ಸಾರಾಂಶ
ನವದೆಹಲಿ : ವಿಧೇಯಕಗಳ ಕುರಿತು ನಿರ್ಧರಿಸಲು ರಾಷ್ಟ್ರಪತಿಗಳಿಗೆ ಕಾಲಮಿತಿ ನಿಗದಿಪಡಿಸಿದ ಸುಪ್ರೀಂ ಕೋರ್ಟ್ ಆದೇಶಕ್ಕೆ ಉಪರಾಷ್ಟ್ರಪತಿ ಜಗದೀಪ್ ಧನಕರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ನ್ಯಾಯಾಧೀಶರು ಸೂಪರ್ ಪಾರ್ಲಿಮೆಂಟ್‌ನಂತೆ ಕೆಲಸ ಮಾಡುವುದು ಸರಿಯಲ್ಲ. ರಾಷ್ಟ್ರಪತಿಗಳದ್ದು ಉನ್ನತ ಹುದ್ದೆ. ಅವರಿಗೆ ಕಾಲಮಿತಿ ನಿಗದಿ ಸರಿಯಲ್ಲ. ಪ್ರಜಾಸತ್ತಾತ್ಮಕ ಶಕ್ತಿಗಳ ಮೇಲೆ ಸುಪ್ರೀಂಕೋರ್ಟ್ ಅಣ್ವಸ್ತ್ರ ಕ್ಷಿಪಣಿ ಪ್ರಯೋಗಿಸುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ದೆಹಲಿ ಹೈಕೋರ್ಟ್ ಜಡ್ಜ್ ಮನೆಯಲ್ಲಿ ಸುಟ್ಟ ಹಣದ ಕಂತೆಗಳು ಪತ್ತೆಯಾದರೂ ಎಫ್‌ಐಆರ್ ದಾಖಲು ಮಾಡದಿರುವುದನ್ನು ಅವರು ಪ್ರಶ್ನೆ ಮಾಡಿದ್ದಾರೆ.
ತಮಿಳುನಾಡು ರಾಜ್ಯಪಾಲ ಮತ್ತು ತಮಿಳುನಾಡು ಸರ್ಕಾರ ನಡುವಿನ ಸಂಘರ್ಷದ ಪ್ರಕರಣದಲ್ಲಿ ಯಾವುದೇ ವಿಧೇಯಕಗಳ ಕುರಿತು ನಿರ್ಧಾರ ತೆಗೆದುಕೊಳ್ಳಲು ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳಿಗೆ 3 ತಿಂಗಳ ಕಾಲಮಿತಿಯನ್ನು ಸುಪ್ರೀಂ ಕೋರ್ಟ್ ನಿಗದಿಪಡಿಸಿತ್ತು. ಈ ವಿಷಯವನ್ನು ಅವರು ಜಡ್ಜ್ ಮನೆಯಲ್ಲಿ ಹಣ ಸಿಕ್ಕ ಪ್ರಕರಣದ ಜತೆ ಸಮೀಕರಿಸಿ ವಾಗ್ದಾಳಿ ನಡೆಸಿದ್ದಾರೆ.
ರಾಷ್ಟ್ರಪತಿಗೆ ಆದೇಶಿಸುವುದು ಸರಿಯೆ?:
ಗುರುವಾರ ರಾಜ್ಯಸಭಾ ಇಂಟರ್ನಿಗಳ 6ನೇ ಬ್ಯಾಚ್ ಅನ್ನು ಉದ್ದೇಶಿಸಿ ಮಾತನಾಡಿ ಈ ವಿಚಾರ ಪ್ರಸ್ತಾಪಿಸಿದ ಧನಕರ್, ‘ಹಾಗಿದ್ದರೆ ನಮ್ಮಲ್ಲಿ ಕಾನೂನು ರಚಿಸುವ, ಕಾರ್ಯಾಂಗದ ಜವಾಬ್ದಾರಿ ನಿರ್ವಹಿಸುವ ಮತ್ತು ಸೂಪರ್ ಪಾರ್ಲಿಮೆಂಟ್ ಆಗಿ ಕೆಲಸ ಮಾಡುವ ನ್ಯಾಯಾಧೀಶರಿದ್ದಾರೆ ಎಂದಾಯ್ತು. ಆದರೆ ಇವರಿಗೆ (ಜಡ್ಜ್‌ಗಳಿಗೆ) ಮಾತ್ರ ಈ ನೆಲದ ಕಾನೂನು ಅನ್ವಯಿಸುವುದಿಲ್ಲ’ ಎಂದು ಕಿಡಿಕಾರಿದರು.
‘ರಾಷ್ಟ್ರಪತಿಗಳದ್ದು ಉನ್ನತ ಹುದ್ದೆ. ಅವರು ಸಂವಿಧಾನವನ್ನು ಉಳಿಸುವ, ರಕ್ಷಿಸುವ ಮತ್ತು ಸಮರ್ಥಿಸಿಕೊಳ್ಳುವುದಾಗಿ ಪ್ರಮಾಣವಚನ ಸ್ವೀಕರಿಸಿದರೆ ಸಚಿವರು, ಉಪರಾಷ್ಟ್ರಪತಿಗಳು, ಸಂಸದರು ಮತ್ತು ನ್ಯಾಯಾಧೀಶರು ಸಂವಿಧಾನಬದ್ಧವಾಗಿ ಕೆಲಸ ಮಾಡುವ ಪ್ರಮಾಣ ಸ್ವೀಕರಿಸುತ್ತಾರೆ. ರಾಷ್ಟ್ರಪತಿಗಳಿಗೆ ಈ ರೀತಿ ನಿರ್ದೇಶನ ನೀಡುವುದು ಸರಿಯಲ್ಲ’ ಎಂದು ತಿಳಿಸಿದರು.
‘ಸಂವಿಧಾನದ 142ನೇ ವಿಧಿ ಸುಪ್ರೀಂ ಕೋರ್ಟಿಗೆ ಪೂರ್ಣಾಧಿಕಾರ ನೀಡುತ್ತದೆ. ಅದನ್ನು ಪ್ರಜಾಸತ್ತಾತ್ಮಕ ಶಕ್ತಿಗಳ ವಿರುದ್ಧ ಅಣ್ವಸ್ತ್ರ ಕ್ಷಿಪಣಿಗಳಂತೆ ದಿನದ 24 ಗಂಟೆಯೂ ಬಳಸುವ ಅಧಿಕಾರ ಕೋರ್ಟ್‌ಗೆ ಲಭಿಸುತ್ತದೆ. ಇದನ್ನೇ ಬಳಸಿಕೊಂಡು ಅವರು ಸೂಪರ್ ಪಾರ್ಲಿಮೆಂಟ್ ಥರ ವರ್ತಿಸುತ್ತಾರೆ. ಏಕೆಂದರೆ ಅವರಿಗೆ ಯಾವುದೇ ನಿಯಮಗಳಿಗೆ ಅವರ ಬಾಧ್ಯಸ್ಥರಾಗಿರುವುದಿಲ್ಲ. ಯಾವ ಕಟ್ಟಳೆಗಳೂ ಅವರಿಗೆ ಅನ್ವಯ ಆಗುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಇದೇ 142ನೇ ವಿಧಿ ಮೂಲಕ ಕೋರ್ಟು ರಾಷ್ಟ್ರಪತಿಗೂ ಆದೇಶ ನೀಡಿದೆ. ನಾವು ಎತ್ತ ಸಾಗುತ್ತಿದ್ದೇವೆ? ಇಂಥದ್ದನ್ನು ನಾನು ನೋಡುತ್ತೇನೆ ಎಂದುಕೊಂಡಿರಲಿಲ್ಲ. ಇದರ ವಿರುದ್ಧ ಸರ್ಕಾರ ಮರುಪರಿಶೀಲನಾ ಅರ್ಜಿ ಸಲ್ಲಿಸಬಹುದು. ಆದರೆ ವಿಷಯ ಅದಲ್ಲ. ನಾವು ಸಂವೇದನಾಶೀಲರಾಗಿರಬೇಕು’ ಎಂದರು.
ಜಡ್ಜ್ ಮೇಲೆ ಎಫ್‌ಐಆರ್ ಏಕಿಲ್ಲ?:
ಇದೇ ವೇಳೆ, ‘ದೆಹಲಿಯ ಜಡ್ಜ್ ಮನೆಯಲ್ಲಿ ನೋಟ್ ಪತ್ತೆಯಾದ ಪ್ರಕರಣ ಕುರಿತು 7 ದಿನಗಳವರೆಗೆ ಯಾರಿಗೂ ಮಾಹಿತಿ ಇರಲಿಲ್ಲ. ಮಾ.21ರಂದು ಪತ್ರಿಕೆಯೊಂದರ ವರದಿಯಿಂದಾಗಿ ಎಲ್ಲಾ ವಿಚಾರ ಬಹಿರಂಗವಾಗಿತು. ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ. ದೇಶದಲ್ಲಿ ಯಾರ ವಿರುದ್ಧ ಬೇಕಿದ್ದರೂ ಎಫ್‌ಐಆರ್ ದಾಖಲಿಸಬಹುದು. ಉಪರಾಷ್ಟ್ರಪತಿ ಸೇರಿ ಯಾವುದೇ ಸಾಂವಿಧಾನಿಕ ಹುದ್ದೆ ಮೇಲೂ ಎಫ್ಐಆರ್ ಹಾಕಬಹುದು. ಆದರೆ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಜಡ್ಜ್‌ಗಳಾದರೆ ನೇರವಾಗಿ ಎಫ್‌ಐಆರ್ ದಾಖಲಿಸುವಂತಿಲ್ಲ, ಅದಕ್ಕೆ ನ್ಯಾಯಾಂಗದ ಅನುಮತಿ ಬೇಕು’ ಎಂದು ಕಿಡಿಕಾರಿದರು.
‘ಒಂದು ವೇಳೆ ಇದೇ ಪ್ರಕರಣ ಜನಸಾಮಾನ್ಯನ ಮನೆಯಲ್ಲಿ ನಡೆದಿದ್ದರೆ ಅದರ ತನಿಖೆ ಎಲೆಕ್ಟ್ರಾನಿಕ್ ರಾಕೆಟ್ ವೇಗದಲ್ಲಿ ಸಾಗುತ್ತಿತ್ತು. ಆದರೆ ಈಗ ಜಡ್ಜ್ ಮನೆಯಲ್ಲಿ ಹಣ ಸಿಕ್ಕ ಪ್ರಕರಣ ಎತ್ತಿನ ಬಂಡಿಯಷ್ಟೂ ವೇಗದಲ್ಲೂ ಸಾಗುತ್ತಿಲ್ಲ. ತನಿಖೆ ನಡೆಸುವುದು ಕಾರ್ಯಾಂಗದ ಕೆಲಸ. ಆದರೆ ಇಲ್ಲಿ ನ್ಯಾಯಾಂಗವೇ 3 ಜಡ್ಜ್‌ಗಳ ಸಮಿತಿ ರಚಿಸಿ ತನಿಖೆ ಮಾಡುತ್ತಿದೆ. ಈ ಸಮಿತಿ ಕಾನೂನು ಪ್ರಕಾರ ರಚನೆ ಆಗಿಲ್ಲ’ ಎಂದು ಆಕ್ಷೇಪಿಸಿದರು.
‘ಒಂದು ವೇಳೆ ತನಿಖೆ ಪೂರ್ಣಗೊಂಡರೂ ಅದು ಶಿಫಾರಸು ಮಾತ್ರ ಮಾಡುತ್ತದೆ. ಯಾರಿಗೆ ಶಿಫಾರಸು ಮಾಡುತ್ತದೆ? ಏನು ಶಿಫಾರಸು ಮಾಡುತ್ತದೆ? ಇಂಥ ವರದಿಗಳಿಗೆ ಮಾನ್ಯತೆ ಇರುವುದಿಲ್ಲ. ಜಡ್ಜ್‌ಗಳ ವಿಷಯದಲ್ಲಿ ಇಂಥ ನಿಯಮಗಳಿವೆ. ಸಂಸತ್ತಿನಲ್ಲಿ ನೀವು ಪ್ರಶ್ನಿಸಬಹುದು. ಆದರೆ ಅದು ನ್ಯಾಯಾಂಗದಲ್ಲಿ ಸಾಧ್ಯವಾಗುತ್ತಿಲ್ಲ’ ಎಂದು ಧನಕರ್ ಬೇಸರಿಸಿದರು.
‘ಕಪಾಟಿನಲ್ಲಿ ಹುಳಗಳಿವೆಯೋ ಅಥವಾ ಅಸ್ಥಿಪಂಜರ ಇದೆಯೋ? ಒಂದು ತಿಂಗಳ ಮೇಲಾಯ್ತು. ಎಲ್ಲವೂ ಬಯಲಿಗೆ ಬರಲಿ. ಇದರಿಂದ ಎಲ್ಲವೂ ಸ್ವಚ್ಛವಾಗಲಿದೆ. ಸಂಸ್ಥೆಗಳಲ್ಲಿ ಪಾರದರ್ಶಕತೆ ಇರಬೇಕು. ನಿಯಮಗಳಲ್ಲಿ ಸುಧಾರಣೆ ಆಗಬೇಕು. ಆದರೆ ನ್ಯಾಯಾಂಗದ ಸ್ವಾತಂತ್ರ್ಯತೆ ನೆಪದಲ್ಲಿ ಹಲವು ಕ್ರಮಗಳಿಗೆ ತಡೆ ನೀಡಲಾಗಿದೆ. ಲೋಕಪಾಲರಿಗೆ ಹೈಕೋರ್ಟ್ ಜಡ್ಜ್‌ಗಳ ವಿರುದ್ಧ ತನಿಖೆ ನಡೆಸುವ ಅಧಿಕಾರವಿತ್ತು. ಅದಕ್ಕೂ ಬ್ರೇಕ್ ಹಾಕಲಾಗಿದೆ’ ಎಂದರು.