ಬಿಬಿಎಂಪಿಯಿಂದ ವಿಜಯನಗರದ ಮೆಟ್ರೋ ನಿಲ್ದಾಣದ ಬಳಿ ನಿರ್ಮಿಸಿರುವ ದಕ್ಷಿಣ ಭಾರತದ ಮೊದಲ ಎಸಿ ಪಾಲಿಕೆ ಬಜಾರ್‌ ಲೋಕಾರ್ಪಣೆ

| Published : Aug 26 2024, 01:35 AM IST / Updated: Aug 26 2024, 04:38 AM IST

ಬಿಬಿಎಂಪಿಯಿಂದ ವಿಜಯನಗರದ ಮೆಟ್ರೋ ನಿಲ್ದಾಣದ ಬಳಿ ನಿರ್ಮಿಸಿರುವ ದಕ್ಷಿಣ ಭಾರತದ ಮೊದಲ ಎಸಿ ಪಾಲಿಕೆ ಬಜಾರ್‌ ಲೋಕಾರ್ಪಣೆ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಬೀದಿ ಬದಿ ವ್ಯಾಪಾರಿಗಳ ಅನುಕೂಲಕ್ಕಾಗಿ ಬಿಬಿಎಂಪಿಯಿಂದ ಸುಸಜ್ಜಿತವಾದ ‘ಪಾಲಿಕೆ ಬಜಾರ್‌ ನಿರ್ಮಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲಿಕೆಗೆ ನಿರ್ದೇಶಿಸಿದ್ದಾರೆ.

 ಬೆಂಗಳೂರು :  ನಗರದ ಬೀದಿ ಬದಿ ವ್ಯಾಪಾರಿಗಳ ಅನುಕೂಲಕ್ಕಾಗಿ ಬಿಬಿಎಂಪಿಯಿಂದ ಸುಸಜ್ಜಿತವಾದ ‘ಪಾಲಿಕೆ ಬಜಾರ್‌ ನಿರ್ಮಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲಿಕೆಗೆ ನಿರ್ದೇಶಿಸಿದ್ದಾರೆ.

ಭಾನುವಾರ ಬಿಬಿಎಂಪಿಯಿಂದ ವಿಜಯನಗರದ ಮೆಟ್ರೋ ನಿಲ್ದಾಣದ ಬಳಿ ನಿರ್ಮಿಸಿರುವ ದಕ್ಷಿಣ ಭಾರತದ ಮೊಟ್ಟ ಮೊದಲ ಹವಾ ನಿಯಂತ್ರಿತ ‘ಶ್ರೀ ಕೃಷ್ಣದೇವರಾಯ ಪಾಲಿಕೆ ಬಜಾರ್‌’ ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಬೀದಿ ವ್ಯಾಪಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಮಳೆ, ಚಳಿ, ಬಿಸಿಲು ಎನ್ನದೇ ಜೀವನ ನಡೆಸಲು ಬೀದಿಯಲ್ಲಿ ವ್ಯಾಪಾರ ಮಾಡುತ್ತಾರೆ. ಇವರ ಅನುಕೂಲಕ್ಕಾಗಿ ಇಂತಹ ಬಜಾರ್‌ಗಳನ್ನು ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ವಿಶೇಷವಾಗಿ ಗಾಂಧಿಬಜಾರ್ ನಂತಹ ಜನನಿಬಿಡ ಪ್ರದೇಶಗಳಲ್ಲಿ ನಿರ್ಮಿಸುವ ಅಗತ್ಯವಿದೆ ಎಂದರು.

ಬೆಂಗಳೂರಿಗೆ ‘ಪಾಲಿಕೆ ಬಜಾರ್’ ಭೂಷಣ ಮತ್ತು ಕಿರೀಟವಿದ್ದಂತೆ. ದಕ್ಷಿಣ ಭಾರತದಲ್ಲಿಯೇ ಇಂತಹ ಹವಾನಿಯಂತ್ರಿತ ಪಾಲಿಕೆ ಬಜಾರ್ ನಿರ್ಮಿಸಿರುವುದು ಇದೇ ಮೊದಲು. ಕೇರಳ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡಿನಲ್ಲಿ ವ್ಯಾಪಾರಿಗಳಿಗೆ ಸುಸರ್ಜ್ಜಿತದ ಪಾಲಿಕೆ ಬಜಾರ್‌ ಇಲ್ಲ. ಶಾಸಕ ಕೃಷ್ಣಪ್ಪ ಅತ್ಯುತ್ತಮವಾಗಿ ಆಲೋಚಿಸಿ ಪಾಲಿಕೆ ಬಜಾರ್‌ ನಿರ್ಮಿಸಿದ್ದಾರೆ. ಜತೆಗೆ ರಾಜ್ಯದ ಅಭಿವೃದ್ಧಿಗೆ ಕೊಡುಗೆ ನೀಡಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಗೌರವ ಸೂಚಿಸುವಂತೆ ಬಜಾರ್‌ಗೆ ಕೃಷ್ಣದೇವರಾಯ ಪಾಲಿಕೆ ಎಂದು ನಾಮಕರಣ ಮಾಡಿರುವುದು ಶ್ಲಾಘನೀಯ ಎಂದರು.

ಕೃಷ್ಣಪ್ಪ ಅವರ ಕನಸಿನ ಯೋಜನೆ:

ಕೃಷ್ಣದೇವರಾಯ ಪಾಲಿಕೆ ಬಜಾರ್ ಯೋಜನೆ ಸ್ಥಳೀಯ ಶಾಸಕ ಎಂ.ಕೃಷ್ಣಪ್ಪ ಅವರ ಕನಸು.ಇಲ್ಲಿನ ಬೀದಿ ವ್ಯಾಪಾರಿಗಳು ಬಿಸಿಲು ಗಾಳಿ ಮಳೆಯಲ್ಲಿ ವ್ಯಾಪಾರ ಮಾಡುತ್ತಿರುವುದರಿಂದ ಅವರಿಗೆ ವ್ಯಾಪಾರ ಮಾಡಲು ಸ್ಥಳಾವಕಾಶ ಮಾಡಿಕೊಡಲು ಬೇಡಿಕೆಯಿರಿಸಿದ್ದರು. 2017ರಲ್ಲಿ ಸಿಎಂ ಆಗಿದ್ದಾಗ ಸಂದರ್ಭದಲ್ಲಿ ಪಾಲಿಕೆ ಬಜಾರ್ ಗಳ ನಿರ್ಮಾಣಕ್ಕೆ 5 ಕೋಟಿ ರು. ಅನುದಾನಕ್ಕೆ ಅನುಮೋದನೆ ನೀಡಿದೆ. ಇಂದು ಈ ಬಜಾರ್ ಉದ್ಘಾಟಿಸುತ್ತಿರುವುದು ಸಂತೋಷ ತಂದಿದೆ ಎಂದರು.

ಬೆಂಗಳೂರು ನಗರ ಬಹಳ ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ಬಸ್ ನಿಲ್ದಾಣ ಹಾಗೂ ಮೆಟ್ರೋ ರೈಲು ನಿಲ್ದಾಣವಿರುವ ಸೂಕ್ತ ಸ್ಥಳದಲ್ಲಿ ಪಾಲಿಕೆ ಬಜಾರ್ ನಿರ್ಮಾಣವಾಗಿದೆ. ಇದರಿಂದ ಬಹಳ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಶಾಸಕ ಎಂ.ಕೃಷ್ಣಪ್ಪ ಮಾತನಾಡಿ, ಬೀದಿ ವ್ಯಾಪಾರಿಗಳಿಂದ ಸಾರ್ವಜನಿಕರಿಗೆ ಹಾಗೂ ಅಕ್ಕಪಕ್ಕದ ವ್ಯಾಪಾರಿಗಳಿಗೆ ತೊಂದರೆ ಉಂಟಾಗುತ್ತಿತ್ತು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಪಾಲಿಕೆ ಬಜಾರ್‌ ನಿರ್ಮಿಸಲಾಗಿದೆ. ಅಭಿವೃದ್ಧಿ ಯೋಜನೆಗೆ ಹಣ ಇಲ್ಲ ಎಂದು ಕೆಲವರು ಟೀಕೆ ಮಾಡುತ್ತಿದ್ದಾರೆ. ಆದರೆ, ಹೊಸಹಳ್ಳಿ ಶಾಲೆ ಕಟ್ಟಡ ನಿರ್ಮಾಣ, ಕನಕ ಭವನ, ಸ್ಪೋಟ್ಸ್‌ ಕಾಂಪ್ಲೆಕ್ಸ್‌, ಅಂಬೇಡ್ಕರ್ ಭವನ, ನಾಡಪ್ರಭು ಕೆಂಪೇಗೌಡ ಕರ್ಮಷಿಯಲ್‌ ಕಾಂಪ್ಲೆಕ್ಸ್‌ ಸೇರಿದಂತೆ ಹಲವು ಅಭಿವೃದ್ಧಿ ಕೆಲಸ ಮಾಡಲಾಗುತ್ತಿದೆ ಎಂದರು.

ಇದೇ ವೇಳೆ ಪಾಲಿಕೆ ಬಜಾರ್ ಮುಂಭಾಗದಲ್ಲಿ ಪ್ರತಿಷ್ಠಾಪಿಸಲಾದ ಶ್ರೀ ಕೃಷ್ಣದೇವರಾಯ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು. ಗೋವಿಂದ ರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಿಯಾ ಕೃಷ್ಣ, ಬಿಬಿಎಂಪಿ ಆಡಳಿತಾಧಿಕಾರಿ ಉಮಾಶಂಕರ್‌, ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌, ಕಲಾವಿದ ಸಾಧು ಕೋಕಿಲ, ಕಾಂಗ್ರೆಸ್‌ ಮುಖಂಡ ಶಿವಣ್ಣ ಹಾಜರಿದ್ದರು.

ಗ್ಯಾರಂಟಿ ಯೋಜನೆ ನಿಲ್ಲಿಸಲ್ಲ

ಸರ್ಕಾರ ಅಧಿಕಾರಕ್ಕೆ ಬಂದು 15 ತಿಂಗಳಿನಲ್ಲಿ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಿದ್ದೇವೆ. ಎಲ್ಲ ಧರ್ಮ, ಜಾತಿಯ ಬಡವರಿಗೆ ಗ್ಯಾರಂಟಿ ಯೋಜನೆ ಜಾರಿಗೊಳಿಸಲಾಗಿದೆ. ವಿರೋಧ ಪಕ್ಷದವರು ಲೋಕಸಭಾ ಚುನಾವಣೆ ಬಳಿಕ ಗ್ಯಾರಂಟಿ ಯೋಜನೆಗಳು ನಿಲ್ಲಿಸಲಾಗುತ್ತದೆ ಎಂದು ಹೇಳುತ್ತಿದ್ದರು. ಯಾವ ಕಾರಣಕ್ಕೂ ಕೂಡ ಐದು ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಶಕ್ತಿ, ಅನ್ನ ಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮಿ, ಯುವನಿಧಿ ಯೋಜನೆಗಳು ಮಹಿಳೆಯರಿಗೆ ಸಾಮಾಜಿಕ, ಆರ್ಥಿಕವಾಗಿ ಶಕ್ತಿ ತುಂಬುವ ಕಾರ್ಯಕ್ರಮಗಳಾಗಿವೆ. ರಾಜಕೀಯ ಸ್ವಾತಂತ್ರ್ಯದ ಜತೆಗೆ ಸಾಮಾಜಿಕ, ಆರ್ಥಿಕ ಸ್ವಾತಂತ್ಯ್ರ ದೊರೆತಾಗ ಮಾತ್ರ ದೇಶದಲ್ಲಿ ಬಡತನ ತೊಲಗಿಸಿ ಸಾಮಾಜಿಕ ಸಮಾನತೆ ತರಲು ಸಾಧ್ಯವಾಗುತ್ತದೆ ಎಂದರು.

ವಿಶ್ವಖ್ಯಾತಿ ನಗರವಾಗಿರುವ ಯತ್ನ

ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಯೋಜನೆಗಳು ಕುಂಠಿತವಾಗಿವೆ ಎಂದು ಪ್ರತಿಪಕ್ಷದವರು ಟೀಕೆ ಮಾಡುತ್ತಾರೆ. ಬಜೆಟ್‌ನಲ್ಲಿ 1.60 ಲಕ್ಷ ಕೋಟಿ ರು.ಗಳನ್ನು ಅಭಿವೃದ್ಧಿ ಯೋಜನೆಗಳಿಗೆ ವೆಚ್ಚ ಮಾಡಲಾಗುತ್ತಿದೆ. ಆದರೆ, ಗ್ಯಾರಂಟಿ ಯೋಜನೆಗಳಿಗೆ 56 ಸಾವಿರ ಕೋಟಿ ರು, ಮಾತ್ರ ವೆಚ್ಚ ಮಾಡಲಾಗುತ್ತಿದೆ ಎಂದರು. ಕಳೆದ ಸಂಪುಟ ಸಭೆಯಲ್ಲಿ ಬೆಂಗಳೂರಿಗೆ ಸಂಬಂಧಿಸಿದ ಹಲವು ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಬೆಂಗಳೂರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ಹಾಗೂ ಬ್ರ್ಯಾಂಡ್‌ ಬೆಂಗಳೂರು ಮಾಡುವುದು ನಮ್ಮ ಉದ್ದೇಶ. ಆ ದಿಕ್ಕಿನಲ್ಲಿ ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಕೃಷ್ಣಪ್ಪಗೆ ಸಚಿವ ಸ್ಥಾನಕ್ಕೆ ಕೂಗು

ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣದ ವೇಳೆ ವೇದಿಕೆ ಮುಂಭಾಗದಲ್ಲಿ ಇದ್ದ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರು ಶಾಸಕ ಎಂ.ಕೃಷ್ಣಪ್ಪ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿದರು. ಆಗ ಸಿದ್ದರಾಮಯ್ಯ ಕೃಷ್ಣಪ್ಪ ಜನಪರ ಕಾಳಜಿ ಇಟ್ಟುಕೊಂಡಿದ್ದಾರೆ. ಕೃಷ್ಣಪ್ಪ ಅವರು ಕಾಂಗ್ರೆಸ್ ಹಿರಿಯ ನಾಯಕರು. ಅವರನ್ನು ನಮ್ಮ ಪಕ್ಷ ಯಾವತ್ತೂ ಬಿಟ್ಟುಕೊಡುವುದಿಲ್ಲ ಎಂದರು.