ಊಹಿಸಲೂ ಆಗದ ರೀತಿಯಲ್ಲಿ ಸಿಂದೂರ ಪ್ರತೀಕಾರ

| N/A | Published : May 08 2025, 02:35 AM IST / Updated: May 08 2025, 04:16 AM IST

ಸಾರಾಂಶ

ಪಹಲ್ಗಾಂ ದಾಳಿಕೋರರು, ಅವರ ಸೂತ್ರಧಾರರು ಊಹಿಸಲೂ ಆಗದ ರೀತಿಯಲ್ಲಿ ಪ್ರತೀಕಾರ ತೀರಿಸಿಕೊಳ್ಳುತ್ತೇವೆ, ಅವರು ಎಲ್ಲಿದ್ದರೂ ಹುಡುಕಿ ಹುಡುಕಿ ಶಿಕ್ಷಿಸುತ್ತೇವೆಂದು ಶಪಥ ಮಾಡಿದ್ದ ಭಾರತ ಹೇಳಿದಂತೆ ನಡೆದುಕೊಂಡಿದೆ.

ನವದೆಹಲಿ: ಪಹಲ್ಗಾಂ ದಾಳಿಕೋರರು, ಅವರ ಸೂತ್ರಧಾರರು ಊಹಿಸಲೂ ಆಗದ ರೀತಿಯಲ್ಲಿ ಪ್ರತೀಕಾರ ತೀರಿಸಿಕೊಳ್ಳುತ್ತೇವೆ, ಅವರು ಎಲ್ಲಿದ್ದರೂ ಹುಡುಕಿ ಹುಡುಕಿ ಶಿಕ್ಷಿಸುತ್ತೇವೆಂದು ಶಪಥ ಮಾಡಿದ್ದ ಭಾರತ ಹೇಳಿದಂತೆ ನಡೆದುಕೊಂಡಿದೆ. ಪಾಕಿಸ್ತಾನದಲ್ಲಿರುವ ಉಗ್ರ ನೆಲೆಗಳ ಮೇಲೆ ರಾತ್ರೋರಾತ್ರಿ ‘ಆಪರೇಷನ್‌ ಸಿಂದೂರ’ ಹೆಸರಿನಲ್ಲಿ ವೈಮಾನಿಕ ದಾಳಿ ನಡೆಸಿ ಶತ್ರುದೇಶಕ್ಕೆ ಭರ್ಜರಿ ಆಘಾತ ನೀಡಿದೆ.

ಮಂಗಳವಾರ ತಡರಾತ್ರಿ 1.05ರಿಂದ 1.30ರ ನಡುವೆ 25 ನಿಮಿಷಗಳ ಕಾಲ ನಡೆದ ಈ ಕಾರ್ಯಾಚರಣೆಯಲ್ಲಿ ಲಷ್ಕರ್‌-ಎ-ತೊಯ್ಬಾ, ಜೈಶ್‌-ಎ-ಮೊಹಮ್ಮದ್‌ ಮತ್ತು ಹಿಜ್ಬುಲ್‌ ಮುಜಾಹಿದೀನ್‌ ಉಗ್ರ ಸಂಘಟನೆಗಳ 9 ನೆಲೆಗಳನ್ನು 24 ಕ್ಷಿಪಣಿ ಬಳಸಿ ಧ್ವಂಸ ಮಾಡಲಾಗಿದೆ. ದಾಳಿಯಲ್ಲಿ ಸುಮಾರು 80 ಮಂದಿ ಬಲಿಯಾಗಿದ್ದಾರೆ, 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಇದರಲ್ಲಿ ಭಾರತದ ವಿರುದ್ಧ ಭಯೋತ್ಪಾದಕರನ್ನು ಛೂ ಬಿಡುವ ಜೈಷ್‌-ಎ-ಮೊಹಮ್ಮದ್‌ ಮುಖ್ಯಸ್ಥನೂ ಆಗಿರುವ ಉಗ್ರ ಮಸೂದ್‌ ಅಜರ್‌ನ ಹಿರಿಯ ಸೋದರಿ ಮತ್ತು ಕುಟುಂಬದ 10 ಮಂದಿಯೂ ಸೇರಿದ್ದಾರೆ.

ಭಾರತೀಯ ಸೇನೆಯ ಮೂರೂ ದಳಗಳು ಜಂಟಿಯಾಗಿ ಈ ಆಪರೇಷನ್ ಸಿಂದೂರವನ್ನು ಕಾರ್ಯರೂಪಕ್ಕಿಳಿಸಿದ್ದು, ಭಾರತದ ವಾಯುಪ್ರದೇಶದಿಂದಲೇ ವಿಮಾನಗಳ ಮೂಲಕ ಪಾಕಿಸ್ತಾನದಲ್ಲಿರುವ 9 ಗುರಿಗಳನ್ನು ಕ್ಷಿಪಣಿ ಬಳಸಿ ಪುಡಿಗಟ್ಟಲಾಗಿದೆ. ದಾಳಿಗೊಳಗಾದ ಒಂಬತ್ತರಲ್ಲಿ 5 ಗುರಿಗಳು ವಿವಾದಿತ ಪಾಕ್‌ ಆಕ್ರಮಿತ ಕಾಶ್ಮೀರ ವ್ಯಾಪ್ತಿಗೆ ಸೇರಿದ್ದರೆ, ಇನ್ನುಳಿದ ನಾಲ್ಕು ಸ್ಥಳಗಳು ಪಾಕಿಸ್ತಾನದೊಳಗಿನವಾಗಿವೆ. ಈ ಮೂಲಕ ಪಾಕ್‌ ಆಕ್ರಮಿತ ಕಾಶ್ಮೀರದ ಆಚೆಗೂ ಭಾರತ ದಾಳಿ ನಡೆಸಿದ್ದು 1971ರ ಯುದ್ಧದ ಬಳಿಕ ಇದೇ ಮೊದಲು.

ಉಗ್ರ ನೆಲೆಗಳಿಗೆ ಭಾರಿ ಹಾನಿ:

ದಾಳಿಯಲ್ಲಿ ಜೈಶ್‌-ಎ-ಮೊಹಮ್ಮದ್‌ನ ಕೇಂದ್ರ ಸ್ಥಾನ ಬಹಾವಲ್ಪುರ ಮತ್ತು ಲಷ್ಕರ್‌-ಎ-ತೊಯ್ಬಾದ ಕೇಂದ್ರ ಸ್ಥಳ ಮುರೀದ್‌ಕೆ ಉಗ್ರ ನೆಲೆಗಳಿಗೆ ಭಾರೀ ಹಾನಿಯಾಗಿದ್ದು, ಮುಂಬೈ ದಾಳಿಕೋರರಾದ ಅಜ್ಮಲ್‌ ಕಸಬ್‌ ಮತ್ತು ಡೇವಿಡ್‌ ಹೆಡ್ಲಿಗೆ ಇಲ್ಲೇ ತರಬೇತಿ ನೀಡಲಾಗಿತ್ತು ಎಂದು ಸೇನೆ ಸ್ಪಷ್ಟಪಡಿಸಿದೆ. ಇಡೀ ದಾಳಿಯ ಮೇಲೆ ಪ್ರಧಾನಿ ಮೋದಿ ಅವರು ನಿಗಾ ಇಟ್ಟಿದ್ದು, ಕ್ಷಣ ಕ್ಷಣದ ಮಾಹಿತಿ ಪಡೆದುಕೊಳ್ಳುತ್ತಿದ್ದರು ಎನ್ನಲಾಗಿದೆ.

ಎಲ್ಲೆಲ್ಲಿ ದಾಳಿ?:

ಪಹಲ್ಗಾಂ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಭಾರತ ಈ ಹಿಂದೆಯೇ ಘೋಷಿಸಿತ್ತು. ಅದರ ಭಾಗವಾಗಿ ಮೊದಲ ಹಂತದಲ್ಲಿ ರಾಜತಾಂತ್ರಿಕ ಮತ್ತು ಆರ್ಥಿಕವಾಗಿ ಪಾಕಿಸ್ತಾನವನ್ನು ಕುಗ್ಗಿಸಿದ ಭಾರತ ಬಳಿಕ ರಾತ್ರೋರಾತ್ರಿ ಪಾಕಿಸ್ತಾನದ ಸರ್ಜಾಲ್‌, ಸಿಯಾಲ್‌ಕೋಟ್‌, ಬರ್ನಾಲಾ, ಮುಜಪ್ಫರಾಬಾದ್‌ ತಲಾ ಒಂದು ಮತ್ತು ಕೋಟ್ಲಿಯ ತಲಾ ಎರಡು ಉಗ್ರ ನೆಲೆಗಳನ್ನು ಧ್ವಂಸಗೊಳಿಸಿದೆ.

ಏ.22ರಂದು ಪಹಲ್ಗಾಂನಲ್ಲಿ ಹಿಂದೂ ಮಹಿಳೆಯರ ಮುಂದೆಯೇ ಅವರ ಗಂಡಂದಿರನ್ನು ನಿರ್ದಯವಾಗಿ ಹತ್ಯೆ ಮಾಡಲಾಗಿತ್ತು. ಹಿಂದೂ ಮಹಿಳೆಯ ಸಿಂದೂರ ಅಳಿಸಿ ಹಾಕಿದ ರಾಕ್ಷಸೀ ಕೃತ್ಯಕ್ಕೆ ಪ್ರತಿಯಾಗಿ ಇದೀಗ ‘ಆಪರೇಷನ್ ಸಿಂದೂರ’ ಕಾರ್ಯಾಚರಣೆ ಮೂಲಕವೇ ಭಾರತ ತಕ್ಕ ಉತ್ತರ ನೀಡಿದೆ.

ನಿಖರ ಗುರಿ:

ಪಾಕಿಸ್ತಾನದಲ್ಲಿ ಗುರುತು ಮಾಡಲಾದ ನಿಗದಿತ ಗುರಿಯನ್ನಷ್ಟೇ ಕೇಂದ್ರೀಕರಿಸಿ ದಾಳಿ ನಡೆಸಲಾಗಿದೆ. ಯಾವುದೇ ಸೇನಾ ನೆಲೆಯ ಮೇಲೆ ದಾಳಿ ನಡೆದಿಲ್ಲ. ಭಾರತದ ಗುರಿ ಕೇವಲ ಗಡಿಯಾಚೆಗಿನ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವ ಉಗ್ರರ ಮೂಲಸೌಕರ್ಯವನ್ನು ನಾಶಮಾಡುವುದಷ್ಟೇ ಆಗಿತ್ತು. ಹೆಚ್ಚಿನ ಸಂಘರ್ಷಕ್ಕೆ ಅವಕಾಶ ನೀಡದ ರೀತಿಯಲ್ಲಿ ದಾಳಿಯ ಗುರಿಯ ಆಯ್ಕೆ ಮತ್ತು ಅನುಷ್ಠಾನದಲ್ಲಿ ಭಾರೀ ಮುನ್ನೆಚ್ಚರಿಕೆ ವಹಿಸಲಾಗಿತ್ತು ಎಂದು ದಾಳಿ ಬಳಿಕ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಭಾರತ ವಿವರಿಸಿದೆ.

ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ, ವಿಂಗ್‌ ಕಮಾಂಡರ್‌ ವ್ಯೋಮಿಕಾ ಸಿಂಗ್‌ ಮತ್ತು ಕರ್ನಲ್‌ ಸೋಫಿಯಾ ಖುರೇಷಿ ಅವರು ದಾಳಿ ಕುರಿತು ನಂತರ ಮಾಧ್ಯಮಗಳಿಗೆ ಪೂರ್ಣ ವಿವರಣೆ ನೀಡಿದರು.

ವಿದೇಶಗಳಿಗೂ ವಿವರಣೆ:

ಪಾಕ್‌ ಮೇಲಿನ ದಾಳಿ ಬೆನ್ನಲ್ಲೇ ಭಾರತವು ಅಮೆರಿಕ, ರಷ್ಯಾ, ಬ್ರಿಟನ್‌, ಯುಎಇ, ಸೌದಿ ಅರೇಬಿಯಾ ಮತ್ತಿತರ ದೇಶಗಳಿಗೆ ವಿವರಣೆ ನೀಡಿತು. ಎಲ್ಲರನ್ನೂ ವಿಶ್ವಾಸಕ್ಕೆ ಪಡೆಯುವ ಪ್ರಯತ್ನ ನಡೆಸಿತು. ಈ ನಡುವೆ ಪಾಕಿಸ್ತಾನವು ಭಾರತದ ದಾಳಿಗೆ ಪ್ರತೀಕಾರ ತೆಗೆದುಕೊಳ್ಳುವುದಾಗಿ ಹೇಳಿದ್ದು, ಈ ಹಿನ್ನೆಲೆಯಲ್ಲಿ ಭಾರತ ತನ್ನ ವಾಯು ರಕ್ಷಣಾ ವ್ಯವಸ್ಥೆಯನ್ನು ಸನ್ನದ್ಧ ಸ್ಥಿತಿಯಲ್ಲಿರಿಸಿದೆ.