ಪಾಕಿಸ್ತಾನದ ಲಾಹೋರ್ ನಿರ್ವಹಣಾ ವಿಜ್ಞಾನ ವಿವಿಯು (ಎಲ್‌ಯುಎಂಎಸ್) ಇದೇ ಮೊದಲ ಬಾರಿ ವಿದ್ಯಾರ್ಥಿಗಳಿಗೆ ಸಂಸ್ಕೃತ ಕೋರ್ಸ್ ಅನ್ನು ಆರಂಭಿಸಿದ್ದು, ಡಿಸೆಂಬರ್‌ನಿಂದಲೇ ತರಗತಿಗಳು ಆರಂಭವಾಗಿವೆ.
ಲಾಹೋರ್: ಪಾಕಿಸ್ತಾನದ ಲಾಹೋರ್ ನಿರ್ವಹಣಾ ವಿಜ್ಞಾನ ವಿವಿಯು (ಎಲ್‌ಯುಎಂಎಸ್) ಇದೇ ಮೊದಲ ಬಾರಿ ವಿದ್ಯಾರ್ಥಿಗಳಿಗೆ ಸಂಸ್ಕೃತ ಕೋರ್ಸ್ ಅನ್ನು ಆರಂಭಿಸಿದ್ದು, ಡಿಸೆಂಬರ್‌ನಿಂದಲೇ ತರಗತಿಗಳು ಆರಂಭವಾಗಿವೆ. 1947ರಲ್ಲಿ ದೇಶವಿಭಜನೆಯಾದ ಬಳಿಕ ಪಾಕಿಸ್ತಾನದ ಶಿಕ್ಷಣ ಸಂಸ್ಥೆಯೊಂದು ಸಂಸ್ಕೃತ ಕಲಿಕೆಯನ್ನು ಅಧಿಕೃತವಾಗಿ ಆರಂಭಿಸಿರುವುದು ಇದೇ ಮೊದಲು ಎಂಬುದು ವಿಶೇಷ.
ಜಗತ್ತಿನ ಅತ್ಯಂತ ಪುರಾತನ ಮತ್ತು ಅತಿ ಪ್ರಭಾವಿಯಾದ ಶಾಸ್ತ್ರೀಯ ಭಾಷೆ
‘ಸಂಸ್ಕೃತವು ಜಗತ್ತಿನ ಅತ್ಯಂತ ಪುರಾತನ ಮತ್ತು ಅತಿ ಪ್ರಭಾವಿಯಾದ ಶಾಸ್ತ್ರೀಯ ಭಾಷೆ. 1947ರ ವಿಭಜನೆಯ ನಂತರ ಪಾಕಿಸ್ತಾನದಲ್ಲಿ ಔಪಚಾರಿಕವಾಗಿ ಸಂಸ್ಕೃತವನ್ನು ಕಲಿಸಲಾಗುತ್ತಿರುವುದು ಅಪರೂಪ. ದಶಕಗಳ ನಂತರ ವಿವಿಯ ತರಗತಿಗಳಲ್ಲಿ ಸಂಸ್ಕೃತ ಕಲಿಕೆ ಆರಂಭವಾಗಿರುವುದು, ದಕ್ಷಿಣ ಏಷ್ಯಾದ ಬೌದ್ಧಿಕ ಮತ್ತು ಸಾಂಸ್ಕೃತಿಕ ಪರಂಪರೆಯೊಂದಿಗೆ ತೊಡಗಿಸಿಕೊಳ್ಳುವ ನವೀಕೃತ ಬದ್ಧತೆಯನ್ನು ಸೂಚಿಸುತ್ತದೆ’ ಎಂದು ವಿವಿ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.
ಅಭೂತಪೂರ್ವ ಸ್ಪಂದನೆ
ಆರಂಭದಲ್ಲಿ, ವಾರಾಂತ್ಯದಲ್ಲಿ ಮಾತ್ರ ಸಂಸ್ಕೃತ ತರಗತಿಗಳನ್ನು ನಡೆಸಲಾಗುತ್ತಿತ್ತು. ವಿದ್ಯಾರ್ಥಿಗಳು, ಸಂಶೋಧಕರು, ವಕೀಲರು, ಶಿಕ್ಷಕರು ಸೇರಿದಂತೆ ಎಲ್ಲರಿಗೂ ಇದು ಮುಕ್ತವಿತ್ತು. ಈ ತರಗತಿಗಳಿಗೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾದ ಕಾರಣ ಇದನ್ನೇ ಕೋರ್ಸ್ ರೀತಿಪರಿಚಯಿಸಲಾಗಿದೆ. ಈ ಕುರಿತು ವಿವಿಯ ಭಾಷೆ ಮತ್ತು ಸಾಹಿತ್ಯ ವಿಭಾಗದ ನಿರ್ದೇಶಕ ಅಲಿ ಉಸ್ಮಾನ್ ಖಾಸ್ಮಿ ಮಾತನಾಡಿ, ‘ಜನರ ಪ್ರತಿಕ್ರಿಯೆ ನೋಡಿದ ಬಳಿಕ ಸಂಸ್ಕೃತವನ್ನು ವಿವಿಯ ಅಧಿಕೃತ ಕೋರ್ಸ್ ಆಗಿಸಲು ನಿರ್ಧರಿಸಿದೆವು. ಸದ್ಯಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ. ಆದರೆ ಮುಂದಿನ ಕೆಲ ವರ್ಷಗಳಲ್ಲಿ ಅಧಿಕವಾಗುವ ವಿಶ್ವಾಸವಿದೆ. 2027ರ ವೇಳೆಗೆ, ನಾವು ಸಂಸ್ಕೃತವನ್ನು ವರ್ಷಪೂರ್ತಿ ಕೋರ್ಸ್ ಆಗಿ ಕಲಿಸಲು ಸಾಧ್ಯವಾಗುತ್ತದೆ’ ಎಂದಿದ್ದಾರೆ.