ಆರ್ಥಿಕ ಸಂಕಷ್ಟದಲ್ಲಿ ಹಿಮಾಚಲ ಸರ್ಕಾರ : ಕರೆಂಟ್‌ ಬಿಲ್‌ಗೂ ಕಾಸಿಲ್ಲ- 18 ಹೋಟೆಲ್‌ಗಳೇ ಬಂದ್‌!

| Published : Nov 22 2024, 01:21 AM IST / Updated: Nov 22 2024, 04:30 AM IST

ಸಾರಾಂಶ

ಜನರಿಗೆ ಉಚಿತ ವಿದ್ಯುತ್ ಸೇರಿ ಹಲವು ಜನಪ್ರಿಯ ಯೋಜನೆ ಜಾರಿ ಬಳಿಕ ಭಾರೀ ಆರ್ಥಿಕ ಸಂಕಷ್ಟದಲ್ಲಿ ಸಿಕ್ಕಿಬಿದ್ದಿರುವ ಹಿಮಾಚಲಪ್ರದೇಶದ ಕಾಂಗ್ರೆಸ್‌ ಸರ್ಕಾರ, ಇದೀಗ ತನ್ನದೇ ಒಡೆತನದ ಹೋಟೆಲ್‌ಗಳ ವಿದ್ಯುತ್‌ ಬಿಲ್‌ ಪಾವತಿಸಲೂ ವಿಫಲವಾಗಿದೆ.

ಶಿಮ್ಲಾ: ಜನರಿಗೆ ಉಚಿತ ವಿದ್ಯುತ್ ಸೇರಿ ಹಲವು ಜನಪ್ರಿಯ ಯೋಜನೆ ಜಾರಿ ಬಳಿಕ ಭಾರೀ ಆರ್ಥಿಕ ಸಂಕಷ್ಟದಲ್ಲಿ ಸಿಕ್ಕಿಬಿದ್ದಿರುವ ಹಿಮಾಚಲಪ್ರದೇಶದ ಕಾಂಗ್ರೆಸ್‌ ಸರ್ಕಾರ, ಇದೀಗ ತನ್ನದೇ ಒಡೆತನದ ಹೋಟೆಲ್‌ಗಳ ವಿದ್ಯುತ್‌ ಬಿಲ್‌ ಪಾವತಿಸಲೂ ವಿಫಲವಾಗಿದೆ.

ಹೀಗಾಗಿ ಬಿಳಿಯಾನೆಯಂತಾಗಿರುವ ವಿವಿಧೆಡೆ ಇರುವ ರಾಜ್ಯ ಸರ್ಕಾರಿ ಒಡೆತನದ 18 ಹೋಟೆಲ್‌ಗಳನ್ನು ಮುಚ್ಚುವಂತೆ ರಾಜ್ಯ ಹೈಕೋರ್ಟ್‌ ಆದೇಶಿಸಿದೆ. ಅಲ್ಲದೆ ವಿದ್ಯುತ್‌ ಬಿಲ್‌ ಬಾಕಿ ವಸೂಲಿಗಾಗಿ ಒಂದು ಹೋಟೆಲ್‌ ಜಪ್ತಿಗೂ ಸೂಚಿಸಿದೆ.

ಪ್ರಕರಣ ಹಿನ್ನೆಲೆ:

ಹಿಮಾಚಲಪ್ರದೇಶ ಪ್ರವಾಸೋದ್ಯಮ ಅಭಿವೃದ್ಧಿ ಇಲಾಖೆ ಹಲವು ಹೋಟೆಲ್‌ಗಳನ್ನು ನಿರ್ವಹಣೆ ಮಾಡುತ್ತಿದ್ದು 150 ಕೋಟಿ ರು. ವಿದ್ಯುತ್‌ ಬಿಲ್‌ ಪಾವತಿ ಮಾಡುವಲ್ಲಿ ವಿಫಲವಾಗಿದೆ. ಈ ಹಿನ್ನೆಲೆ ದೆಹಲಿಯಲ್ಲಿರುವ ಹಿಮಾಚಲ್‌ ಭವನ್‌ ಹೋಟೆಲ್‌ ಅನ್ನು ಜಪ್ತಿ ಮಾಡಿ ಅದನ್ನು ಮಾರಾಟ ಮಾಡಲು ಹೈಕೋರ್ಟ್‌ ಅನುಮತಿ ನೀಡಿದೆ.

ಜೊತೆಗೆ ಪ್ರವಾಸೋದ್ಯಮ ಇಲಾಖೆಯ ವ್ಯಾಪ್ತಿಯ ಬಹುತೇಕ ಹೋಟೆಲ್‌ಗಳು ನಿರ್ವಹಣೆ ಇಲ್ಲದೇ ನಷ್ಟ ಅನುಭವಿಸುತ್ತಿವೆ. ಅವೆಲ್ಲಾ ಬಿಳಿಯಾನೆಯಾಗಿವೆ. ಜನರ ತೆರಿಗೆ ದುಡ್ಡು ಈ ರೀತಿ ಪೋಲಾಗಲು ಬಿಡುವುದು ಸರಿಯಲ್ಲ. ಹೀಗಾಗಿ ಇಲಾಖೆಯ ವ್ಯಾಪ್ತಿಯ 18 ಹೋಟೆಲ್‌ಗಳನ್ನು ನ.25ರೊಳಗೆ ಮುಚ್ಚುವಂತೆ ಹೈಕೋರ್ಟ್‌ ಸೂಚಿಸಿದೆ.

ಹಣಕಾಸಿನ ಸಂಕಷ್ಟ:

ಹಲವು ಉಚಿತ ಯೋಜನೆ ಜಾರಿಗೊಳಿಸಿದ ಪರಿಣಾಮ ಹಿಮಾಚಲ ಸರ್ಕಾರದ ಸಾಲದ ಮೊತ್ತ 95000 ಕೋಟಿ ರು. ದಾಟಿದೆ. ಹೀಗಾಗಿ ಸರ್ಕಾರಿ ನೌಕರರು, ಪಿಂಚಣಿದಾರರ ವೇತನ ಪಾವತಿಯಲ್ಲಿ ಪದೇಪದೇ ವಿಳಂಬವಾಗುತ್ತಿದೆ. ಹೀಗಾಗಿ ವೇತನ, ಪಿಂಚಣಿ ಪಾವತಿ ದಿನಾಂಕ ಬದಲಾವಣೆ ಮಾಡಲಾಗಿದೆ. ಜೊತೆಗೆ ಕೆಲ ತಿಂಗಳ ಹಿಂದೆ ಸಿಎಂ, ಸಚಿವರ ವೇತನ ಪಾವತಿಯನ್ನೂ ಮುಂದೂಡಲಾಗಿತ್ತು. ಪಕ್ಷಾಂತರ ಕಾಯ್ದೆಯಡಿ ವಜಾಗೊಂಡ ಶಾಸಕರ ಪಿಂಚಣಿ ಸ್ಥಗಿತಕ್ಕೂ ಸರ್ಕಾರ ನಿರ್ಧರಿಸಿತ್ತು. ಅಲ್ಲದೆ ಉಚಿತ ವಿದ್ಯುತ್‌ ಪ್ರಮಾಣವನ್ನೂ ಕಡಿತ ಮಾಡಿತ್ತು.