ಮೊದಲ ಹಂತದ ಲೋಕಸಭಾ ಚುನಾವಣೆ ಸಂಪನ್ನ: ಶೇ.60 ಮತ

| Published : Apr 20 2024, 01:03 AM IST / Updated: Apr 20 2024, 07:43 AM IST

ಸಾರಾಂಶ

ಪ.ಬಂಗಾಳ, ಮಣಿಪುರ, ಛತ್ತೀಸ್‌ಗಢ ಬಿಟ್ಟು ಉಳಿದ ಕಡೆ ಬಹುತೇಕ ಶಾಂತಿಯುತ ಮತದಾನ ನಡೆದಿದ್ದು, 102 ಲೋಕಸಭೆ ಕ್ಷೇತ್ರ ಜತೆ ಅರುಣಾಚಲ, ಸಿಕ್ಕಿಂ ಅಸೆಂಬ್ಲಿಗೂ ಮತದಾನ ನಡೆದಿದೆ.

 ನವದೆಹಲಿ :  7 ಹಂತದ ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಶುಕ್ರವಾರ ಚಾಲನೆ ಸಿಕ್ಕಿದ್ದು, ಮೊದಲ ಹಂತದಲ್ಲಿ 102 ಲೋಕಸಭಾ ಕ್ಷೇತ್ರಗಳಲ್ಲಿ ಸುಮಾರು ಶೇ.60ರಷ್ಟು ಮತದಾನವಾಗಿದೆ. ಮಣಿಪುರ, ಪಶ್ಚಿಮ ಬಂಗಾಳದ ಕೆಲವು ಕಡೆ ವ್ಯಾಪಕ ಹಿಂಸಾಚಾರ ನಡೆದಿದ್ದು, ಛತ್ತೀಸ್‌ಗಢದಲ್ಲಿ ನಕ್ಸಲರ ದಾಳಿಗೆ ಒಬ್ಬ ಸಿಅರ್‌ಪಿಎಫ್‌ ಯೋಧ ಸಾವನ್ನಪ್ಪಿದ್ದಾನೆ. ಉಳಿದ ಕಡೆ ಬಹುತೇಕ ಶಾಂತಿಯುತ ಚುನಾವಣೆ ನಡೆದಿದೆ.ಕಳೆದ 2019ರ ಲೋಕಸಭೆ ಚುನಾವಣೆಯಲ್ಲಿ 91 ಲೋಕಸಭೆ ಕ್ಷೇತ್ರಗಳಿಗೆ ಶೇ.69.58ರಷ್ಟು ಮತದಾನ ನಡೆದಿತ್ತು. ಅದಕ್ಕಿಂತ ಈ ಸಲ ಕಡಿಮೆ ಮತದಾನ ನಡೆದಿದೆ ಎಂದು ವಿಶ್ಲೇಷಿಸಲಾಗಿದೆ. 

ಆದರೆ ಚುನಾವಣಾ ಆಯೋಗಕ್ಕೆ ನಿಖರ ಅಂಕಿ-ಅಂಶಗಳು ಶನಿವಾರ ಬೆಳಗ್ಗೆ ಲಭ್ಯ ಆಗಲಿದ್ದು, ಆಗ ನೈಜ ಮತದಾನದ ಪ್ರಮಾಣ ಲಭ್ಯವಾಗಲಿದೆ.ಇದೇ ವೇಳೆ ಅರುಣಾಚಲ ಪ್ರದೇಶ ಹಾಗೂ ಸಿಕ್ಕಿಂ ವಿಧಾನಸಭೆ ಚುನಾವಣೆಗಳೂ ಬಹುತೇಕ ಶಾಂತಿಯುತವಾಗಿ ಮುಗಿದಿವೆ. ಎಲ್ಲ ಕಡೆ ಜೂ.4ರಂದು ಫಲಿತಾಂಶ ಪ್ರಕಟವಾಗಲಿದೆ.

ಈ ಚುನಾವಣೆಯಲ್ಲಿ ಬಿಜೆಪಿ ಹಾಗೂ ಇಂಡಿಯಾ ಕೂಟದ ಅಂಗಪಕ್ಷಗಳ ನಡುವೆ ನೇರಾನೇರ ಸ್ಪರ್ಧೆ ಬಹುತೇಕ ಕಡೆ ಏರ್ಪಟ್ಟಿದೆ. ನಿತಿನ್‌ ಗಡ್ಕರಿ ಸೇರಿ 9 ಕೇಂದ್ರ ಮಂತ್ರಿಗಳು, ಇಬ್ಬರು ಮಾಜಿ ಮುಖ್ಯಮಂತ್ರಿಗಳು, ಓರ್ವ ಮಾಜಿ ರಾಜ್ಯಪಾಲೆ ಕಣದಲ್ಲಿದ್ದರು. ಡಿಎಂಕೆಯ ಕನಿಮೋಳಿ, ದಯಾನಿಧಿ ಮಾರನ್‌, ಬಿಜೆಪಿಯ ಕೆ. ಅಣ್ಣಾಮಲೈ ಸೇರಿ ಅನೇಕರ ಭವಿಷ್ಯವು ಮತ ಪೆಟ್ಟಿಗೆಯಲ್ಲಿ ಭದ್ರವಾಗಿದೆ. ಶುಕ್ರವಾರ ಮತದಾನ ನಡೆದ 102 ಕ್ಷೇತ್ರಗಳ ಪೈಕಿ 2019ರಲ್ಲಿ ಯುಪಿಎ 45, ಎನ್‌ಡಿಎ 41 ಸ್ಥಾನ ಗೆದ್ದಿದ್ದವು.

ಎರಡನೇ ಹಂತದ ಚುನಾವಣೆ ಏ.26ರಂದು ನಡೆಯಲಿದೆ.ಚುನಾವಣೆ ನಡೆದ ರಾಜ್ಯಗಳು:

ಅರುಣಾಚಲ ಪ್ರದೇಶ, ಅಸ್ಸಾಂ, ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಮಣಿಪುರ, ಬಿಹಾರ, ಛತ್ತೀಸ್‌ಗಢ, ಮೇಘಾಲಯ, ಮಹಾರಾಷ್ಟ್ರ, ಮಧ್ಯಪ್ರದೇಶ, ಮಣಿಪುರ, ಮಿಜೋರಂ, ನಾಗಾಲ್ಯಾಂಡ್, ರಾಜಸ್ಥಾನ , ಸಿಕ್ಕಿಂ, ತ್ರಿಪುರಾ, ಉತ್ತರಾಖಂಡ , ತಮಿಳುನಾಡು, ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಪುದುಚೇರಿ.