ಸಾರಾಂಶ
ಪಿಟಿಐ ನವದೆಹಲಿ
‘ಕಳೆದ 75 ವರ್ಷದಲ್ಲಿ ಮೀಸಲಿನ ಲಾಭ ಪಡೆದು ಯಾರು ಮುಂದೆ ಬಂದಿದ್ದಾರೋ ಅಂಥವರನ್ನು ಗುರುತಿಸಬೇಕು ಹಾಗೂ ಅವರಿಗೆ ಮೀಸಲು ಅವಶ್ಯಕತೆ ಇಲ್ಲ ಎಂದು ನಾವು ಹೇಳಿದ್ದೆವು. ಅದರೆ ಈ ಇದನ್ನು ಜಾರಿಗೊಳಿಸುವುದು (ಕೆನೆಪದರ ಜಾರಿ ಅಧಿಕಾರ) ಶಾಸಕಾಂಗ ಹಾಗೂ ಕಾರ್ಯಾಂಗಕ್ಕೆ ಬಿಟ್ಟಿದ್ದು’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.‘ಒಳಮೀಸಲಾತಿ ನೀಡುವ ಅಧಿಕಾರ ರಾಜ್ಯಗಳಿಗೆ ಇದೆ. ಕೆನೆಪದರ ಜಾರಿಯನ್ನೂ ಸರ್ಕಾರಗಳು ನಿರ್ಧರಿಸಬಹುದು ಎಂದು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠ ಕಳೆದ ಆಗಸ್ಟ್‌ನಲ್ಲಿ ನೀಡಿದ್ದ ತೀರ್ಪನ್ನು ರಾಜ್ಯಗಳು 6 ತಿಂಗಳಾದರೂ ಜಾರಿಗೊಳಿಸುತ್ತಿಲ್ಲ. ಈ ವಿಷಯದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಬೇಲಕು’ ಎಂದು ಅರ್ಜಿಯೊಂದು ಸಲ್ಲಿಕೆ ಆಗಿತ್ತು.
ಇದರ ವಿಚಾರಣೆ ನಡೆಸಿದ ನ್ಯಾ. ಬಿ,ಆರ್. ಗವಾಯಿ ಅವರ ಪೀಠ, ‘ಕಳೆದ 75 ವರ್ಷದಲ್ಲಿ ಮೀಸಲಾತಿಯ ಲಾಭ ಪಡೆದ ವ್ಯಕ್ತಿ ಇತರರೊಂದಿಗೆ ಸ್ಪರ್ಧಿಸಲು ಸಮರ್ಥನಾಗಿದ್ದರೆ ಆತನನ್ನು ಮೀಸಲಾತಿಯಿಂದ ಹೊರಗಿಡಬೇಕು ಎಂದು ನಾವು ಹೇಳಿದ್ದೆವು. ಆದರೆ ಈ ಕುರಿತ ನಿರ್ಧಾರವನ್ನು ಕಾರ್ಯಾಂಗ ಮತ್ತು ಶಾಸಕಾಂಗವೇ ತೆಗೆದುಕೊಳ್ಳಬೇಕು. ರಾಜ್ಯದಲ್ಲಿ ಶಾಸಕರು ಇದ್ದಾರೆ. ಅವರೇ ಕಾನೂನು ಜಾರಿಗೆ ತರಬಹದು’ ಎಂದು ಎಂದು ಹೇಳಿತು.ಪೀಠ ಹೀಗೆ ಹೇಳುತ್ತಿದ್ದಂತೆಯೇ ಅರ್ಜಿದಾರರು ಅರ್ಜಿ ಹಿಂಪಡೆಯುವುದಾಗಿ ಹೇಳಿದರು ಹಾಗೂ ಸಂಬಂಧಿತ ಪ್ರಾಧಿಕಾರಿಗಳ ಮುಂದೆ ಅರ್ಜಿ ಸಲ್ಲಿಸುವುದಾಗಿ ತಿಳಿಸಿದರು. ಆಗ ಇದಕ್ಕೆ ಪೀಠ ಒಪ್ಪಿ ಅರ್ಜಿ ಇತ್ಯರ್ಥಗೊಳಿಸಿತು.
ಆ.1ರ ತೀರ್ಪಲ್ಲಿ ಹೇಳಿದ್ದೇನು?:ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಪ್ರತ್ಯೇಕ ಮೀಸಲಾತಿ ನೀಡುವ ಅಧಿಕಾರ ರಾಜ್ಯಗಳಿಗೆ ಇದೆ. ಎಸ್ಸಿ, ಎಸ್ಟಿಗಳಲ್ಲೇ ಹೆಚ್ಚು ದಮನಿತರನ್ನು ಗುರುತಿಸಿ ಅವರ ಕಲ್ಯಾಣಕ್ಕಾಗಿ ರಾಜ್ಯಗಳು ಈ ಕ್ರಮ ಕೈಗೊಳ್ಳಬಹುದು ಎಂದು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ಬಹುಮತದೊಂದಿಗೆ ಕಳೆದ ಆಗಸ್ಟ್‌ನಲ್ಲಿ ತೀರ್ಪು ನೀಡಿತ್ತು. ಜತೆಗೆ ’ಎಸ್ಸಿ, ಎಸ್ಟಿಗಳಲ್ಲಿ ಉಳ್ಳವರನ್ನು ಹೊರಗಿಟ್ಟು ಕೆನೆಪದರ ನೀತಿಯನ್ನು ಜಾರಿಗೆ ತರಬೇಕು’ ಎಂದು ಅಭಿಪ್ರಾಯಪಟ್ಟಿತ್ತು.