ಸಾರಾಂಶ
ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ಸಂಘರ್ಷ ಜಾಗತಿಕ ಗಮನವನ್ನು ಸೆಳೆಯುತ್ತಿರುವ ನಡುವೆಯೇ, ಶತ್ರುದೇಶ ಪಾಕಿಸ್ತಾನ ಜಾಗತಿಕವಾಗಿ ಒಬ್ಬಂಟಿಯಾಗಿದ್ದು, ಮುಸ್ಲಿಂ ದೇಶಗಳ ಬೆಂಬಲ ಪಡೆಯುವಲ್ಲಿಯೂ ವಿಫಲವಾಗಿದೆ.
ದಕ್ಷಿಣ ಏಷ್ಯಾದಲ್ಲಿ ಇಸ್ಲಾಮಿನ ಏಕಮಾತ್ರ ರಕ್ಷಕನೆಂಬಂತೆ ಬಿಂಬಿಸಿಕೊಳ್ಳುತ್ತಿದ್ದ ಪಾಕಿಸ್ತಾನ ಜಗತ್ತಿನ 50ಕ್ಕೂ ಅಧಿಕ ಮುಸ್ಲಿಂ ದೇಶಗಳು ತನ್ನ ಬೆಂಬಲಕ್ಕೆ ನಿಲ್ಲುತ್ತವೆ ಎಂಬ ನಿರೀಕ್ಷೆಯಲ್ಲಿತ್ತು. ಆದರೆ ಟರ್ಕಿ ಮತ್ತು ಅಜರ್‌ಬೈಜಾನ್ ಹೊರತಾಗಿ ಬೇರಾವುದೇ ಮುಸ್ಲಿಂ ದೇಶ ಪಾಕ್ ನೆರವಿಗೆ ನಿಂತಿಲ್ಲ. ಬದಲಾಗಿ ಈ ವಿಷಯದಿಂದ ಅರೋಗ್ಯಕರ ಅಂತರ ಕಾಯ್ದುಕೊಂಡಿವೆ. ಜೊತೆಗೆ ಪರೋಕ್ಷವಾಗಿ ಭಾರತದ ಬೆಂಬಲಕ್ಕೆ ನಿಂತಿವೆ. ಇದು ಪಾಕಿಸ್ತಾನಕ್ಕೆ ತೀವ್ರ ಮುಜುಗರ ತಂದೊಡ್ಡಿದೆ.
ಮುಸ್ಲಿಂ ದೇಶಗಳ ಅಂತರವೇಕೆ?:
ಪಾಕಿಸ್ತಾನ ಇಸ್ಲಾಂ ಹೆಸರಿನಲ್ಲಿ ಉಗ್ರವಾದವನ್ನು ಪೋಷಿಸುತ್ತಿದ್ದು, ಭಾರತ ಮತ್ತು ನೆರೆಯ ರಾಷ್ಟ್ರಗಳಿಗೆ ಭಯೋತ್ಪಾದನೆ ಉಂಟುಮಾಡುತ್ತಿದೆ ಎಂಬ ಸತ್ಯ ಮುಸ್ಲಿಂ ದೇಶಗಳಿಗೆ ಮನವರಿಕೆಯಾಗಿದೆ. ಅಲ್ಲದೆ, ಅವು ಭಾರತ ಮತ್ತು ಪಾಕಿಸ್ತಾನದ ನಡುವಿನ ವೈರವನ್ನು ಧಾರ್ಮಿಕ ಹಿನ್ನೆಲೆಯಲ್ಲಿ ನೋಡುತ್ತಿಲ್ಲ. ರಾಜತಾಂತ್ರಿಕ ಮತ್ತು ಆರ್ಥಿಕ ದೃಷ್ಟಿಕೋನದಿಂದ ನೋಡುತ್ತಿವೆ. ಸೌದಿ ಅರೇಬಿಯಾ ಮತ್ತು ಯುಎಇ ಈ ಹಿಂದೆ ಪಾಕಿಸ್ತಾನಕ್ಕೆ ಅಪಾರ ಅನುದಾನವನ್ನು ನೀಡಿದ್ದವಾದರೂ ಈಗ ಅವು ಪಾಕ್‌ನಿಂದ ದೂರ ಸರಿದು, ಭಾರತಕ್ಕೆ ಹತ್ತಿರವಾಗಿವೆ. ಜಗತ್ತಿಗೆ ಪಾಕ್ ಉಗ್ರವಾದವನ್ನು ಪೋಷಿಸುವ ದೇಶ ಎಂಬ ಸತ್ಯ ಮನದಟ್ಟಾಗಿದೆ ಎಂಬುದು ತಜ್ಞರ ಅಭಿಮತ.
ಟರ್ಕಿ, ಅಜೆರ್ಬೈಜನ್ ಸ್ನೇಹವೇಕೆ?:
ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್, ಒಟ್ಟೋಮನ್ ಸಾಮ್ರಾಜ್ಯದ ಆಧುನಿಕ ಆವೃತ್ತಿಯನ್ನು ನಿರ್ಮಿಸುವ ಮೂಲಕ ಮತ್ತು ಇಸ್ಲಾಮಿಕ್ ಜಗತ್ತನ್ನು ಆಳುವ ಮೂಲಕ ಟರ್ಕಿಯ ಪ್ರಾಚೀನ ವೈಭವವನ್ನು ಮರುಸ್ಥಾಪಿಸುವ ಹಂಬಲ ಹೊತ್ತವರು. ಅವರ ಕನಸಿಗೆ ಪಾಕಿಸ್ತಾನ ನೀರೆರೆದುಕೊಂಡು ಬಂದಿದೆ. ಹಾಗಾಗಿ ಸಹಜವಾಗಿಯೇ ಟರ್ಕಿ ಪಾಕಿಸ್ತಾನದ ಬೆಂಬಲಕ್ಕೆ ನಿಂತಿದೆ. ಇನ್ನು, ತನ್ನ ವೈರಿ ದೇಶ ಅರ್ಮೇನಿಯಾಕ್ಕೆ ಭಾರತ ಶಸ್ತ್ರಾಸ್ತ್ರ ಪೂರೈಸುತ್ತಿದೆ ಎಂಬ ಕಾರಣಕ್ಕೆ ಅಜರ್‌ಬೈಜಾನ್ ಸಿಟ್ಟಾಗಿದೆ. ಹೀಗಾಗಿ ಅದು ಪಾಕ್ ಜೊತೆ ಮೈತ್ರಿ ಹಸ್ತ ಚಾಚಿದೆ. ಜೊತೆಗೆ ಅದು ಟರ್ಕಿಯೊಂದಿಗೆ ರಾಜತಾಂತ್ರಿಕ, ಆರ್ಥಿಕ, ಸಾಂಸ್ಕೃತಿಕ ಸಂಬಂಧವನ್ನು ಹೊಂದಿದೆ. ಹಾಗಾಗಿ ಪಾಕಿಸ್ತಾನವನ್ನು ಬೆಂಬಲಿಸುವ ಅನಿವಾರ್ಯತೆ ಹೊಂದಿದೆ. ಅಲ್ಲದೆ, 2020ರಲ್ಲಿ ಅರ್ಮೆನಿಯಾ ವಿರುದ್ಧ ಯುದ್ಧ ನಡೆದಾಗ ಪಾಕಿಸ್ತಾನ ಅಜೆರ್ಬೈಜನ್‌ಗೆ ಬೆಂಬಲ ಘೋಷಿಸಿತ್ತು. ಸೈನಿಕ ಸಹಾಯ ನೀಡುವುದಾಗಿಯೂ ತಿಳಿಸಿತ್ತು.