ಮಹಾರಾಷ್ಟ್ರದಲ್ಲೂ ಈಗ ಹಿಂದಿ ಹೇರಿಕೆ ವಿವಾದ : ಕೇಂದ್ರ ಸರ್ಕಾರದ ಜತೆ ತೊಡೆತಟ್ಟಿರುವ ದಕ್ಷಿಣದ ರಾಜ್ಯಗಳು

| N/A | Published : Apr 18 2025, 01:56 AM IST / Updated: Apr 18 2025, 04:19 AM IST

ಸಾರಾಂಶ

ಹಿಂದಿ ಹೇರಿಕೆ ವಿರೋಧಿಸಿ ಕೇಂದ್ರ ಸರ್ಕಾರದ ಜತೆ ದಕ್ಷಿಣದ ರಾಜ್ಯಗಳು ತೊಡೆತಟ್ಟಿರುವ ಮಧ್ಯೆಯೇ ಮಹಾರಾಷ್ಟ್ರ ಸರ್ಕಾರ 1-5ನೇ ತರಗತಿಯ ಮಕ್ಕಳಿಗೆ 3ನೇ ಭಾಷೆಯಾಗಿ ಹಿಂದಿ ಕಲಿಕೆಯನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿರುವುದು ವಿವಾದಕ್ಕೆ ಕಾರಣವಾಗಿದೆ. 

 ಮುಂಬೈ: ಹಿಂದಿ ಹೇರಿಕೆ ವಿರೋಧಿಸಿ ಕೇಂದ್ರ ಸರ್ಕಾರದ ಜತೆ ದಕ್ಷಿಣದ ರಾಜ್ಯಗಳು ತೊಡೆತಟ್ಟಿರುವ ಮಧ್ಯೆಯೇ ಮಹಾರಾಷ್ಟ್ರ ಸರ್ಕಾರ 1-5ನೇ ತರಗತಿಯ ಮಕ್ಕಳಿಗೆ 3ನೇ ಭಾಷೆಯಾಗಿ ಹಿಂದಿ ಕಲಿಕೆಯನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಇದಕ್ಕೆ ಪ್ರತಿಪಕ್ಷಗಳು ಕಿಡಿಕಾರಿದ್ದರೆ, ಸರ್ಕಾರ ಸಮರ್ಥಿಸಿಕೊಂಡಿದೆ.

ಹಿಂದಿ ಕಲಿಕೆಯು ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020ರ ಜಾರಿಯ ಭಾಗವಾಗಿದೆ. ಮಹಾರಾಷ್ಟ್ರದಲ್ಲಿ ಸದ್ಯ 1ರಿಂದ 4ನೇ ತರಗತಿ ವಿದ್ಯಾರ್ಥಿಗಳಿಗೆ ಮೊದಲ ಭಾಷೆಯಾಗಿ ಮರಾಠಿ ಮತ್ತು ದ್ವಿತೀಯ ಭಾಷೆಯಾಗಿ ಇಂಗ್ಲಿಷ್‌ ಮಾತ್ರ ಕಡ್ಡಾಯವಾಗಿದೆ. ಇನ್ನು ಮುಂದೆ ಹಿಂದಿಯನ್ನು ಕೂಡ ಕಡ್ಡಾಯಗೊಳಿಸಲಾಗುತ್ತಿದೆ. ಅದು 3ನೇ ಭಾಷೆಯಾಗಿ 1ರಿಂದ 4ನೇ ತರಗತಿ ಮಕ್ಕಳ ಜತೆಗೆ 5ನೇ ತರಗತಿಯ ಮಕ್ಕಳಿಗೂ (ಒಟ್ಟಾರೆ 1ರಿಂದ 5ನೇ ತರಗತಿ) 2025-26ರಿಂದಲೇ ಜಾರಿಗೆ ಬರಲಿದೆ. ಇದರಿಂದ ತ್ರಿಭಾಷಾ ಸೂತ್ರ ಜಾರಿಗೆ ಈ ತರಗತಿಗಳಿಗೆ ಬಂದಂತಾಗಲಿದೆ.

ಇನ್ನು ರಾಷ್ಟ್ರೀಯ ಶಿಕ್ಷಣ ನೀತಿಯು (ಎನ್‌ಇಪಿ) 1ನೇ ತರಗತಿಗೆ ಈ ನೀತಿ 2025-26ನೇ ಸಾಲಿನಿಂದ ಜಾರಿಗೆ ಬರಲಿದ್ದು 2, 3, 4 ಮತ್ತು 6ನೇ ಕ್ಲಾಸಿಗೆ 2026-27ನೇ ಸಾಲಿನಿಂದ, 5,9 ಮತ್ತು 11ನೇ ಕ್ಲಾಸ್‌ ಮಕ್ಕಳಿಗೆ 2027-28ನೇ ಸಾಲಿನಿಂದ ಹಾಗೆ 8, 10 ಮತ್ತು 12ನೇ ತರಗತಿಯ ಮಕ್ಕಳಿಗೆ 2028-29ರಿಂದ ಅನ್ವಯವಾಗಲಿದೆ ಎಂದು ಸರ್ಕಾರದ ಆದೇಶ ಹೇಳಿದೆ.

ವಿಪಕ್ಷ ಕಿಡಿ- ಸರ್ಕಾರ ಸಮರ್ಥನೆ:

ಹಿಂದಿ ಕಡ್ಡಾಯದ ಸರ್ಕಾರದ ಕ್ರಮದ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್‌ ನಾಯಕ ವಿಜಯ ವಡೆಟ್ಟಿವಾರ್ ಕಿಡಿಕಾರಿದ್ದು, ‘ಇದು ಮರಾಠಿ ಅಸ್ಮಿತೆಯ ವಿರುದ್ಧವಾಗಿದೆ, ಹಿಂದಿ ಹೇರಿಕೆ ಸರಿಯಲ್ಲ’ ಎಂದಿದ್ದಾರೆ.

ಮರಾಠಿಯ ಪ್ರಬಲ ಪ್ರತಿಪಾದಕ ಎಂಎನ್‌ಎಸ್‌ ನಾಯಕ ರಾಜ್ ಠಾಕ್ರೆ ಮಾತನಾಡಿ, ‘ನಾವು ಹಿಂದೂಗಳೇ ವಿನಾ ಹಿಂದಿಗಳಲ್ಲ. ಸರ್ಕಾರದ ನಡೆಯು ಮರಾಠಿಗರು ಹಾಗೂ ಮರಾಠಿಯೇತರರ ನಡುವೆ ಜಗಳ ಸೃಷ್ಟಿಸುವ ಕುತಂತ್ರ’ ಎಂದಿದ್ದಾರೆ.

ಆದರೆ ಸಿಎಂ ದೇವೇಂದ್ರ ಫಡ್ನವೀಸ್‌ ವಿಪಕ್ಷಗಳ ಆಕ್ಷೇಪ ತಳ್ಳಿಹಾಕಿದ್ದು, ‘ಹಿಂದಿ ರಾಷ್ಟ್ರಮಟ್ಟದ ಭಾಷೆ. ಹೀಗಾಗಿ ಅದರ ಕಲಿಕೆ ಅಗತ್ಯ ಎಂಬ ಕಾರಣ ಅದನ್ನು ಎನ್‌ಇಪಿ ಅಡಿಯಲ್ಲಿ ಅಳವಡಿಸಲಾಗಿದೆ. ನಾವೇನೂ ಹೇರಿಕೆ ಮಾಡುತ್ತಿಲ್ಲ’ ಎಂದಿದ್ದಾರೆ.