ರಾಜತಾಂತ್ರಿಕ ಬಿಕ್ಕಟ್ಟು - ಕೆನಡಾದಲ್ಲಿ ಹಿಂದೂಗಳಿಗೆ ಭಯದ ವಾತಾವರಣ : ಸಂಸದ ಆರ್ಯ

| Published : Oct 21 2024, 12:50 AM IST / Updated: Oct 21 2024, 04:48 AM IST

ಸಾರಾಂಶ

‘ಕೆನಡಾದಲ್ಲಿ ಖಲಿಸ್ತಾನಿ ಪರ ಹೋರಾಟದ ಜತೆಗೆ ಭಾರತ ಮತ್ತು ಕೆನಡಾದ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಹೆಚ್ಚಾಗುತ್ತಿದೆ.

ಒಟ್ಟಾವಾ: ‘ಕೆನಡಾದಲ್ಲಿ ಖಲಿಸ್ತಾನಿ ಪರ ಹೋರಾಟದ ಜತೆಗೆ ಭಾರತ ಮತ್ತು ಕೆನಡಾದ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಹೆಚ್ಚಾಗುತ್ತಿದೆ. ಇದು, ಕೆನಡಾದಲ್ಲಿರುವ ಹಿಂದೂಗಳಿಗೆ ಸುರಕ್ಷತೆ ಬಗ್ಗೆ ಭಯ ಕಾಡುವಂತೆ ಮಾಡಿದೆ’ ಎಂದು ಕೆನಡಾ ಸಂಸದರಾದ ಕನ್ನಡಿಗ ಚಂದ್ರ ಆರ್ಯ ಕಳವಳ ವ್ಯಕ್ತ ಪಡಿಸಿದ್ದಾರೆ.

ಟ್ವೀಟ್‌ ಮಾಡಿರುವ ಆರ್ಯ. ತಾವು ಕೂಡ ಅಂತಹದ್ದೇ ಭಯದ ವಾತಾವರಣವನ್ನು ಎದುರಿಸಿರುವುದಾಗಿ ಹೇಳಿದ್ದಾರೆ.

‘ಕಳೆದ ವಾರ ನಾನು ಕೆನಡಾದ ಎಡ್ಮಂಟನ್ ನಗರದಲ್ಲಿ ಹಿಂದೂ ಸಮುದಾಯದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದೆ. ನನಗೆ ರಾಯಲ್ ಕೆನಡಾ ಮೌಂಟೆಡ್‌ ಪೊಲೀಸ್‌ ಅಧಿಕಾರಿಗಳು (ಆರ್‌ಸಿಎಂಪಿ) ಭದ್ರತೆ ನೀಡಿದ್ದರು. ಅದಾಗ್ಯೂ ಖಲಿಸ್ತಾನಿ ಪ್ರತ್ಯೇಕವಾದಿ ಗುಂಪುಗಳ ಸದಸ್ಯರು ನನ್ನ ವಿರುದ್ಧ ಪ್ರತಿಭಟನೆ ನಡೆಸಿದರು. ಇದು ಭದ್ರತೆಗೆ ಆತಂಕ ತಂದೊಡ್ಡುವ ಬೆಳವಣಿಗೆ’ ಎಂದಿದ್ದಾರೆ.

ಪದ್ಮನಾಭ ದೇಗುಲ ಕಂಚಿನ ಪಾತ್ರೆ ಕಳವು: ನಾಲ್ವರ ಬಂಧನ

ತಿರುವನಂತಪುರ: ಕೇರಳದ ಪ್ರಸಿದ್ಧ ಅನಂತ ಪದ್ಮನಾಭ ಸ್ವಾಮಿ ದೇಗುಲದಲ್ಲಿ ಪ್ರಾಚೀನ ಕಾಲದಿಂದಲೂ ಪೂಜೆಗೆ ಬಳಸುತ್ತಿದ್ದ ಸಾಂಪ್ರಾದಾಯಿಕ ಕಂಚಿನ ಪಾತ್ರೆಯನ್ನು ಕದ್ದ ಆರೋಪದಡಿ ಹರ್ಯಾಣದಲ್ಲಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತರಲ್ಲಿ ಓರ್ವ ಅಸ್ಟ್ರೇಲಿಯಾ ಪ್ರಜೆ ಇದ್ದು, ವೈದ್ಯ ವೃತ್ತಿಯಲ್ಲಿದ್ದಾರೆ ಎಂಬುದನ್ನು ಪೊಲೀಸರು ತಿಳಿಸಿದ್ದಾರೆ.

‘ಉರುಳಿ’ ಎಂಬ ಕಂಚಿನ ಪಾತ್ರೆಯನ್ನು ಪ್ರಾಚೀನ ಕಾಲದಿಂದಲೂ ಪೂಜೆಗಳಲ್ಲಿ ಬಳಸುತ್ತಿದ್ದು, ಅದನ್ನು ರಹಸ್ಯವಾಗಿ ಇಡಲಾಗಿತ್ತು. ಆದರೂ ಕಳೆದ ಗುರುವಾರ ಅದು ಕಳವಾಗಿತ್ತು. ಈ ಬಗ್ಗೆ ದೇಗುಲದ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡ ಪೊಲೀಸರು ಸಿಸಿ ಟೀವಿ ದೃಶ್ಯಗಳನ್ನು ಪರಿಶೀಲಿಸಿದ ನಂತರ ಹರ್ಯಾಣದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.ಆದರೆ ತಾವು ಕಳವು ಮಾಡಿಲ್ಲ. ದೇಗುಲದ ಸಿಬ್ಬಂದಿಯೊಬ್ಬರು ನಮಗೆ ಇದನ್ನು ಕೊಟ್ಟಿದ್ದಾರೆ ಎಂದು ಬಂಧಿತರು ಹೇಳಿದ್ದಾರೆ.

ಪನ್ನು ಹತ್ಯೆ ಯತ್ನದಲ್ಲಿ ನನ್ನ ಪಾತ್ರವಿಲ್ಲ: ವಿಕಾಶ್‌ ಯಾದವ್‌

ನವದೆಹಲಿ: ‘ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್‌ ಪನ್ನು ಹತ್ಯೆಗೆ ಅಮೆರಿಕದಲ್ಲಿ ನಡೆದಿದೆ ಎನ್ನಲಾದ ಸಂಚಿನಲ್ಲಿ ನಾನು ಭಾಗಿ ಆಗಿಲ್ಲ’ ಎಂದು ಪ್ರಕರಣದ ಆರೋಪಿ ಹಾಗೂ ಭಾರತ ಸರ್ಕಾರದ ಮಾಜಿ ನೌಕರ ವಿಕಾಶ್‌ ಯಾದವ್‌ ಅಜ್ಞಾತ ಸ್ಥಳದಿಂದ ಸ್ಪಷ್ಟಪಡಿಸಿದ್ದಾನೆ.ದಿಲ್ಲಿಯಿಂದ 100 ಕಿ.ಮೀ. ದೂರದಲ್ಲಿ ಈತನ ಗ್ರಾಮವಿದೆ. ಅಲ್ಲಿ ಬಂಧು ಅವಿನಾಶ್ ಯಾದವ್‌ ಅವರ ಜತೆ ಫೋನ್‌ನಲ್ಲಿ ಮಾತನಾಡಿದ ಈತ ಹತ್ಯೆಯಲ್ಲಿ ತನ್ನ ಪಾತ್ರ ಇಲ್ಲ ಎಂದಿದ್ದಾನೆ.

ವಿಕಾಶ್‌ ವಿರುದ್ಧ ಅಮೆರಿಕ ಸರ್ಕಾರ ದೋಷಾರೋಪ ಹೊರಿಸಿದ್ದು, ಆತನ ಬಂಧನಕ್ಕೆ ಬಲೆ ಬೀಸಿದೆ. ಆದರೆ ಆತ ಎಲ್ಲಿದ್ದಾನೆ ಎಂಬುದು ಈವರೆಗೂ ಪತ್ತೆ ಆಗಿಲ್ಲ.

23ಕ್ಕೆ ಬಂಗಾಳ ಕೊಲ್ಲಿಯಲ್ಲಿ ಸೈಕ್ಲೋನ್‌: ಒಡಿಶಾ, ಬಂಗಾಳ, ಆಂಧ್ರಕ್ಕೆ ಭೀತಿ

ಭುವನೇಶ್ವರ: ಬಂಗಾಳ ಕೊಲ್ಲಿಯಲ್ಲಿ ಅ.23ರಂದು ಚಂಡಮಾರುತ ಬೀಸುವ ಸಾಧ್ಯತೆ ಇದೆ. ಇದರಿಂದ ಪ.ಬಂಗಾಳ, ಒಡಿಶಾ ಹಾಗೂ ಆಂಧ್ರಪ್ರದೇಶದಲ್ಲಿ ಭಾರಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಭಾನುವಾರ ಎಚ್ಚರಿಸಿದೆ.ಅಂಡಮಾನ್‌ ಸಮುದ್ರದ ಬಳಿ ವಾಯುಭಾರ ಕುಸಿತ ಉಂಟಾಗಿದ್ದು ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತವಾಗಿ ಪರಿವರ್ತನೆ ಆಗುವ ಸಾಧ್ಯತೆಯಿದೆ. ಒಂದು ವೇಳೆ ಚಂಡಮಾರುತ ಅಪ್ಪಳಿಸಿದರೆ ಒಡಿಶಾ, ಪಶ್ಚಿಮ ಬಂಗಾಳ ಹಾಗೂ ಆಂಧ್ರಪ್ರದೇಶದ ಕರಾವಳಿ ಪ್ರದೇಶಗಳಲ್ಲಿ ಅ.23 ರಿಂದ 25ರ ವರೆಗೆ 20 ರಿಂದ 30 ಸೆ.ಮೀ ವರೆಗೂ ಭಾರೀ ಮಳೆ ಬೀಳುವ ಸಾಧ್ಯತೆಯಿದೆ ಎಂದು ಹೇಳಿದೆ.

ಇದರ ಭಾಗವಾಗಿ ಈ ಪ್ರದೇಶಗಳ ಮೀನುಗಾರರನ್ನು ಮುಂದಿನ ಆದೇಶದ ವರೆಗೆ ಸಮುದ್ರಕ್ಕೆ ಇಳಿದಂತೆ ಮುನ್ನೆಚ್ಚರಿಸಿದೆ.