ಇತ್ತೀಚೆಗೆ ನೀಟ್‌ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ದಿಲ್ಲಿಯಲ್ಲಿ ಜೆನ್‌ ಝೀ (ಯುವಕರ) ಆಂದೋಲನ ನಡೆಸಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಕಾರಣರಾಗಿದ್ದ ಕಾಕ್ರೋಚ್‌ ಜನತಾ ಪಕ್ಷದ ಅಧ್ಯಕ್ಷ ಅಭಿಜಿತ್‌ ದೀಪ್ಕೆ ಈಗ ಜೆನ್‌ ಅಲ್ಫಾ (ಶಾಲಾ ಮಕ್ಕಳ) ಪರ ಆಂದೋಲನ ಆರಂಭಿಸಿದ್ದಾರೆ.

ಹಿಂಗೋಲಿ (ಮಹಾರಾಷ್ಟ್ರ) : ಇತ್ತೀಚೆಗೆ ನೀಟ್‌ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ದಿಲ್ಲಿಯಲ್ಲಿ ಜೆನ್‌ ಝೀ (ಯುವಕರ) ಆಂದೋಲನ ನಡೆಸಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಕಾರಣರಾಗಿದ್ದ ಕಾಕ್ರೋಚ್‌ ಜನತಾ ಪಕ್ಷದ ಅಧ್ಯಕ್ಷ ಅಭಿಜಿತ್‌ ದೀಪ್ಕೆ ಈಗ ಜೆನ್‌ ಅಲ್ಫಾ (ಶಾಲಾ ಮಕ್ಕಳ) ಪರ ಆಂದೋಲನ ಆರಂಭಿಸಿದ್ದಾರೆ. 80ನೇ ಸ್ವಾತಂತ್ರ್ಯ ದಿನಾಚರಣೆ ವೇಳೆ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ‘ಶಾಲೆಗಳನ್ನು ಸರಿಪಡಿಸಿ’ (ಸ್ಕೂಲ್‌ ಠೀಕ್‌ ಕರೋ) ಹೆಸರಿನ ಆಂದೋಲನಕ್ಕೆ ಚಾಲನೆ ನೀಡಿದ್ದಾರೆ.

ಇತ್ತೀಚೆಗೆ ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ಮಕ್ಕಳು ತಮ್ಮ ಶಾಲೆಗೆ ರಸ್ತೆ ಸಂಪರ್ಕ ಸರಿಯಾಗಿಲ್ಲ ಎಂದು ಪ್ರತಿಭಟಿಸಿದ್ದರು. ಮಧ್ಯಪ್ರದೇಶದ ವಿದಿಶಾದಲ್ಲಿ ಮಕ್ಕಳು ಶಾಲಾ ಫೀ ಹೆಚ್ಚಳ ವಿರುದ್ಧ ಪ್ರತಿಭಟಿಸಿದ್ದರು. ಈ ಹೋರಾಟಗಳಿಗೆ ದೀಪ್ಕೆ ಟ್ವೀಟರ್‌ನಲ್ಲಿ ಬೆಂಬಲ ಪ್ರಕಟಿಸಿದ್ದರು. ಇದರ ಬೆನ್ನಲ್ಲೇ, ದೀಪ್ಕೆ ಮತ್ತು ಅವರ ಪಕ್ಷದವರು ಸಕ್ರಿಯವಾಗಿ ಶಾಲಾ ಸಮಸ್ಯೆಗಳ ನಿವಾರಣೆಗೆ ಹೋರಾಟಕ್ಕೆ ಧಮುಕಲು ನಿರ್ಧರಿಸಿದ್ದಾರೆ.

ದೀಪ್ಕೆ ತಮ್ಮ ಹುಟ್ಟೂರಿನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ವೇಳೆ ಧ್ವಜ ಹಾರಿಸಿ ಆಂದೋಲನಕ್ಕೆ ಚಾಲನೆ ನೀಡಿದರು. ಈ ವೇಳೆ ಅವರು ಮಾತನಾಡಿ, ‘ಸರ್ಕಾರದ ನಿರ್ಲಕ್ಷ್ಯದಿಂದ ಬಡ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಖಾಸಗಿ ಶಾಲೆಗಳ ಶುಲ್ಕಕ್ಕೆ ಸರ್ಕಾರ ಮಿತಿ ಹೇರಬೇಕು. ಸರ್ಕಾರ ಖಾಸಗಿ ಶಾಲೆಗಳಿಗೆ ಲಾಭ ಮಾಡಿಕೊಡಲು ಸರ್ಕಾರಿ ಶಾಲೆಯನ್ನು ಮುಚ್ಚುತ್ತಿದೆ’ ಎಂದು ಆರೋಪಿಸಿದರು.

‘ದೇಶದ ಹಲವು ಶಾಲೆಗಳಲ್ಲಿ ಸರಿಯಾದ ಕಟ್ಟಡವಿಲ್ಲ, ಮೂಲ ಸೌಲಭ್ಯಗಳಿಲ್ಲ. ಹೀಗಾಗಿ ಅದನ್ನು ಸರಿಪಡಿಸಲು ಮುಂದಿನ ದಿನಗಳಲ್ಲಿ ಶಾಲೆಗಳನ್ನು ಸರಿಪಡಿಸಿ ಅಭಿಯಾನವನ್ನು ದೇಶವ್ಯಾಪಿ ನಡೆಸುತ್ತೇವೆ’ ಎಂದು ಹೇಳಿದರು.

ಆಸ್ಪತ್ರೆ ಬಗ್ಗೆಯೂ ಹೋರಾಟ:

ಇದೇ ವೇಳೆ ದೀಪ್ಕೆ ಮುಂದಿನ ದಿನಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿನ ಕಳಪೆ ಗುಣಮಟ್ಟದ ಕುರಿತು ಕೂಡ ದೇಶವ್ಯಾಪಿ ಇದೇ ರೀತಿ ಆಂದೋಲನ ನಡೆಸುತ್ತೇವೆ ಎಂದು ಘೋಷಿಸಿದರು.

ಏನಿದು ‘ಸ್ಕೂಲ್‌ ಠೀಕ್ ಕರೋ’ ಆಂದೋಲನ?

ಸರ್ಕಾರಿ ಶಾಲೆಗಳಿಗೆ ಸಿಜೆಪಿ ಕಾರ್ಯಕರ್ತರು ಭೇಟಿ ನೀಡಿ ಅದರ ಸ್ಥಿತಿಗತಿ ಪರಿಶೀಲಿಸಲಿದ್ದಾರೆ ಹಾಗೂ ಅವುಗಳ ಕುಂದುಕೊರತೆ ಬಗ್ಗೆ ಸರ್ಕಾರದ ಗಮನ ಸೆಳೆಯಲಿದ್ದಾರೆ. ಅದರ ಭಿವೃದ್ಧಿಗೂ ಕೈಜೋಡಿಸಲಿದ್ದಾರೆ. ಬಳಿಕ ಸಿಜೆಪಿ ತನ್ನ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಶಾಲೆಗಳ ಹಿಂದಿನ ಸ್ಥಿತಿ ಮತ್ತು ಅಭಿವೃದ್ಧಿಯ ನಂತರದ ಫೋಟೋಗಳನ್ನು ಹಂಚಿಕೊಳ್ಳಲಿದೆ.