ಸಾರಾಂಶ
ನವದೆಹಲಿ: ಭಾರತದಲ್ಲಿನ ಧಾರ್ಮಿಕ ಸ್ವಾತಂತ್ರ್ಯದ ಕುರಿತು ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ ವರದಿ ಬಿಡುಗಡೆ ಮಾಡಿದ್ದು, ‘ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘನೆ ಹೆಚ್ಚಾಗಿದೆ’ ಎಂದು ಹೇಳಿದೆ.
ಅ.2ರಂದು ಬಿಡುಗಡೆಯಾದ ವರದಿಯಲ್ಲಿ, ‘ಚುನಾವಣೆ ಸಂದರ್ಭದಲ್ಲಿ ನಾಯಕರು ನೀಡುವ ಪ್ರಚೋದನಕಾರಿ ಹೇಳಿಕೆ ಮತ್ತು ಸರ್ಕಾರದ ಕೆಲ ನೀತಿಗಳು ದೇಶದ ಮುಸ್ಲಿಮರು ಮತ್ತು ಕ್ರೈಸ್ತ ಮೇಲೆ ನಡೆಯುತ್ತಿರುವ ದಾಳಿಗಳನ್ನು ಪ್ರಚೋದಿಸುತ್ತಿವೆ’ ಎಂದು ಹೇಳಲಾಗಿದೆ.
‘2024ರ ಜನವರಿಯಿಂದ ಮಾರ್ಚ್ ನಡುವೆ ಕ್ರಿಶ್ಚಿಯನ್ನರ ಮೇಲೆ ನಡೆದ 161 ದಾಳಿಗಳನ್ನು ಉಲ್ಲೇಖಿಸಲಾಗಿದೆ. ಅಂತೆಯೇ ಬಲವಂತ ಮತಾಂತರದ ಆರೋಪದ ಮೇಲೆ ಕ್ರಿಶ್ಚಿಯನ್ನರನ್ನು ಬಂಧಿಸಲಾಗಿದೆ’ ಎಂದು ಆರೋಪಿಸಲಾಗಿದೆ.
‘ಚುನಾವಣಾ ಫಲಿತಾಂಶ ಘೋಷಣೆಯಾದ ಬಳಿಕ ಮುಸ್ಲಿಮರನ್ನು ಗುರಿಯಾಗಿಸಿ 28 ದಾಳಿ ನಡೆದಿವೆ. ಅದಕ್ಕೂ ಮುನ್ನ ರಾಜಕಾರಣಿಗಳು ಮುಸ್ಲಿಂ ಮತ್ತು ಇತರೆ ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಭಾಷಣ ಮಾಡಿದ್ದರು. ಕಾಂಗ್ರೆಸ್ ಗೆದ್ದರೆ ಹಿಂದೂ ಧರ್ಮವನ್ನು ಅಳಿಸಿಹಾಕುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು ಹಾಗೂ ಕಾಂಗ್ರೆಸ್ ಜಯಿಸಿದರೆ ಶರಿಯಾ ಕಾನೂನು ಜಾರಿಯಾಗುವುದು ಎಂದು ಕೇಂದ್ರ ಗೃಹ ಸಚಿವರೆ ಅಮಿತ್ ಶಾ ಎಚ್ಚರಿಸಿದ್ದರು. ರಾಮಮಂದಿರ ಉದ್ಘಾಟನೆಯ ಸಮಯದಲ್ಲಿ ಮುಂಬೈನ ಮೀರಾ ರೋಡ್‌ನಲ್ಲಿ ಮುಸ್ಲಿಮರ ಮೇಲೆ ದಾಳಿ ನಡೆದಿತ್ತು’ ಎಂದು ವರದಿ ಹೇಳಿದೆ.
‘ಮುಸ್ಲಿಮರ ಆಸ್ತಿಯನ್ನು ಕೆಡವಲು ಬುಲ್ಡೋಜರ್ ನ್ಯಾಯ ಬಳಸಲಾಗುತ್ತಿದೆ. ವಕ್ಫ್ ಆಸ್ತಿಗಳ ಮೇಲಿನ ಸರ್ಕಾರದ ಹಿಡಿತವನ್ನು ಬಲಗೊಳಿಸಲು ತಿದ್ದುಪಡಿ ಕಾಯ್ದೆ ತರಲಾಗುತ್ತಿದೆ’ ಎಂದು ವರದಿ ಖಂಡಿಸಿದೆ,
ಇದರಲ್ಲಿ ಅಲ್ಪಸಂಖ್ಯಾತರ ವಿರುದ್ಧದ ಹಿಂಸಾಚಾರ, ಉದ್ದೇಶಿತ ಹತ್ಯೆಗಳು, ಆಸ್ತಿ ನಾಶ, ಮತ್ತು ಕಿರುಕುಳಗಳ ಬಗ್ಗೆ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ ಎಂದೂ ಆರೋಪಿಸಲಾಗಿದೆ.
ಅಮೆರಿಕ ವರದಿ ದುರುದ್ದೇಶಪೂರಿತ: ಭಾರತ ತಿರುಗೇಟು
ನವದೆಹಲಿ: ಅಮೆರಿಕ ಆಯೋಗವೊಂದು ಬಿಡುಗಡೆ ಮಾಡಿರುವ ಭಾರತದ ಧಾರ್ಮಿಕ ಸ್ವಾತಂತ್ರ್ಯ ವರದಿಯನ್ನು ವಿದೇಶಾಂಗ ಇಲಾಖೆಯ ಖಂಡಿಸಿದ್ದು, ‘ಈ ಆಯೋಗ ಪಕ್ಷಪಾತಿ ಆಗಿದೆ ಹಾಗೂ ವರದಿ ದುರುದ್ದೇಶದಿಂದ ಕೂಡಿದೆ. ಅದು ದೇಶದ ಚುನಾವಣೆಗಳಲ್ಲಿ ಮೂಗು ತೂರಿಸುತ್ತಿದೆ’ ಎಂದು ಆರೋಪಿಸಿದೆ.
ವಕ್ತಾರ ರಣಧೀರ್ ಜೈಸ್ವಾಲ್ ಹೇಳಿಕೆ ನೀಡಿ ‘ವರದಿಯ ನೆಪದಲ್ಲಿ ಭಾರತದಲ್ಲಿ ತನ್ನ ಸಿದ್ಧಾಂತದ ಪ್ರಚಾರವನ್ನು ಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ ಮುಂದುವರಿಸಿದೆ. ಭಾತರದ ವೈವಿಧ್ಯಮಯ, ಬಹುತ್ವ ಮತ್ತು ಪ್ರಜಾಪ್ರಭುತ್ವದ ತತ್ವಗಳನ್ನು ಆಯೋಗ ಅರ್ಥೈಸಿಕೊಳ್ಳುತ್ತದೆ ಎಂಬ ಯಾವುದೇ ನಿರೀಕ್ಷೆಯಿಲ್ಲ. ವಿಶ್ವದ ಅತಿದೊಡ್ಡ ಚುನಾವಣಾ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡುವ ಅವರ ಪ್ರಯತ್ನಗಳು ವಿಫಲವಾಗುತ್ತವೆ’ ಎಂದು ಹೇಳಿದ್ದಾರೆ.