ಗುಜರಾತ್‌ನಲ್ಲಿ ಕಾಣಿಸಿಕೊಂಡಿರುವ ಚಾಂದಿಪುರ ಸೋಂಕಿಗೆ ಭಾನುವಾರ ಮತ್ತೆ ಐವರು ಮೃತಪಟ್ಟಿದ್ದಾರೆ.

ಅಹಮದಾಬಾದ್‌: ಗುಜರಾತ್‌ನಲ್ಲಿ ಕಾಣಿಸಿಕೊಂಡಿರುವ ಚಾಂದಿಪುರ ಸೋಂಕಿಗೆ ಭಾನುವಾರ ಮತ್ತೆ ಐವರು ಮೃತಪಟ್ಟಿದ್ದಾರೆ. ಇದರಿಂದಾಗಿ ಈವರೆಗೆ ಸೋಂಕಿಗೆ ಬಲಿಯಾದವರ ಸಂಖ್ಯೆ 32ಕ್ಕೆ ಏರಿಕೆಯಾಗಿದೆ. ವಡೋದರಾ, ಮಹಿಸಾಗರ್‌ ಹಾಗೂ ಖೇಡಾದಲ್ಲಿ ತಲಾ ಒಂದೊಂದು ಹಾಗೂ ಬನಸ್ಕಾಂತಾದಲ್ಲಿ ಇಬ್ಬರು ಸೋಂಕಿಗೆ ಸಾವನ್ನಪ್ಪಿದ್ದಾರೆ.

ಇದೇ ವೇಳೆ ಹೊಸದಾಗಿ 13 ಜನರಲ್ಲಿ ಸೋಂಕು ದೃಢಪಟ್ಟಿದ್ದು ಒಟ್ಟು ಸೋಂಕಿತರ ಸಂಖ್ಯೆ 84ಕ್ಕೆ ತಲುಪಿದೆ.

ಈ ನಡುವೆ ಚಾಂದಿಪುರ ವೈರಸ್‌ ತಡೆಗಟ್ಟಲು ರಾಜ್ಯ ಸರ್ಕಾರ ಈಗಾಗಲೇ 1.16 ಲಕ್ಷ ಮನೆಗಳಿಗೆ ಸೋಂಕು ನಿರೋಧಕಗಳನ್ನು ಸಿಂಪಡಣೆ ಮಾಡಿದ್ದು, 19,000 ಸ್ಥಳಗಳಲ್ಲಿ ನಿರಂತರ ತಪಾಸಣೆಗಳನ್ನು ನಡೆಸುತ್ತಿದೆ.

2003-04ರಲ್ಲಿಯೂ ಕಾಣಿಸಿಕೊಂಡಿದ್ದ ಈ ಸೋಂಕು ಕಾಣಿಸಿಕೊಂಡಿತ್ತು. ಆಗ ಇದರ ಮರಣ ಪ್ರಮಾಣವು ಶೇ.76ರಷ್ಟಿತ್ತು.

ಮುನ್ನೆಚ್ಚರಿಕಾ ಕ್ರಮವಾಗಿ ಗುಜರಾತ್‌, ರಾಜಸ್ಥಾನ ಹಾಗೂ ಮಧ್ಯಪ್ರದೇಶಗಳಿಗೆ ಕಟ್ಟೆಚ್ಚರ ವಹಿಸುವಂತೆ ಕೇಂದ್ರ ಸರ್ಕಾರ ಸೂಚನೆ ಹೊರಡಿಸಿದೆ.

ಸೊಳ್ಳೆ, ನೊಣದಿಂದ ಸೋಂಕು

ಚಾಂದಿಪುರ ಸೋಂಕು ಸೊಳ್ಳೆ, ನೊಣ ಉಣ್ಣೆ ಹುಳುವಿನಿಂದ ಹರಡುವ ವೈರಸ್‌ ಆಗಿದ್ದು, ಫ್ಲೂ ರೀತಿಯದ್ದಾಗಿದೆ. ಇದಕ್ಕೆ ತುತ್ತಾದವರು ಜ್ವರ, ಕೆಮ್ಮು, ತಲೆ ನೋವು ಹಾಗೂ ಮೆದುಳು ಉರಿಯೂತದಿಂದ ಬಳಲುತ್ತಾರೆ.