ಸಾರಾಂಶ
ನವದೆಹಲಿ: ಪ್ರವಾಸೋದ್ಯಮ ಮೂಲಸೌಕರ್ಯಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಉತ್ತರಾಖಂಡದಲ್ಲಿ 6,811 ಕೋಟಿ ರು. ವೆಚ್ಚದ 2 ಮಹತ್ವದ ಹೊಸ ರೋಪ್‌ವೇ ಯೋಜನೆಗಳಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.
‘ಸೋನ್‌ಪ್ರಯಾಗ್- ಕೇದಾರನಾಥ್(12.9 ಕಿ.ಮೀ.) ಮತ್ತು ಹೇಮಕುಂಡ್ ಸಾಹಿಬ್- ಗೋವಿಂದಘಾಟ್(12.4 ಕಿ.ಮೀ.) ನಡುವಿನ ಈ ಯೋಜನೆಗಳನ್ನು ಮುಂದಿನ 4ರಿಂದ 6 ವರ್ಷಗಳೊಳಗೆ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಕೇಂದ್ರ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಈ ತೀರ್ಮಾನ ತೆಗೆದುಕೊಂಡಿದೆ’ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಕೇದಾರನಾಥ್‌ನಿಂದ ಸೋನ್‌ಪ್ರಯಾಗ್ ನಡುವಿನ ರೋಪ್‌ವೇ ಅನ್ನು 4,081 ಕೋಟಿ ವೆಚ್ಚದಲ್ಲಿ, ಖಾಸಗಿ ಮತ್ತು ಸರ್ಕಾರದ ಸಹಭಾಗಿತ್ವದಲ್ಲಿ ನಿರ್ಮಿಸಲಾಗುತ್ತದೆ. ಅತ್ಯಾಧುನಿಕ ಟ್ರೈಕೇಬಲ್ ಡಿಟ್ಯಾಚೇಬಲ್ ಗೊಂಡೋಲ (3ಎಸ್) ತಂತ್ರಜ್ಞಾನ ಬಳಸಿ ಇದರ ನಿರ್ಮಾಣವಾಗುತ್ತದೆ. ಪ್ರತಿ ಗಂಟೆಗೆ 1800 ಪ್ರಯಾಣಿಕರು, ಪ್ರತಿ ದಿನ ಸುಮಾರು 18 ಸಾವಿರ ಪ್ರಯಾಣಿಕರನ್ನು ಈ ಕೇಬಲ್ ಕಾರ್ ಹೊತ್ತೊಯ್ಯಲಿದೆ. ಹೇಮಕುಂಡ್ ಸಾಹಿಬ್ ಜಿ ಮತ್ತು ಗೋವಿಂದಘಾಟ್ ನಡುವಿನ ರೋಪ್‌ವೇ 2,730 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.
ರೋಪ್‌ವೇ ನಿರ್ಮಾಣದ ಲಾಭವೇನು?
ಪ್ರಸ್ತುತ ಹೇಮಕುಂಡ್‌ಗೆ ಹಾಗೂ ಕೇದಾರನಾಥ ದೇವಸ್ಥಾನಕ್ಕೆ ತೆರಳುವ ದಾರಿ ದುರ್ಗಮವಾಗಿದ್ದು, ಜನ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದರು. ನಡೆಯಲಾರದವರನ್ನು ಕುದುರೆಗಳ ಮೇಲೆ ಕೈರಿಸಿಕೊಂಡು ಅಥವಾ ಹೊತ್ತುಕೊಂಡು ಹೋಗಲಾಗುತ್ತಿತ್ತು. ಭೂಕುಸಿತ ಸಂಭವಿಸಿದಾಗ ಪರಿಸ್ಥಿತಿ ಇನ್ನೂ ಕಠಿಣವಾಗುತ್ತಿತ್ತು. ಈ ಕಷ್ಟಗಳನ್ನು ತಪ್ಪಿಸಿ, ಪ್ರಯಾಣವನ್ನು ಸುಖಕರಗೊಳಿಸಲು ಹಾಗೂ ಎಲ್ಲಾ ಹವಾಮಾನದಲ್ಲೂ ಓಡಾಡಲು ಅನುಕೂಲವಾಗಲು ಈ ರೋಪ್‌ವೇ ಸಹಕಾರಿ. ಜೊತೆಗೆ ಇದು ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯಾಗಿದ್ದು, ಪ್ರಯಾಣದ ಸಮಯವೂ ಕಡಿಮೆಯಾಗಲಿದೆ.