ಸಾರಾಂಶ
ಸೂರತ್ : 200 ಕೋಟಿ ರು. ಆಸ್ತಿ ಮೌಲ್ಯ ಹೊಂದಿದುವ ಜೈನ ಧರ್ಮಕ್ಕೆ ಸೇರಿದ ದಂಪತಿ ತಮ್ಮೆಲ್ಲ ಆಸ್ತಿಯನ್ನು ದಾನ ಮಾಡಿ , ಬದುಕಿನ ಮೋಕ್ಷ ಸಾಧನೆಗಾಗಿ ಸನ್ಯಾಸತ್ವ ಸ್ವೀಕರಿಸಿರುವ ಪ್ರಸಂಗ ಗುಜರಾತ್ ನಲ್ಲಿ ನಡೆದಿದೆ.
ಹೀಮಂತ್ ನಗರದ ಕಟ್ಟಡ ಉದ್ಯಮಿಯಾಗಿರುವ ಉದ್ಯಮಿ ಭವೇಶ್ ಭಂಡಾರಿ ಮತ್ತು ಆತನ ಪತ್ನಿ ಫೆಬ್ರವರಿ ತಿಂಗಳಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ತಮ್ಮಲ್ಲಿದ್ದ ಅಂದಾಜು 200 ಕೋಟಿ ರು. ಸಂಪತ್ತು ದಾನ ಮಾಡಿದ್ದು, ಈ ತಿಂಗಳ 22ರಂದು ನಡೆಯುವ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಸನ್ಯಾಸತ್ವ ಸ್ವೀಕರಿಸಲಿದ್ದಾರೆ. ಭಂಡಾರಿ ಕುಟುಂಬದ ಈ ನಡೆ ಗುಜರಾತ್ ನಾದ್ಯಂತ ಗಮನ ಸೆಳೆದಿದೆ.
ಭವೇಶ್ ದಂಪತಿಯ 19 ವರ್ಷದ ಮಗ ಮತ್ತು 16 ವರ್ಷದ ಮಗಳು 2022 ರಲ್ಲಿ ಸನ್ಯಾಸ ಜೀವನವನ್ನು ಸ್ವೀಕರಿಸಿದ್ದರು. ಮಕ್ಕಳಿಂದ ಪ್ರೇರಣೆ ಪಡೆದು ಇದೀಗ ಇಬ್ಬರೂ ಕೂಡ ಅದೇ ಹಾದಿ ತುಳಿದಿದ್ದಾರೆ.ಇದೇ ತಿಂಗಳ 22 ರಂದು ಭವೇಶ್ ದಂಪತಿಯ ಸನ್ಯಾಸ ದೀಕ್ಷೆ ಕಾರ್ಯಕ್ರಮ ನಡೆಯಲಿದೆ.
ಸನ್ಯಾಸತ್ವ ಸ್ವೀಕರಿಸಿದ ನಂತರ ತಮ್ಮ ಕುಟುಂಬದೊಂದಿಗೆ ದಂಪತಿ ಎಲ್ಲ ಸಂಬಂಧವನ್ನು ಕಡಿದುಕೊಳ್ಳುತ್ತಾರೆ. ಬೆಲೆಬಾಳುವ ಯಾವುದೇ ವಸ್ತುವನ್ನು ಅವರು ಹೊಂದುವಂತಿಲ್ಲ. ಎರಡು ಬಿಳಿ ಬಟ್ಟೆಗಳನ್ನು ಜೊತೆಗೆ ಭಿಕ್ಷೆಗೆ ಒಂದು ಪಾತ್ರೆಯನ್ನು ನೀಡಲಾಗುತ್ತದೆ. ದೀಕ್ಷೆ ಸ್ವೀಕಾರ ಮಾಡಿ ಸನ್ಯಾಸಿಗಳಾದವರು ಆ ನಂತರ ಜೀವನದುದ್ದಕ್ಕೂ ಬರಿಗಾಲಿನಲ್ಲಿ ನಡೆಯುತ್ತಾರೆ. ಮತ್ತು ಭಿಕ್ಷೆ ಮೂಲಕ ಜೀವನ ನಡೆಸುತ್ತಾರೆ. ಈ ದಂಪತಿಗಳು ಕೂಡ ಅದೇ ನಿಯಮ ಪಾಲಿಸಲಿದ್ದಾರೆ.