ಟ್ಯಾಪಿಂಗ್‌ ಹಗರಣದಲ್ಲಿ, ತೆಲಂಗಾಣದ ಗುಪ್ತಚರ ಇಲಾಖೆಯ ಮಾಜಿ ಮುಖ್ಯಸ್ಥ ಟಿ.ಪ್ರಭಾಕರ್‌ ರಾವ್‌ ಅವರೇ ಆರೋಪಿ ನಂ.1 ಎಂದು ಹೆಸರಿಸಲಾಗಿದೆ.

ಹೈದರಾಬಾದ್‌: ತೆಲಂಗಾಣದಲ್ಲಿ ಭಾರೀ ರಾಜಕೀಯ ಬಿರುಗಾಳಿ ಎಬ್ಬಿಸಿರುವ ಫೋನ್‌ಟ್ಯಾಪಿಂಗ್‌ ಹಗರಣದಲ್ಲಿ, ತೆಲಂಗಾಣದ ಗುಪ್ತಚರ ಇಲಾಖೆಯ ಮಾಜಿ ಮುಖ್ಯಸ್ಥ ಟಿ.ಪ್ರಭಾಕರ್‌ ರಾವ್‌ ಅವರೇ ಆರೋಪಿ ನಂ.1 ಎಂದು ಹೆಸರಿಸಲಾಗಿದೆ.

ಜೊತೆಗೆ ಈಗಾಗಲೇ ಅಮೆರಿಕಕ್ಕೆ ಪರಾರಿಯಾಗಿರುವ ರಾವ್ ಬಂಧನ ಕೋರಿ ಲುಕೌಟ್‌ ನೋಟಿಸ್‌ ಕೂಡಾ ಜಾರಿಗೊಳಿಸಲಾಗಿದೆ.ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಹೈದರಾಬಾದ್‌ನಲ್ಲಿರುವ ರಾವ್‌ ಅವರ ಮನೆ ಶೋಧಿಸಲಾಗಿದೆ. 

ರಾವ್‌ ಜೊತೆಗೆ ತೆಲುಗಿನ ಐಟೀವಿ ಚಾನೆಲ್‌ ಮುಖ್ಯಸ್ಥ ಶ್ರವಣ್‌ ರಾವ್‌ ಮನೆ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶ್ರವಣ್‌ ರಾವ್‌ ಅವರು ಇಸ್ರೇಲ್‌ನಿಂದ ಫೋನ್‌ ಕದ್ದಾಲಿಕೆ ಉಪಕರಣ ತರಿಸಿ ಅದರ ಸರ್ವರ್‌ಗಳನ್ನು ಸ್ಥಳೀಯ ಶಾಲೆಯೊಂದರಲ್ಲಿ ಇರಿಸಿದ್ದರು ಎನ್ನಲಾಗಿದೆ. 

ಶ್ರವಣ್‌ ಕೂಡಾ ಪ್ರಕರಣ ಬೆಳಕಿಗೆ ಬರುತ್ತಲೇ ವಿದೇಶಕ್ಕೆ ಪರಾರಿಯಾಗಿದ್ದಾರೆ.ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ, ಅಂದಿನ ಕಾಂಗ್ರೆಸ್‌ ಅಧ್ಯಕ್ಷ ಮತ್ತು ಹಾಲಿ ಮುಖ್ಯಮಂತ್ರಿ ರೇವಂತ್‌ ರೆಡ್ಡಿ, ಕಾಂಗ್ರೆಸ್‌ ಮತ್ತು ಬಿಜೆಪಿಯ ಹಲವು ನಾಯಕರು, ನಟರು, ಉದ್ಯಮಿಗಳ ಸುಮಾರು 1 ಲಕ್ಷ ಫೋನ್‌ ಕರೆಗಳನ್ನು ಕದ್ದಾಲಿಸಿದ್ದು ಇತ್ತೀಚೆಗೆ ಬೆಳಕಿತ್ತು ಬಂದಿತ್ತು. 

ಹಿಂದಿನ ಬಿಆರ್‌ಎಸ್‌ ಸರ್ಕಾರದ ಸೂಚನೆ ನಡೆದ ಅನ್ವಯ ಈ ಕದ್ದಾಲಿಕೆಯಲ್ಲಿ ಕನಿಷ್ಠ 30 ಹಿರಿ-ಕಿರಿಯ ಪೊಲೀಸರು ಭಾಗಿಯಾಗಿರುವ ಶಂಕೆ ಇದೆ. ಈ ಪೈಕಿ ಈಗಾಗಲೇ ಮೂವರನ್ನು ಬಂಧಿಸಲಾಗಿದ್ದು, ಇನ್ನು ಕೆಲವರ ವಿಚಾರಣೆ ನಡೆಯುತ್ತಿದೆ.

ಮತ್ತೊಂದೆಡೆ 2023 ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಭಾರೀ ಗೆಲುವು ಸಾಧಿಸುತ್ತಲೇ, ಫೋನ್‌ ಕದ್ದಾಲಿಕೆಗೆ ಬಳಸಿದ ಉಪಕರಣ, ಕಂಪ್ಯೂಟರ್‌ ಸೇರಿದಂತೆ ಇತರೆ ವಸ್ತುಗಳನ್ನು ಪ್ರಭಾಕರ್‌ ರಾವ್‌ ಅವರ ಸೂಚನೆ ಅನ್ವಯ ನಾಶ ಪಡಿಸಿದ್ದು ಕೂಡಾ ಬೆಳಕಿಗೆ ಬಂದಿದೆ.

ಮಾಜಿ ಸಿಎಂಗೆ ಸಂಕಷ್ಟ: ಹಿಂದಿನ ಬಿಆರ್‌ಎಸ್‌ ಸರ್ಕಾರದ ಸೂಚನೆ ಅನ್ವಯವೇ ಈ ಕದ್ದಾಲಿಕೆ ನಡೆದ ಆರೋಪ ಹೊರಿಸಿರುವ ಕಾರಣ, ಮಾಜಿ ಮುಖ್ಯಮಂತ್ರಿ ಚಂದ್ರಶೇಖರ್‌ ರಾವ್‌ ಅವರ ಸಚಿವ ಸಂಪುಟದ ಹಲವು ಸಚಿವರಿಗೆ ಈ ಪ್ರಕರಣದ ಉರುಳಾಗುವ ಸಾಧ್ಯತೆ ಇದೆ. 

ಇತ್ತೀಚಿನ ದೆಹಲಿ ಲಿಕ್ಕರ್ ಹಗರಣದಲ್ಲಿ ಚಂದ್ರಶೇಖರ್‌ ರಾವ್‌ ಅವರ ಪುತ್ರಿ, ಶಾಸಕಿ ಕೆ.ಕವಿತಾ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದರು. 

ಅದರ ಬೆನ್ನಲ್ಲೇ ಈ ಹೊಸ ಬೆಳವಣಿಗೆ ಪಕ್ಷಕ್ಕೆ ಇನ್ನಷ್ಟು ಶಾಕ್‌ ನೀಡುವ ಸಾಧ್ಯತೆ ಇದೆ. ಲೋಕಸಭಾ ಚುನಾವಣೆಗೂ ಮುನ್ನ ಬಿಆರ್‌ಎಸ್‌ನ ಕೆಲ ನಾಯಕರು ಬಂಧನಕ್ಕೊಳಗಾಗುವ ಸಾಧ್ಯತೆ ಇಲ್ಲದಿಲ್ಲ ಎಂದು ಮೂಲಗಳು ತಿಳಿಸಿವೆ.