ಸಾರಾಂಶ
ನವದೆಹಲಿ : ಅಣ್ವಸ್ತ್ರಗಳಿವೆ ಎಂಬ ಬ್ಲ್ಯಾಕ್‌ಮೇಲ್ ಅನ್ನು ನಾವು ಇನ್ನು ಸಹಿಸಲ್ಲ. ಅಣ್ವಸ್ತ್ರ ಬ್ಲ್ಯಾಕ್‌ಮೇಲ್ ರಕ್ಷಣೆಯಡಿ ಪೋಷಿಸಲಾಗುತ್ತಿರುವ ಎಲ್ಲ ಭಯೋತ್ಪಾದಕ ತಾಣಗಳ ಮೇಲೂ ಭಾರತ ಇನ್ನು ನಿಖರ ದಾಳಿ ನಡೆಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನಕ್ಕೆ ನೇರಾನೇರ ಎಚ್ಚರಿಕೆ ಕೊಟ್ಟಿದ್ದಾರೆ.
‘ನಮ್ಮ ಸೋದರಿಯರ ಹಣೆಯಿಂದ ಪಾಕಿಸ್ತಾನ ಸಿಂದೂರ ಅಳಿಸಿ ಹಾಕಿತ್ತು. ನಾವು ಪಾಕಿಸ್ತಾನದಲ್ಲಿ ನಡೆಯುತ್ತಿದ್ದ ಭಯೋತ್ಪಾದನೆಯ ವಿಶ್ವವಿದ್ಯಾಲಯಗಳನ್ನೇ ಅಳಿಸಿ ಹಾಕಿದ್ದೇವೆ. ಭಯೋತ್ಪಾದನೆ- ವ್ಯಾಪಾರ, ಭಯೋತ್ಪಾದನೆ- ಮಾತುಕತೆ ಎರಡೂ ಒಟ್ಟಾಗಿ ನಡೆಯಲು ಸಾಧ್ಯವೇ ಇಲ್ಲ. ಪಾಕಿಸ್ತಾನದ ಜತೆಗೆ ಏನೇ ಮಾತುಕತೆ ನಡೆಯುವುದಿದ್ದರೂ ಅದು ಭಯೋತ್ಪಾದನೆ ಹಾಗೂ ಪಿಒಕೆ (ಪಾಕ್ ಆಕ್ರಮಿತ ಕಾಶ್ಮೀರ) ಬಗ್ಗೆ ಮಾತ್ರ ಎಂದು ಹೇಳಿದ್ದಾರೆ.
ಜಮ್ಮು-ಕಾಶ್ಮೀರದ ಪಹಲ್ಗಾಂನಲ್ಲಿ 26 ಮಂದಿಯನ್ನು ಬಲಿ ಪಡೆದ ಘೋರ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ‘ಆಪರೇಷನ್ ಸಿಂದೂರ’ ಕಾರ್ಯಾಚರಣೆ ಬಳಿಕ ಇದೇ ಮೊದಲ ಬಾರಿಗೆ ವಿಶ್ವವನ್ನುದ್ದೇಶಿಸಿ ಸೋಮವಾರ ರಾತ್ರಿ 8ರಿಂದ 22 ನಿಮಿಷ ಭಾಷಣ ಮಾಡಿದ ಪ್ರಧಾನಿ ಮೋದಿ ಅವರು, ಆಪರೇಷನ್ ಸಿಂದೂರ ಎಂಬುದು ಭಯೋತ್ಪಾದನೆಯ ವಿರುದ್ಧ ಭಾರತದ ಹೊಸ ನೀತಿ. ನಮ್ಮ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದೇವೆ ಅಷ್ಟೆ. ಪಾಕಿಸ್ತಾನ ನಡವಳಿಕೆ ನೋಡಿ ಭವಿಷ್ಯದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು. ತನ್ಮೂಲಕ ಮತ್ತೊಮ್ಮೆ ಭಾರತದ ತಂಟೆಗೆ ಬಂದರೆ ಗಂಭೀರ ದಾಳಿ ನಡೆಸುವ ಎಚ್ಚರಿಕೆಯನ್ನು ನೀಡಿದರು.
ಇದು ಯುದ್ಧದ ಕಾಲವಲ್ಲ. ಹಾಗಂತ ಭಯೋತ್ಪಾದನೆಯ ಯುಗವೂ ಅಲ್ಲ. ನಾವು ಇನ್ನು ಮುಂದೆ ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆ ಹಾಗೂ ಭಯೋತ್ಪಾದಕರು ಎಂಬ ವ್ಯತ್ಯಾಸಗಳನ್ನು ನೋಡಲು ಹೋಗುವುದಿಲ್ಲ. ಯಾವುದೇ ದುಸ್ಸಾಹಸಕ್ಕೂ ನಿರ್ಣಾಯಕ ಪ್ರತ್ಯುತ್ತರ ನೀಡುತ್ತೇವೆಂದು ಹೇಳಿದರು.
ಇಷ್ಟು ವರ್ಷಗಳ ಕಾಲ ಭಯೋತ್ಪಾದಕರನ್ನು ಪಾಕಿಸ್ತಾನವೇ ಸಾಕಿತ್ತು. ಈಗ ಉಗ್ರರು ಪಾಕಿಸ್ತಾನವನ್ನೇ ನುಂಗುತ್ತಿದ್ದಾರೆ. ಪಾಕಿಸ್ತಾನಕ್ಕೆ ತಾನು ಉಳಿಯಬೇಕು ಎಂಬ ಬಯಕೆ ಇದ್ದರೆ, ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತೆಸೆಯಬೇಕು ಎಂದರು.
ಆಪರೇಷನ್ ಸಿಂದೂರ್‌ನ ಯಶಸ್ಸನ್ನು ಭಾರತದ ನಾರಿಶಕ್ತಿಗೆ ಅರ್ಪಿಸಿದ ಪ್ರಧಾನಿ, ‘ಆಪರೇಷನ್ ಸಿಂದೂರ್ ಕೇವಲ ಹೆಸರಲ್ಲ, ಅದರ ಮೂಲಕ ಭಾರತದ ಸಂಕಲ್ಪ ಕಾರ್ಯರೂಪಕ್ಕೆ ಬಂದಿತು. 100ಕ್ಕೂ ಹೆಚ್ಚು ಭಯಾನಕ ಉಗ್ರರನ್ನು ಹತ್ಯೆ ಮಾಡಲಾಯಿತು. ಪಹಲ್ಗಾಂ ದಾಳಿ ಭಯೋತ್ಪಾದನೆಯ ಅತ್ಯಂತ ಕ್ರೂರ ಮೂಕ. ಅದರಿಂದ ನನಗೆ ವೈಯಕ್ತಿಕವಾಗಿ ನೋವಾಯಿತು. ನಮ್ಮ ಮಹಿಳೆಯರ ಹಣೆಯಿಂದ ಸಿಂದೂರ ಅಳಿಸಿದರೆ ಅದರ ಘೋರ ಪರಿಣಾಮ ಏನಾಗಿರಲಿದೆ ಎಂಬುದು ಶತ್ರುಗಳಿಗೆ ಈಗ ಗೊತ್ತಾಗಿದೆ ಎಂದರು.
ಬಹಾವಲ್ಪುರ, ಮುರೀದ್ಕೆ ಭಯೋತ್ಪಾದನೆಯ ವಿವಿಗಳು
:ಬಹಾವಲ್ಪುರ, ಮುರೀದ್ಕೆ ಜಾಗತಿಕ ಭಯೋತ್ಪಾದನೆಯ ವಿವಿಗಳಿದ್ದಂತೆ. ಜಗತ್ತಿನ ಎಲ್ಲಾ ದೊಡ್ಡ ಉಗ್ರ ಕೃತ್ಯಗಳಲ್ಲೂ ಪಾಕ್ ಉಗ್ರರ ಕೈವಾಡ ಇದೆ. ಭಾರತೀಯ ಸೇನೆ ಪಾಕ್ ಉಗ್ರರ ನೆಲೆಗಳ ಮೇಲೆ, ತರಬೇತಿ ಶಿಬಿರಗಳ ಮೇಲೆ ದಾಳಿ ನಡೆಸಿದೆ. ಇದನ್ನು ಅವರು ಕನಸಿನಲ್ಲೂ ಊಹಿಸಿರಲಿಲ್ಲ. ಭಾರತ ಇಷ್ಟು ದೊಡ್ಡ ನಿರ್ಧಾರ ಕೈಗೊಳ್ಳಲಿದೆ ಎಂದು ಅವರು ಯೋಚಿಸಿರಲಿಲ್ಲ. ಆದರೆ ದೇಶ ಮೊದಲು ಎಂಬ ಭಾವನೆಯೊಂದಿಗೆ ಇಡೀ ಭಾರತ ಒಂದಾಗಿ ಈ ದಾಳಿ ನಡೆಸಿದೆ. ಉಗ್ರವಾದದ ವಿಷಯದಲ್ಲಿ ದೃಢ ನಿರ್ಧಾರ ಕೈಗೊಳ್ಳಲಾಗಿದೆ. ಅದರ ಪರಿಣಾಮಗಳು ಇದೀಗ ಕಂಡುಬರುತ್ತಿದೆ. ಭಾರತದ ಕ್ಷಿಪಣಿಗಳ, ಡ್ರೋನ್‌ಗಳ ದಾಳಿ, ಉಗ್ರರ ಸ್ಮಾರಕಗಳನ್ನು ಧ್ವಂಸಗೊಳಿಸಿದೆ. ಅವರ ಧೈರ್ಯ ಕೂಡ ಅಲ್ಲಾಡಿದೆ’ ಎಂದರು.
ಪಾಕ್‌ನ ಹೃದಯದ ಮೇಲೆ ದಾಳಿ:‘
ಉಗ್ರರ ವಿರುದ್ಧ ನಮ್ಮ ಕಾರ್ಯಾಚರಣೆ ಬೆನ್ನಲ್ಲೇ ಪಾಕಿಸ್ತಾನ ಮತ್ತೊಂದು ದುಸ್ಸಾಹಸ ಮಾಡಿತು. ಅವರು ಭಾರತದ ಮೇಲೆಯೇ ದಾಳಿ ಮಾಡಿದರು. ನಮ್ಮ ಶಾಲೆ, ಗುರುದ್ವಾರ, ಮನೆಗಳನ್ನು ಅವರು ಗುರಿಯಾಗಿಸಿಕೊಂಡರು. ನಮ್ಮ ಸೇನಾ ನೆಲೆಗಳ ಮೇಲೂ ದಾಳಿ ನಡೆಸಿದರು.
ಆದರೆ ಇದರಲ್ಲೂ ಪಾಕಿಸ್ತಾನ ವಿಫಲವಾಯಿತು. ಅವರ ಡ್ರೋನ್, ಕ್ಷಿಪಣಿಗಳು ಹೇಗೆ ನೆಲಕ್ಕುರುಳಿದವು ಎಂದು ಇಡೀ ವಿಶ್ವ ನೋಡಿತು. ಭಾರತದ ವಾಯುರಕ್ಷಣಾ ವ್ಯವಸ್ಥೆಗಳು ಪಾಕ್ ಡ್ರೋನ್, ಕ್ಷಿಪಣಿಗಳನ್ನು ಆಗಸದಲ್ಲೇ ಹೊಡೆದು ಹಾಕಿದವು. ಅವರು ಯುದ್ಧಕ್ಕಾಗಿ ಗಡಿ ದಾಟಿ ಬಂದಿದ್ದರು, ಆದರೆ ನಾವು ಅವರ ಹೃದಯದ ಮೇಲೇ ದಾಳಿ ನಡೆಸಿದೆವು. ಅವರ ವಾಯುನೆಲೆ ಮೇಲೆ ನಾವು ಭಾರೀ ದಾಳಿ ಮಾಡಿದೆವು. ಮೂರೇ ದಿನಗಳಲ್ಲಿ ಅವರಿಗೆ ಚೇತರಿಸಕೊಳ್ಳಲಾಗದು ಭಾರೀ ಪೆಟ್ಟು ಬಿದ್ದಿತು’ ಎಂದರು.
ಭಾರತದ ದಾಳಿಗೆ ಹೆದರಿ ಅಮೆರಿಕದ ಮೊರೆ!
:ಪಾಕಿಸ್ತಾನ ಕದನ ವಿರಾಮದ ಮಧ್ಯಸ್ಥಿಕೆ ವಹಿಸುವಂತೆ ಅಮೆರಿಕದ ಮೊರೆ ಹೋದ ಕುರಿತು ಪ್ರಸ್ತಾವಿಸಿದ ಮೋದಿ, ‘ಭಾರತದ ಆಕ್ರಮಣಕಾರಿ ದಾಳಿ ಬಳಿಕ ತಪ್ಪಿಸಿಕೊಳ್ಳಲು ಪಾಕಿಸ್ತಾನ ದಾರಿ ಹುಡುಕತೊಡಗಿತು. ಉದ್ವಿಗ್ನ ಪರಿಸ್ಥಿತಿ ತಿಳಿಗೆ ನೆರವಾಗುವಂತೆ ಅಮೆರಿಕ ಸೇರಿ ಜಗತ್ತಿನ ಹಲವು ದೇಶಗಳ ಮುಂದೆ ಅಂಗಲಾಚಿತು. ಭಾರೀ ಹೊಡೆತ ತಿಂದ ಬಳಿಕ ಅನಿವಾರ್ಯವಾಗಿ ಭಾರತದ ಮುಂದೆ ಕದನ ವಿರಾಮಕ್ಕೆ ಪ್ರಸ್ತಾಪ ಇಟ್ಟಿತು. ಅಷ್ಟರೊಳಗೆ ನಾವು ಉಗ್ರರ ಮೂಲಸೌಕರ್ಯಗಳನ್ನು ಧ್ವಂಸ ಮಾಡಿದ್ದವು. ಉಗ್ರರನ್ನು ಮರಣಶಯ್ಯೆಗೆ ಕಳುಹಿಸಿದ್ದೆವು. ಇನ್ನು ಮುಂದೆ ಅವರು ಉಗ್ರಕೃತ್ಯದ ದುಸ್ಸಾಹನ ನಡೆಸುವುದಿಲ್ಲ’ ಎಂದು ಭರವಸೆ ನೀಡಿದರು.