ಸಾರಾಂಶ
10-12 ವರ್ಷಗಳ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 12 ಲಕ್ಷದ ವರೆಗಿನ ಆದಾಯದಲ್ಲಿ 2.60 ಲಕ್ಷ ತೆರಿಗೆ ಪಾವತಿಸಬೇಕಿತ್ತು. ಆದರೆ ಬಿಜೆಪಿ ಸರ್ಕಾರದ ಈ ಬಾರಿಯ ಬಜೆಟ್ ಬಳಿಕ 12 ಲಕ್ಷದವರೆಗಿನ ಆದಾಯಕ್ಕೆ ಒಂದೇ ಒಂದು ರುಪಾಯಿ ತೆರಿಗೆ ಕಟ್ಟಬೇಕಿಲ್ಲ! ಪ್ರಧಾನಿ ಮೋದಿ
ನವದೆಹಲಿ: ನೆಹರೂ ಅವಧಿಯಲ್ಲಿ ವಾರ್ಷಿಕ 12 ಲಕ್ಷ ವೇತನ ಪಡೆಯತ್ತಿದ್ದರೆ ವೇತನದ ನಾಲ್ಕನೇ ಒಂದು ಭಾಗದಷ್ಟು ತೆರಿಗೆಗೇ ಹೋಗುತ್ತಿತ್ತು. ಇಂದಿರಾ ಗಾಂಧಿ ಅವರ ಸರ್ಕಾರ ಅಧಿಕಾರಲ್ಲಿದ್ದಾಗ 12 ಲಕ್ಷದಲ್ಲಿ 10 ಲಕ್ಷ ತೆರಿಗೆ ಪಾಲಾಗುತ್ತಿತ್ತು. 10-12 ವರ್ಷಗಳ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 12 ಲಕ್ಷದ ವರೆಗಿನ ಆದಾಯದಲ್ಲಿ 2.60 ಲಕ್ಷ ತೆರಿಗೆ ಪಾವತಿಸಬೇಕಿತ್ತು. ಆದರೆ ಬಿಜೆಪಿ ಸರ್ಕಾರದ ಈ ಬಾರಿಯ ಬಜೆಟ್ ಬಳಿಕ 12 ಲಕ್ಷದವರೆಗಿನ ಆದಾಯಕ್ಕೆ ಒಂದೇ ಒಂದು ರುಪಾಯಿ ತೆರಿಗೆ ಕಟ್ಟಬೇಕಿಲ್ಲ!
ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಆದಾಯ ತೆರಿಗೆ ವಿನಾಯ್ತಿ ಮಿತಿಯನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿದ ಕ್ರಮವನ್ನು ಹೊಗಳುತ್ತಲೇ ಪ್ರತಿಪಕ್ಷವನ್ನು ಪ್ರಧಾನಿ ಮೋದಿ ತಿವಿದಿದ್ದು ಹೀಗೆ.ದೆಹಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ಪ್ರಚಾರ ಸಭೆಯಲ್ಲಿ ಮಾತನಾಡಿದ ಮೋದಿ, ‘ ಸ್ವಾತಂತ್ರ್ಯಾನಂತರ 12 ಲಕ್ಷ ವಾರ್ಷಿಕ ಆದಾಯ ಗಳಿಸುತ್ತಿರುವವರು ಈ ರೀತಿಯ ವಿನಾಯ್ತಿ ಪಡೆಯುತ್ತಿರುವುದು ಇದೇ ಮೊದಲು. ದೇಶದ ಅಭಿವೃದ್ಧಿಯಲ್ಲಿ ನಮ್ಮ ಮಧ್ಯಮವರ್ಗದವರ ಪಾತ್ರ ದೊಡ್ಡದಿದೆ. ಬಿಜೆಪಿ ಮಾತ್ರ ಈ ವರ್ಗವನ್ನು ಗೌರವಿಸಿದೆ ಮತ್ತು ನಿಷ್ಠಾವಂತ ತೆರಿಗೆದಾರರಿಗೆ ಪ್ರತಿಫಲ ನೀಡಿದೆ. ಇದು ಜನಸ್ನೇಹಿ ಬಜೆಟ್ ಎಂದು ಇಡೀ ದೇಶವೇ ಹೇಳುತ್ತಿದೆ ಎಂದರು.
ವಿಕಸಿತ ಭಾರತದ ಕನಸು ನನಸು ಮಾಡಲು ರೈತರು, ಮಹಿಳೆಯರು, ಯುವಕರು ಮತ್ತು ಬಡವರು ಎಂಬ ನಾಲ್ಕು ಆಧಾರಸ್ತಂಭಗಳನ್ನು ಬಲಿಷ್ಠಗೊಳಿಸುವುದಾಗಿ ನಾನು ಗ್ಯಾರಂಟಿ ನೀಡಿದ್ದೇನೆ. ಶನಿವಾರದ ಬಜೆಟ್ ಆ ಗ್ಯಾರಂಟಿಗಳನ್ನು ಪೂರ್ಣಗೊಳಿಸುವ ಗ್ಯಾರಂಟಿಯಾಗಿದೆ ಎಂದು ಮೋದಿ ಹೇಳಿದರು.