ಸಾರಾಂಶ
ನವದೆಹಲಿ: ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ ಕರೆ ಪ್ರಕರಣಗಳು ಮುಂದುವರೆದಿದ್ದು, ಬೆಂಗಳೂರಿಗೆ ಹೊರಟಿದ್ದ 2 ಸೇರಿದಂತೆ ಒಟ್ಟು 7 ವಿಮಾನಗಳಿಗೆ ಮಂಗಳವಾರ ಹುಸಿ ಬಾಂಬ್ ಬೆದರಿಕೆ ಕರೆ ಮಾಡಲಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಈ ಬೆದರಿಕೆ ಹಾಕಲಾಗಿದ್ದು, ತಪಾಸಣೆ ಬಳಿಕ ಅವೆಲ್ಲಾ ಹುಸಿ ಕರೆ ಎಂದು ಖಚಿತಪಟ್ಟಿದೆ.
ಮಂಗಳವಾರ ಅಯೋಧ್ಯೆಯಿಂದ ಬೆಂಗಳೂರಿಗೆ ಹೊರಟಿದ್ದ ಏರಿಂಡಿಯಾ ಮತ್ತು ಬಾಗ್ಡೋಗ್ರಾದಿಂದ ಬೆಂಗಳೂರಿಗೆ ಹೊರಟಿದ್ದ ಅಕಾಸ ವಿಮಾನಗಳಿಗೆ ಬೆದರಿಕೆ ಕರೆ ಮಾಡಲಾಗಿತ್ತು.
ಇದಲ್ಲದೆ ದೆಹಲಿಯಿಂದ ಷಿಕಾಗೋ ಹೊರಟಿದ್ದ ಏರಿಂಡಿಯಾ ವಿಮಾನಕ್ಕೆ ಕೂಡ ಕಿಡಿಗೇಡಿಗಳು ಬಾಂಬ್ ಬೆದರಿಕೆಯೊನ್ನೊಡ್ಡಿದ್ದು, ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೆನಡಾದ ಇಕಾಲುಯಿಟ್ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಿ ತಪಾಸಣೆ ನಡೆಸಲಾಯಿತು. ಇನ್ನು ದರ್ಬಾಂಗದಿಂದ ಮುಂಬೈ ಹೊರಟಿದ್ದ ಸ್ಪೈಸ್ ಜೆಟ್ , ಸೌದಿ ಅರೇಬಿಯಾದ ದಮ್ಮಾಮ್‌ನಿಂದ ಲಖನೌಗೆ ಬರಬೇಕಿದ್ದ ಇಂಡಿಗೋ ವಿಮಾನ, ಅಮೃತಸರ- ಡೆಹ್ರಾಡೂನ್- ದೆಹಲಿಗೆ ಹೋಗುತ್ತಿದ್ದ ಅಲಯನ್ಸ್ ಏರ್ ವಿಮಾನ, ಮದುರೈನಿಂದ ಸಿಂಗಾಪೂರ್‌ಗೆ ಹೋಗುತ್ತಿದ್ದ ಏರಿಂಡಿಯಾ ವಿಮಾನಕ್ಕೆ ಬೆದರಿಕೆ ಸಂದೇಶ ಕಳಿಸಲಾಗಿತ್ತು.