ಸಾರಾಂಶ
ನವದೆಹಲಿ : 2025-26ರ ಮಾರುಕಟ್ಟೆ ಋತುವಿನಲ್ಲಿ ವಿವಿಧ ಖಾರಿಫ್ ಬೆಳೆ (ಮುಂಗಾರಿನಲ್ಲಿ ಬೆಳೆಯುವ ಬೆಳೆಗಳು)ಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಹೆಚ್ಚಳಕ್ಕೆ ಪ್ರಧಾನಿ ಮೋದಿ ನೇತೃತ್ವದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿ ಅನುಮೋದನೆ ನೀಡಿದೆ.
ಭಾರತದ ಒಟ್ಟು ವಾರ್ಷಿಕ ಆಹಾರ ಧಾನ್ಯ ಉತ್ಪಾದನೆಯ ಶೇ.50ಕ್ಕಿಂತ ಹೆಚ್ಚು ಕೊಡುಗೆ ನೀಡುವ ಖಾರಿಫ್ ಬೆಳೆಗಳ ಬಿತ್ತನೆಗೆ ಉತ್ತೇಜನ ನೀಡುವ ಹಿನ್ನೆಲೆಯಲ್ಲಿ ಈ ಘೋಷಣೆ ಮಾಡಲಾಗಿದೆ. ಹೊಸ ನಿರ್ಣಯದ ಪ್ರಕಾರ, ಸಾಮಾನ್ಯ ಮತ್ತು ಎ ದರ್ಜೆಯ ಭತ್ತದ ತಳಿಗಳ ಬೆಂಬಲ ಬೆಲೆಯನ್ನು ತಲಾ 69 ರು. ಹೆಚ್ಚಿಸಲಾಗಿದ್ದು, ಕ್ರಮವಾಗಿ ಕ್ವಿಂಟಲ್‌ಗೆ 2,369 ರು. ಮತ್ತು 2389 ರು.ಗಳಿಗೆ ತಲುಪಿವೆ.
ರಾಗಿಯ ಬೆಂಬಲ ಬೆಲೆಯನ್ನು ಕ್ವಿಂಟಲ್‌ಗೆ 596 ರು.ಗಳಿಂದ 4,886 ರು.ಗಳಿಗೆ, ಜೋಳ (ಹೈಬ್ರಿಡ್) 328 ರು.ಗಳಿಂದ 3,699 ರು.ಗಳಿಗೆ, ಸಾಮಾನ್ಯ ಜೋಳ 175 ರು.ಗಳಿಂದ 2,400 ರು.ಗಳಿಗೆ (ಶೇ.59), ಬಾಜ್ರಾ 150 ರು.ಗಳಿಂದ 2,775 ರು.ಗಳಿಗೆ (ಶೇ.63) ಮತ್ತು ಮಾಲ್ದಾನಿ (ಮೆಕ್ಕೆಜೋಳ) ಕ್ವಿಂಟಲ್‌ಗೆ 3,749 ರು.ಗಳಿಗೆ ಹೆಚ್ಚಿಸಲಾಗಿದೆ. ದ್ವಿದಳ ಧಾನ್ಯಗಳ ಬೆಂಬಲ ಬೆಲೆಯನ್ನು ಶೇ.5.96 ಹಾಗೂ ಎಣ್ಣೆ ಬೀಜಗಳ ಬೆಲೆಯನ್ನು ಶೇ.9ರವರೆಗೆ ಏರಿಸಲಾಗಿದೆ.
ತೊಗರಿ ಬೆಂಬಲ ಬೆಲೆಯನ್ನು ಕ್ವಿಂಟಲ್‌ಗೆ 450 ರು.ಗಳಿಂದ 8,000 ರು.ಗಳಿಗೆ (ಶೇ.59), ಉದ್ದಿನ ಬೇಳೆ 400 ರು.ಗಳಿಂದ 7,400 ರು.ಗಳಿಗೆ (ಶೇ.53) ಮತ್ತು ಹೆಸರು ಬೇಳೆ 86 ರು.ಗಳಿಂದ 8,768 ರು.ಗಳಿಗೆ ಹೆಚ್ಚಿಸಲಾಗಿದೆ.
ಅದೇ ರೀತಿ, ಕಡಲೆಕಾಯಿ ಬೆಂಬಲ ಬೆಲೆ 480 ರು.ಗಳಿಂದ 7,263 ರು.ಗಳಿಗೆ, ಸೋಯಾಬೀನ್ 436 ರು.ಗಳಿಂದ 5,329 ರು.ಗಳಿಗೆ, ಸೂರ್ಯಕಾಂತಿ ಬೀಜ 441 ರು.ಗಳಿಂದ 7,721 ರು.ಗಳಿಗೆ ಹೆಚ್ಚಳವಾಗಿದೆ.ಎಳ್ಳಿನ ಕನಿಷ್ಠ ಬೆಂಬಲ ಬೆಲೆಯನ್ನು ಕ್ವಿಂಟಲ್‌ಗೆ 579 ರು.ಗಳಷ್ಟು ಹೆಚ್ಚಿಸಿದ್ದು, 9846 ರು.ಗಳಿಗೆ ತಲುಪಿದೆ. ನೈಜರ್ ಬೀಜದ ಬೆಂಬಲ ಬೆಲೆ 820 ರು.ಗಳಷ್ಟು ಹೆಚ್ಚಳವಾಗಿ 9,537 ರು.ಗಳಿಗೆ ತಲುಪಿದೆ.
ವಾಣಿಜ್ಯ ಬೆಳೆಗಳ ಪೈಕಿ, ಹತ್ತಿಯ ಕನಿಷ್ಠ ಬೆಂಬಲ ಬೆಲೆಯನ್ನು ಕ್ವಿಂಟಲ್‌ಗೆ 589 ರು.ಗಳಷ್ಟು ಹೆಚ್ಚಿಸಲಾಗಿದ್ದು, ಮಧ್ಯಮ ಗಾತ್ರದ ಹತ್ತಿ ಬೆಲೆ 7,710 ರು. ಮತ್ತು ಉದ್ದದ ಹತ್ತಿ ಬೆಲೆ 8,110 ರು.ಗಳಿಗೆ ತಲುಪಿದೆ.