ಸಾರಾಂಶ
ನವದೆಹಲಿ: ತನ್ನ ವಿರುದ್ಧ ಉಗ್ರರನ್ನು ಛೂಬಿಟ್ಟ ಪಾಕಿಸ್ತಾನಕ್ಕೆ ಈಗಾಗಲೇ ಯುದ್ಧದ ಮುಖಾಂತರವಷ್ಟೇ ಅಲ್ಲದೆ, ಸಿಂಧು ನೀರನ್ನು ತಡೆಯುವ ಮೂಲಕವೂ ಉಸಿರುಗಟ್ಟಿಸಿರುವ ಭಾರತಕ್ಕೆ ಇದೀಗ ಇನ್ನೊಂದು ಮಗ್ಗುಲಲ್ಲಿ ಮುಳ್ಳಾಗಿ ಚುಚ್ಚತೊಡಗಿರುವ ಬಾಂಗ್ಲಾದೇಶಕ್ಕೂ ಅದೇ ಮಾದರಿಯಲ್ಲಿ ಬುದ್ಧಿ ಕಲಿಸುವ ಅವಕಾಶ ಒದಗಿಬಂದಿದೆ.
ಗಂಗಾ ನದಿ ಹಂಚಿಕೆ ಸಂಬಂಧ 30 ವರ್ಷಗಳ ಹಿಂದೆ ಮಾಡಿಕೊಳ್ಳಲಾಗಿದ್ದ ಒಪ್ಪಂದ 2026ರಲ್ಲಿ ಮುಕ್ತಾಯವಾಗಲಿದ್ದು, ನವೀಕರಣದ ಅಗತ್ಯವಿದೆ. ಇದಕ್ಕೆ ಎರಡೂ ದೇಶಗಳ ಒಪ್ಪಿಗೆ ಅಗತ್ಯ. ಇತ್ತ ಬಾಂಗ್ಲಾದಲ್ಲಿ ಅಧಿಕಾರದಲ್ಲಿರುವ ಮೊಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ತನ್ನ ಭಾರತ ವಿರೋಧಿ ಧೋರಣೆಗಳಿಂದ, ಪಾಕ್ ಮಾದರಿಯಲ್ಲೇ ಸಂಬಂಧವನ್ನು ಹದಗೆಡಿಸಿಕೊಳ್ಳುತ್ತಿದೆ. ಆದ್ದರಿಂದ ಅದನ್ನೂ ಪಾಕಿಸ್ತಾದಂತೆ ಬಾಯಾರಿಸಿ, ಸರಿದಾರಿಗೆ ತರುವತ್ತ ಭಾರತ ಹೆಜ್ಜೆ ಇಡುವ ನಿರೀಕ್ಷೆಯಿದೆ.
ಒಪ್ಪಂದದ ಹಿನ್ನೆಲೆ:
ಕಲ್ಕತ್ತಾ ಬಂದರು ಸದಾ ಕಾರ್ಯನಿರ್ವಹಿಸುವಂತೆ ಮಾಡಲು, ಗಂಗಾ ನದಿಯ ನೀರನ್ನು ಹೂಗ್ಲಿ ನದಿಗೆ ಹರಿಸುವ ಫರಕ್ಕಾ ಬ್ಯಾರೇಜ್ ಅನ್ನು 1975ರಲ್ಲಿ ಸಕ್ರಿಯಗೊಳಿಸಲಾಯಿತು. ಇದರಿಂದ, ಪ್ರತಿ ವರ್ಷದ ಮೊದಲಾರ್ಧದಲ್ಲಿ (ಜ.1ರಿಂದ ಮೇ.31ರ ವರೆಗೆ) ನೀರಿನ ಕೊರತೆ ಎದುರಿಸುವ ಬಾಂಗ್ಲಾಗೆ ಜಲಾತಂಕ ಉಂಟಾಯಿತು.
ಈ ಹಿನ್ನೆಲೆಯಲ್ಲಿ, ಭಾರತದಲ್ಲಿ ಎಚ್.ಡಿ. ದೇವೇಗೌಡರು ಮತ್ತು ಬಾಂಗ್ಲಾದಲ್ಲಿ ಶೇಖ್ ಹಸೀನಾ ಪ್ರಧಾನಿಯಾಗಿದ್ದ(1996) ಮೊದಲ ಅವಧಿಯಲ್ಲಿ 30 ವರ್ಷಗಳ ‘ಗಂಗಾ ಜಲ ಹಂಚಿಕೆ ಒಪ್ಪಂದ’ ಮಾಡಿಕೊಳ್ಳಲಾಗಿತ್ತು. ಇದರ ಪ್ರಕಾರ, ಫರಕ್ಕಾ ಅಣೆಕಟ್ಟಿನ ಮೂಲಕ ಗಂಗೆಯ ನೀರನ್ನು ಬಾಂಗ್ಲಾಗೆ ಹರಿಸಲಾಗುವುದು.
ಹಿಮಾಲಯದಲ್ಲಿ ಹುಟ್ಟುವ ಗಂಗಾ ನದಿಯು ಪಶ್ಚಿಮ ಬಂಗಾಳದಿಂದ ಫರಕ್ಕಾ ಅಣೆಕಟ್ಟಿನ ಮೂಲಕ ಬಾಂಗ್ಲಾವನ್ನು ಪ್ರವೇಶಿಸುತ್ತದೆ. ಈ ಮೂಲಕ, ಬರಗಾಲದ ಅವಧಿಯಲ್ಲಿ ಬಾಂಗ್ಲಾದ ದಾಹ ತಣಿಯುತ್ತದೆ.
ಬಾಂಗ್ಲಾಗೆ ಗಂಗೆ ಎಷ್ಟು ಅವಶ್ಯಕ?:
ಬಾಂಗ್ಲಾದೇಶದ ಶೇ.37ರಷ್ಟು ಭೂಪ್ರದೇಶ ಗಂಗಾ ನದಿಯ ನೀರಿನ ಮೇಲೆ ಅವಲಂಬಿತವಾಗಿದ್ದು, 5.5 ಕೋಟಿ ಜನರಿಗೆ ಗಂಗಾ ನೀರೇ ಆಧಾರ.
- ದೇವೇಗೌಡರು ಪ್ರಧಾನಿಯಾಗಿದ್ದಾಗ ಆದ ಒಪ್ಪಂದ
- ಭಾರತಕ್ಕೆ ಹೆಚ್ಚುವರಿ ನೀರು, ಹೆಚ್ಚಿನ ಲಾಭದ ಡೀಲ್
- ಭಾರತಕ್ಕೆ ಇದೀಗ ಇನ್ನೊಂದು ಮಗ್ಗುಲಲ್ಲಿ ಮುಳ್ಳಾಗಿ ಚುಚ್ಚತೊಡಗಿರುವ ಬಾಂಗ್ಲಾದೇಶ
- ಬಾಂಗ್ಲಾದೇಶಕ್ಕೂ ಅದೇ ಮಾದರಿಯಲ್ಲಿ ಬುದ್ಧಿ ಕಲಿಸುವ ಅವಕಾಶ