ಪ್ರಧಾನಿ ನರೇಂದ್ರ ಮೋದಿ ಘೋಷಣೆ: ' ಉತ್ತಮ ಆಡಳಿತ ಮತ್ತು ಸಮೃದ್ಧ ಭಾರತಕ್ಕಾಗಿ ನನ್ನ ಜೀವನ '

| Published : Sep 23 2024, 01:18 AM IST / Updated: Sep 23 2024, 05:07 AM IST

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರು ನ್ಯೂಯಾರ್ಕ್‌ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿ, ತಮ್ಮ ಮೂರನೇ ಅವಧಿಯಲ್ಲಿ ಭಾರತವನ್ನು ಅಭಿವೃದ್ಧಿ ಶೀಲ ರಾಷ್ಟ್ರವನ್ನಾಗಿ ಮಾಡುವ ಗುರಿ ಹೊಂದಿದ್ದಾಗಿ ತಿಳಿಸಿದರು.  

ನ್ಯೂಯಾರ್ಕ್‌: ಪ್ರಧಾನಿಯಾಗಿ ನನ್ನ ಮೂರನೇ ಅವಧಿಯಲ್ಲಿ ಭಾರತವನ್ನು ಅಭಿವೃದ್ಧಿ ಶೀಲವನ್ನಾಗಿ ಮಾಡುವ ನಿಟ್ಟಿನಲ್ಲಿ ಹಲವು ಮಹತ್ವಾಕಾಂಕ್ಷೆಯ ಗುರಿ ರೂಪಿಸಿರುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ. ಅಲ್ಲದೆ ಉತ್ತಮ ಆಡಳಿತ ಮತ್ತು ಸಮೃದ್ಧ ಭಾರತಕ್ಕಾಗಿ ನನ್ನ ಜೀವನ ಮೀಸಲಿಟ್ಟಿದ್ದೇನೆ ಎಂದು ಘೋಷಿಸಿದ್ದಾರೆ.

3 ದಿನಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಭಾನುವಾರ ಇಲ್ಲಿ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಭಾರತೀಯ ಸಮುದಾಯದ ಕುರಿತು ಮೆಚ್ಚುಗೆಯ ಮಾತುಗಳನ್ನು ಆಡಿದ ಮೋದಿ, ‘ ಭಾರತದ ನಮಸ್ತೆ ಇಂದು ವಿಶ್ವವ್ಯಾಪಿಯಾಗುವುದಕ್ಕೆ ವಿದೇಶಗಳಲ್ಲಿನ ಭಾರತೀಯ ಸಮುದಾಯವೇ ಕಾರಣ. ನೀವೆಲ್ಲಾ ರಾಷ್ಟ್ರ- ದೂತರಿದ್ದಂತೆ. ನೀವು ಭಾರತದ ಪ್ರಚಾರ ರಾಯಭಾರಿಗಳು. ಇಡೀ ವಿಶ್ವಕ್ಕೆ ಎಐ ಎಂದರೆ ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌. ಆದರೆ ನಮ್ಮ ಪಾಲಿಗೆ ಅಮೆರಿಕ- ಇಂಡಿಯಾ ಸ್ಪೂರ್ತಿ ಇದ್ದಂತೆ. ಅಮೆರಿಕ ಅಧ್ಯಕ್ಷ ಬೈಡೆನ್‌ ನನ್ನನ್ನು ತಮ್ಮ ಮನೆಗೆ ಆಹ್ವಾನಿಸಿದ್ದರು. ಇದು 140 ಕೋಟಿ ಭಾರತೀಯರಿಗೆ ಸಂದ ಗೌರವ’ ಎಂದು ಹೇಳಿದರು.

ಇದೇ ವೇಳೆ ನಾವು ಭಾರತದ ಸ್ವಾತಂತ್ರ್ಯಕ್ಕಾಗಿ ಮಡಿಯದೇ ಇರಬಹುದು, ಆದರೆ ನಾವು ದೇಶಕ್ಕಾಗಿ ಜೀವಿಸಬಹುದು. ಮೊದಲ ದಿನದಿಂದಲೂ ನಾನು ನಿರ್ಧರಿಸಿದ್ದೆ, ನನ್ನ ಇಡೀ ಜೀವನವನ್ನು ಉತ್ತಮ ಆಡಳಿತ ಮತ್ತು ಸಮೃದ್ಧ ಭಾರತಕ್ಕೆ ಮೀಸಲಿಡುತ್ತೇನೆ ಎಂದು. ಅದರೆಡೆಗೆ ಇದೀಗ ನಮ್ಮ ಪಯಣ ಆರಂಭವಾಗಿದೆ. ಕಳೆದ 60 ವರ್ಷಗಳಲ್ಲೇ ಕಂಡುಕೇಳರಿಯದ ರೀತಿಯಲ್ಲಿ ದೇಶದ ಜನತೆ ನಮ್ಮ ಪರವಾಗಿ ಫಲಿತಾಂಶ ನೀಡಿ ದೇಶ ಮುನ್ನಡೆಸುವ ಹೊಣೆ ವಹಿಸಿದ್ದಾರೆ.ನನ್ನ ಮೂರನೇ ಅವಧಿಯಲ್ಲಿ ನಾನು ಮೂರು ಪಟ್ಟು ಹೆಚ್ಚು ಹೊಣೆಗಾರಿಕೆಯಿಂದ ಮುಂದುವರೆಯುತ್ತಿದ್ದೇನೆ. ನಾವು ಸಮೃದ್ಧ ಭಾರತ, ಮುನ್ನುಗ್ಗುತ್ತಿರುವ ಭಾರತ, ಅಧ್ಯಾತ್ಮ ಭಾರತ, ಮಾನವೀಯತೆ ಮೊದಲು ಭಾರತದ ಎಂಬ ಪಂಚ ತತ್ವಗಳ ಮೂಲಕ ವಿಕಸಿತ ಭಾರತ ನಿರ್ಮಾಣ ಮಾಡೋಣ ಎಂದು ಮೋದಿ ಕರೆ ಕೊಟ್ಟರು.

ಅವಕಾಶ ಸೃಷ್ಟಿ:

ಕೋಟ್ಯಂತರ ಭಾರತೀಯರ ಕನಸುಗಳೇ ಇಂದು ದೇಶವನ್ನು ಅಭಿವೃದ್ಧಿಯ ಹಾದಿಯಲ್ಲಿ ಮುನ್ನೆಡೆಸುತ್ತಿದೆ. ಭಾರತ ಇದೀಗ ಅವಕಾಶಕ್ಕಾಗಿ ಕಾಯುವುದಿಲ್ಲ, ಬದಲಾಗಿ ಅದು ಅವಕಾಶವನ್ನು ಸೃಷ್ಟಿಸುತ್ತಿದೆ. ಭಾರತ ಇಂದು ಹೊಸ ಶಕ್ತಿ ಮತ್ತು ಕನಸುಗಳಿಂದ ತುಂಬಿದೆ. ಪ್ರತಿ ದಿನ ನಾವು ಹೊಸ ಸಾಧನೆಗಳಿಗೆ ಸಾಕ್ಷಿಯಾಗುತ್ತಿದ್ದೇವೆ. ಇಂದು ಭಾರತದ ಪುರುಷರು ಮತ್ತು ಮಹಿಳಾ ಚೆಸ್‌ ತಂಡ ಒಲಿಂಪಿಯಾಡ್‌ನಲ್ಲಿ ಚಿನ್ನದ ಪದಕ ಗೆದ್ದಿದೆ. ಇದು 100 ವರ್ಷಗಳ ಇತಿಹಾಸದಲ್ಲೇ ಮೊದಲ ಘಟನೆ.ಇತ್ತೀಚೆಗೆ ಭಾರತದಲ್ಲಿ ನಡೆದ ಚುನಾವಣೆ ವಿಶ್ವದ ಇತಿಹಾಸದಲ್ಲೇ ದೊಡ್ಡದು.

ಮಾದರಿ ಆಡಳಿತ:

ನಾನು ಯಾವುದೇ ಹುದ್ದೆ ಏರುವ ಮೊದಲೇ ಅಮೆರಿಕದ 29 ರಾಜ್ಯಗಳಿಗೆ ಭೇಟಿ ನೀಡಿದ್ದೆ. ಅದೇ ರೀತಿ ಹಲವು ವರ್ಷಗಳ ಕಾಲ ಭಾರತ ಸುತ್ತಿದ್ದೆ. ಕಂಡಕಂಡಲ್ಲಿ ಮಲಗಿ, ಅಲ್ಲೇ ಊಟ ಮಾಡಿದೆ. ಅಲ್ಲಿನ ಅನುಭವಗಳನ್ನೇ ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ಜನರ ಅಭಿವೃದ್ಧಿಗೆ ಬಳಸಿದೆ. ಇದೀಗ ಪ್ರಧಾನಿಯಾಗಿ ದೇಶದ ಅಭಿವೃದ್ಧಿಗೂ ಅದನ್ನೇ ಮಾಡುತ್ತಿದ್ದೇನೆ. ನಮ್ಮ ಸರ್ಕಾರದ ಆಡಳಿತ ಇದೀಗ ಎಲ್ಲರಿಗೂ ಮಾದರಿಯಾಗಿ ಹೊರಹೊಮ್ಮಿದೆ ಎಂದು ಮೋದಿ ಹೇಳಿದರು.

ಆಡಳಿತದ ಸಾಧನೆ:

ಕಳೆದ 10 ವರ್ಷದಲ್ಲಿ 25 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. ಇಂದು ನಮ್ಮ 5ಜಿ ಮಾರುಕಟ್ಟೆ ಅಮೆರಿಕಕ್ಕಿಂತ ದೊಡ್ಡದು. ಕೇವಲ 2 ವರ್ಷಗಳಲ್ಲಿ ಇದು ಸಾಧ್ಯವಾಗಿದೆ. ಇಂದು ಜಾಗತಿಕ ವೇದಿಕೆಯಲ್ಲಿ ಭಾರತ ಮಾತನಾಡಿದರೆ ಅದನ್ನು ಇಡೀಗ ಜಗತ್ತು ಆಲಿಸುತ್ತದೆ. ನಾನು ಇದು ಯುದ್ಧದ ಸಮಯ ಅಲ್ಲ ಎಂದು ಹೇಳಿದಾಗ ಇಡೀ ಜಗತ್ತ ಅದರ ಗಂಭೀರತೆಯನ್ನು ಅರ್ಥ ಮಾಡಿಕೊಂಡಿತು ಎಂದು ಹೇಳಿದರು.