ಸಾರಾಂಶ
ಪಾಕಿಸ್ತಾನದ ಸರ್ಕಾರದ ಕೃಪಾಪೋಷಿತ ಲಷ್ಕರ್ ಎ ತೊಯ್ಬಾ, ಜೈಷ್ ಎ ಮೊಹಮ್ಮದ್ ಮತ್ತು ಹಿಜ್ಬುಲ್ ಮುಜಾಹಿದೀನ್ ಸಂಘಟನೆಗೆ ಭಾರತ ಚೇತರಿಸಿಕೊಳ್ಳಲಾರದ ಪೆಟ್ಟು ನೀಡಿದೆ.
ನವದೆಹಲಿ: ಇತ್ತೀಚಿನ ಪಹಲ್ಗಾಂ ಸೇರಿದಂತೆ ಕಳೆದ 2-3 ದಶಕಗಳಿಂದ ತನ್ನ ಉಗ್ರ ಕೃತ್ಯಗಳ ಮೂಲಕ ಭಾರತಕ್ಕೆ ಇನ್ನಿಲ್ಲದಂತೆ ತೊಂದರೆ ನೀಡುತ್ತಿದ್ದ ಪಾಕಿಸ್ತಾನದ ಸರ್ಕಾರದ ಕೃಪಾಪೋಷಿತ ಲಷ್ಕರ್ ಎ ತೊಯ್ಬಾ, ಜೈಷ್ ಎ ಮೊಹಮ್ಮದ್ ಮತ್ತು ಹಿಜ್ಬುಲ್ ಮುಜಾಹಿದೀನ್ ಸಂಘಟನೆಗೆ ಭಾರತ ಚೇತರಿಸಿಕೊಳ್ಳಲಾರದ ಪೆಟ್ಟು ನೀಡಿದೆ. ‘ಆಪರೇಷನ್ ಸಿಂದೂರ್’ ಹೆಸರಲ್ಲಿ ಭಾರತೀಯ ಸೇನೆ ಮಂಗಳವಾರ ತಡರಾತ್ರಿ 9 ಸ್ಥಳಗಳ ಮೇಲೆ ನಡೆಸಿದ ಭರ್ಜರಿ ದಾಳಿಯು ಭಾರೀ ಪ್ರಮಾಣದ ಉಗ್ರರ ಸಾವು ಮತ್ತು ಭಾರೀ ಪ್ರಮಾಣದಲ್ಲಿ ಉಗ್ರರ ಮೂಲಸೌಕರ್ಯ ನಾಶಕ್ಕೆ ಕಾರಣವಾಗಿದೆ.
ಹೀಗೆ ದಾಳಿಗೊಳಗಾದ ತಾಣಗಳಲ್ಲಿ ಜೈಷ್ ಎ ಮೊಹಮ್ಮದ್ ಸಂಘಟನೆ ಮತ್ತು ಲಷ್ಕರ್ ಸಂಘಟನೆಯ ಕೇಂದ್ರ ಕಚೇರಿಗಳು, ಉಗ್ರರ ತರಬೇತಿ ಕೇಂದ್ರಗಳು ಮತ್ತು ಅವರ ಲಾಂಚ್‌ಪ್ಯಾಡ್ ಕೂಡಾ ಸೇರಿವೆ. ಜೊತೆಗೆ ಮುಂಬೈ ದಾಳಿಕೋರ ಕಸಬ್ ಮತ್ತು ಇತ್ತೀಚೆಗೆ ಅಮೆರಿಕದಿಂದ ಭಾರತಕ್ಕೆ ಗಡೀಪಾರದ ತಹಾವುರ್ ರಾಣಾಗೆ ತರಬೇತಿ ನೀಡಿದ್ದ ಮುರೀದ್‌ಕೆ ಕ್ಯಾಂಪ್ ಕೂಡಾ ಭಾರತದ ದಾಳಿಯಲ್ಲಿ ಪೂರ್ಣ ಧ್ವಂಸಗೊಂಡಿದೆ.ಭಾರತದ ವಾಯುಸೀಮೆ ದಾಟಿ ಹೋಗದೆಯೇ ಪಾಕಿಸ್ತಾನದ 4 ಮತ್ತು ಪಾಕ್ ಆಕ್ರಮಿತ ಕಾಶ್ಮೀರದ 5 ಪ್ರದೇಶಗಳ ಮೇಲೆ ನಡೆಸಿದ ಪ್ರಿಸಿಷನ್ ಸ್ಟ್ರೈಕ್ (ನಿರ್ದಿಷ್ಟ ಪ್ರದೇಶದ ಮೇಲೆ ದಾಳಿ), ಭಾರತೀಯ ಸೇನೆಯ ಸಾಮರ್ಥ್ಯವನ್ನು ಮತ್ತೊಮ್ಮೆ ಸಾರಿ ಹೇಳಿದೆ.
ಖಚಿತ ಮಾಹಿತಿ:
ಉಗ್ರರ ತರಬೇತಿ ಕ್ಯಾಂಪ್, ಲಾಂಚ್‌ಪ್ಯಾಡ್ ಮತ್ತು ಅವುಗಳಲ್ಲಿ ಉಗ್ರರ ಇರುವಿಕೆ ಕುರಿತು ಭಾರತೀಯ ಗುಪ್ತಚರ ಸಂಸ್ಥೆಗಳು ನೀಡಿದ್ದ ಖಚಿತ ಮಾಹಿತಿಯನ್ನು ಆಧರಿಸಿ ಭಾರತೀಯ ಸೇನೆ 9 ಸ್ಥಳಗಳ ಮೇಲೆ ಪ್ರಿಸಿಷನ್ ದಾಳಿ ನಡೆಸಿದೆ. ಈ ಪೈಕಿ ಒಂದು ಉಗ್ರರ ತರಬೇತಿ ಕೇಂದ್ರವನ್ನಂತೂ ಆರೋಗ್ಯ ಕೇಂದ್ರವೆಂಬು ಬಿಂಬಿಸಿ, ಅಂತಾರಾಷ್ಟ್ರೀಯ ನಿರ್ಬಂಧದಿಂದ ತಪ್ಪಿಸಿಕೊಳ್ಳುವ ಯತ್ನವನ್ನು ಪಾಕಿಸ್ತಾನ ಮಾಡಿತ್ತು. ಆದರೆ ಇದೀಗ ಆ ಕೇಂದ್ರವನ್ನೂ ಧ್ವಂಸಗೊಳಿಸಲಾಗಿದೆ.
ಎಲ್ಲೆಲ್ಲಿ ದಾಳಿ?
ಕಸಬ್, ಹೆಡ್ಲಿಗೆ ತರಬೇತಿ ನೀಡಿದ್ದ ಮುರೀದ್‌ಕೆ ಧ್ವಂಸಲಾಹೋರ್‌ನಿಂದ 30 ಕಿ.ಮೀ ದೂರದಲ್ಲಿರುವ ಮುರೀದ್‌ಕೆ, 1990ರಿಂದಲೂ ಲಷ್ಕರ್‌ನ ಕೇಂದ್ರ ಕಾರ್ಯಸ್ಥಾನ. ಮುಂಬೈ ದಾಳಿಕೋರ ಕಸಬ್, ಡೇವಿಡ್ ಹೆಡ್ಲಿ ಮತ್ತು ತಹಾವುರ್ ರಾಣಾಗೆ ಇಲ್ಲಿಯೇ ತರಬೇತಿ ನೀಡಲಾಗಿತ್ತು. ಇಲ್ಲಿ ಅತಿಥಿಗೃಹ ನಿಮಿಸಲು ಅಲ್‌ಖೈದಾ ಸಂಸ್ಥಾಪಕ ಒಸಾಮಾ ಬಿನ್ ಲಾಡೆನ್ 10 ಲಕ್ಷ ರು. ನೀಡಿದ್ದ. ಹಫೀಜ್ ಸಯೀದ್ ನೇತೃತ್ವ ಹೊಂದಿರುವ ಲಷ್ಕರ್ ಸಂಘಟನೆ, ಜಮ್ಮು ಮತ್ತು ಕಾಶ್ಮೀರ, ಬೆಂಗಳೂರು, ಹೈದ್ರಾಬಾದ್ ಸೇರಿದಂತೆ ದೇಶದ ಹಲವು ಸ್ಥಳಗಳಲ್ಲಿ ನಡೆಸಿದ ಭಯೋತ್ಪಾದನಾ ದಾಳಿಗೆ ಕಾರಣವಾಗಿತ್ತು.
ಮುರೀದ್‌ಕೆಯಲ್ಲಿನ ಮರ್ಕಜ್ (ಕೇಂದ್ರ) ತೈಬಾವು, ಭಯೋತ್ಪಾದನೆ ಫ್ಯಾಕ್ಟರಿ ಎಂಬ ಕುಖ್ಯಾತಿ ಹೊಂದಿದೆ. ಇದು ಲಷ್ಕರ್ ಪಾಲಿಗೆ ಅತ್ಯಂತ ಮಹತ್ವದ ತರಬೇತಿ ಕೇಂದ್ರ. ಇಲ್ಲಿಯೇ ಯುವಕರನ್ನು ನೇಮಕ ಮಾಡುವ, ಅವರಲ್ಲಿ ಮತಾಂಧತೆ ತುಂಬುವ, ದೈಹಿಕ ತರಬೇತಿ ನೀಡುವ ಕೆಲಸ ಮಾಡಲಾಗುತ್ತದೆ. ಈ ಪ್ರದೇಶದ ಮೇಲೆ ಸತತ 4 ದಾಳಿ ನಡೆಸಿ ಮೆಹ್‌ಮೂನಾ ಝೋಯಾ ಮತ್ತು ಮರ್ಕಜ್ ತೈಬಾ ಕೇಂದ್ರಗಳನ್ನು ಧ್ವಂಸಗೊಳಿಸಲಾಗಿದೆ. ಇಲ್ಲಿ 1000ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಾನಾ ರೀತಿಯ ತರಬೇತಿ ಪಡೆಯುತ್ತಿದ್ದರು.ಮಸೂದ್ ಅಜರ್‌ನ ಜೈಷ್
ಹೆಡ್ಡಾಪೀಸ್ ಪೀಸ್ ಪೀಸ್
ಗಡಿಯಿಂದ 100 ಕಿ.ಮೀ ದೂರದ ಬಹಾವಲ್ಪುರ1999ರಲ್ಲಿ ಭಾರತದ ಜೈಲಿನಿಂದ ಬಿಡುಗಡೆಯಾದ ಬಳಿಕ ಜೈಷ್ ಎ ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್, ಈ ಪ್ರದೇಶವನ್ನು ತನ್ನ ಕಾರ್ಯಾಚರಣೆಯ ಪ್ರಮುಖ ಕೇಂದ್ರವಾಗಿಸಿಕೊಂಡಿದ್ದಾನೆ. ಪಾಕಿಸ್ತಾನ ಸರ್ಕಾರದ ಗುಪ್ತಚರ ಸಂಸ್ಥೆ ಐಎಸ್‌ಐ, ಹಿಂದಿನ ತಾಲಿಬಾನ್ ಸರ್ಕಾರ ಮತ್ತು ಒಸಾಮಾ ಬಿನ್ ಲಾಡೆನ್, ಸುನ್ನಿ ಪ್ರತ್ಯೇಕತಾವಾದಿ ಸಂಘಟನೆಗಳ ನೆರವಿನೊಂದಿಗೆ ಮಸೂದ್ 2000ನೇ ಇಸವಿಯಲ್ಲಿ ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆ ಸ್ಥಾಪಿಸಿದ್ದ. ಅದೇ ವರ್ಷ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ಮೇಲಿನ ದಾಳಿ, 2001ರ ಸಂಸತ್ ದಾಳಿ, 2016ರಲ್ಲಿ ಪಠಾಣ್‌ಕೋಟ್ ವಾಯುನೆಲೆ ಮೇಲಿನ ದಾಳಿ, 2019ರ ಪುಲ್ವಾಮಾ ದಾಳಿಗೆ ಕಾರಣನಾಗಿದ್ದ. ಜಾಗತಿಕ ಉಗ್ರ ಎಂದು ಘೋಷಿಸಲ್ಪಟ್ಟಿರುವ ಅಜರ್, 2019ರ ಬಳಿಕ ಎಲ್ಲೂ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ.
ಬಹಾವಲ್‌ಪುರದ ಮರ್ಕಜ್ ಸುಭಾನಲ್ಲಾಹ್ ಕೇಂದ್ರದಲ್ಲಿ ಜೈಷ್, ತನ್ನ ಸಂಘಟನೆಗೆ ಯುವಕರನ್ನು ನೇಮಕ ಮಾಡುವ ಮತ್ತು ಅವರಿಗೆ ತರಬೇತಿ ನೀಡುವ ಕೆಲಸ ಮಾಡುತ್ತಿದೆ. 40 ಜನರ ಬಲಿ ಪಡೆದ ಪುಲ್ವಾಮಾ ದಾಳಿಯ ಸಂಚು ರೂಪು ಇಲ್ಲೇ ರೂಪುಗೊಂಡಿತ್ತು. ಗಡಿಯಿಂದ 100 ಕಿ.ಮೀ ದೂರದಲ್ಲಿದೆ. 15 ಎಕರೆ ಪ್ರದೇಶದಲ್ಲಿ ಈತನ ಸಾಮ್ರಾಜ್ಯ ನಿರ್ಮಾಣವಾಗಿದೆ.ಆಸ್ಪತ್ರೆಯೊಳಗೆ ಉಗ್ರ ಲಾಂಚ್‌ಪ್ಯಾಡ್,
ಭಾರತಕ್ಕೆ ಡ್ರಗ್ಸ್, ಶಸ್ತ್ರ ರವಾನೆ ಇಲ್ಲಿಂದ
ಸರ್ಜಲ್ ಎಂಬ ಕಂಟ್ರೋಲ್ ರೂಂ । ಗಡಿಯಿಂದ 9 ಕಿ.ಮೀ ದೂರ ಇದು ಪಾಕಿಸ್ತಾನಲ್ಲಿದ್ದು, ಅಂತಾರಾಷ್ಟ್ರೀಯ ಗಡಿರೇಖೆಯಿಂದ 9 ಕಿ.ಮೀ ಒಳಗಿದೆ. ಕಳೆದ ಮಾರ್ಚ್‌ನಲ್ಲಿ ಜಮ್ಮುವಿನಲ್ಲಿ ಪೊಲೀಸರನ್ನು ಬಲಿಪಡೆದ ದಾಳಿ ಸಂಚು ರೂಪುಗೊಂಡಿದ್ದು ಇಲ್ಲೇ. ಇದು ಲಷ್ಕರ್ ಉಗ್ರರ ಪ್ರಮುಖ ಲಾಂಚ್‌ಪ್ಯಾಡ್. ಈ ಕೇಂದ್ರವನ್ನು ಸ್ಥಳೀಯ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಇಡುವ ಮೂಲಕ ಅಂತಾರಾಷ್ಟ್ರೀಯ ಸಮುದಾಯದ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡಲಾಗಿದೆ. ಇದಲ್ಲದೆ ಭಾರತಕ್ಕೆ ಶಸ್ತ್ರಾಸ್ತ್ರ, ಮಾದಕ ವಸ್ತು ಏರ್‌ಡ್ರಾಪ್ ಮಾಡಲು ಬಳಸುವ ಡ್ರೋನ್‌ಗಳನ್ನೂ ಇಲ್ಲಿದಂತಲೇ ಹಾರಿಬಿಡಲಾಗುತ್ತದೆ. ಇದರಲ್ಲಿ ಕಂಟ್ರೋಲ್ ರೂಂ, ಎಚ್‌ಎಫ್ ರಿಸೀವರ್‌ಗಳು, ಇತರೆ ಸಂವಹನ ವ್ಯವಸ್ಥೆ ಕಲ್ಪಿಸಲಾಗಿದೆ. 6 - 7 ಕೊಠಡಿಗಳನ್ನು ಹೊಂದಿರುವ ಒಂದೇ ಕಟ್ಟಡ ಇದಾಗಿದೆ.
ಆರೋಗ್ಯ ಕೇಂದ್ರದ ಹೆಸರಲ್ಲಿದ್ದ ಮೆಹ್‌ಮೂನಾ ಇನ್ನು ಇತಿಹಾಸ
ಭಾರತದ ಹೊಡೆತಕ್ಕೆ ತಂಡಾ ಥಂಡಾ
ಇದು ಪಾಕಿಸ್ತಾನದ ಸಿಯಾಲ್‌ಕೋಟ್‌ನಲ್ಲಿದೆ. ಇದನ್ನು ಆರೋಗ್ಯ ಕೇಂದ್ರವೆಂದು ಜಗತ್ತಿಗೆ ತೋರಿಸಿ ಒಳಗೆ ಜಮ್ಮು ವಲಯಯಲ್ಲಿ ಒಳನುಸುಳುವಿಕೆ ಕುರಿತು ಹಿಜ್ಬುಲ್ ಮುಜಾಹಿದೀನ್ ಉಗ್ರರಿಗೆ ತರಬೇತಿ ನೀಡಲಾಗುತ್ತಿತ್ತು. ಇರ್ಫಾನ್ ತಂಡಾ ನೇತೃತ್ವದ ಈ ಕ್ಯಾಂಪ್‌ನಲ್ಲಿ 30 ಉಗ್ರರ ವಾಸದ ಬಗ್ಗೆ ಮಾಹಿತಿ ಇತ್ತು. ಜಮ್ಮು ನಗರದ ಮೇಲೆ ಉಗ್ರ ದಾಳಿಯ ಹಿಂದೆ ತಂಡಾನ ಕೈವಾಡ ಕಂಡುಬಂದಿತ್ತು. ಇದು ಅಂತಾರಾಷ್ಟ್ರೀಯ ಗಡಿಯಿಂದ 12 ಕಿ.ಮೀ ಒಳಗಿದೆ. ಕಥುವಾ- ಜಮ್ಮು ವಲಯದಲ್ಲಿ ಭಯೋತ್ಪಾದನೆ ಇದರ ಮುಖ್ಯ ಗುರಿ. 2016ರ ಪಠಾಣ್‌ಕೋಟ್ ವಾಯುನೆಲೆ ಮೇಲಿನ ದಾಳಿಗೆ ಸೂಚನೆ ಬಂದಿದ್ದು ಇಲ್ಲಿಂದಲೇ.
ಮಸೀದಿ ಆವರಣದಲ್ಲಿದ್ದ ಸೈದಾನಾ ಬಿಲಾಲ್ ಕ್ಯಾಂಪ್
ಇದು ಪಿಒಕೆಯ ಮುಜಫ್ಫರಾಬಾದ್‌ನಲ್ಲಿದೆ. ಸೈದಾನಾ ಬಿಲಾಲ್ ಮಸೀದಿಯ ಪಕ್ಕದಲ್ಲೇ ಈ ಕೇಂದ್ರ ನಿರ್ಮಿಸಲಾಗಿದೆ. 3 ಮಹಡಿಯ ಮಸೀದಿ ಕಟ್ಟಡದಲ್ಲಿ, 2 ಮಹಡಿಯಲ್ಲಿ ಚಿಕಿತ್ಸಾ ಕೇಂದ್ರವಿದ್ದರೆ, ಇನ್ನೊಂದು ಮಹಡಿಯಲ್ಲಿ ಜೈಷ್ ಉಗ್ರ ಸಂಘಟನೆಯ ದತ್ತಿ ಸಂಸ್ಥೆಯ ಕಟ್ಟಡವಿದೆ. ಉಗ್ರರನ್ನು ಲಾಂಚ್‌ಪ್ಯಾಡ್‌ಗೆ ಕಳುಹಿಸುವ ಮುನ್ನ ಇಲ್ಲಿ ಇರಿಸಲು ಕಟ್ಟಡ ಬಳಸಲಾಗುತ್ತಿತ್ತು. ಇಲ್ಲಿ ಜೈಷ್ ಉಗ್ರರಿಗೆ ಪಾಕಿಸ್ತಾನ ಸೇನೆಯೇ ತರಬೇತಿ ನೀಡುತ್ತದೆ. ಇಲ್ಲಿಯೂ ಕನಿಷ್ಠ 50-100 ಉಗ್ರರು ತಂಗಿರುವ ಅಂದಾಜಿತ್ತು.
ಲಷ್ಕರ್ ಉಗ್ರರಿಗೆ ಆತ್ಮಾಹುತಿ ತರಬೇತಿ ಕೇಂದ್ರ ಛಿದ್ರ ಛಿದ್ರ
ಇದು ಪಾಕ್ ಆಕ್ರಮಿತ ಕಾಶ್ಮೀರದ ಕೋಟ್ಲಿಯಲ್ಲಿದೆ. ಈತ ಕುಖ್ಯಾತ ಉಗ್ರ ಅಸ್ಘರ್‌ನ ಆಪ್ತ ಖ್ವಾರಿ ಝರಾರ್‌ನ ಅಡಗುತಾಣ. ಇಲ್ಲಿ ಜೈಷ್‌ಗೆ ಸೇರಿದ ಕನಿಷ್ಠ 100-125 ಉಗ್ರರು ಇರುವ ಶಂಕೆ ಇದೆ. ಪೂಂಚ್ ಮತ್ತು ರಾಜೌರಿಯ ವಲಯದಲ್ಲಿ ಉಗ್ರರನ್ನು ಒಳನುಸುಳಿಸಲು ಈ ಕ್ಯಾಂಪ್ ಬಳಸಲಾಗುತ್ತಿತ್ತು ಮತ್ತು ಬಹುತೇಕ ಉಗ್ರ ದಾಳಿಗಳ ಸಂಚು ಇಲ್ಲೇ ರೂಪುಗೊಂಡಿತ್ತು. ಲಷ್ಕರ್‌ನ ಆತ್ಮಾಹುತಿ ದಾಳಿಗೆ ಇಲ್ಲೇ ತರಬೇತಿ ನೀಡಲಾಗುತ್ತದೆ. ಆದರೆ ಸೇನೆಯ ಕ್ಷಿಪಣಿ ದಾಳಿ ಹೊಡೆತಕ್ಕೆ ಈ ಕೇಂದ್ರ ಛಿದ್ರ ಛಿದ್ರವಾಗಿದೆ.
ಮಸೀದಿ ಆವರಣದಲ್ಲಿದ್ದ ಉಗ್ರ ಮರ್ಕಜ್ ರಹೀಲ್ ಶಹೀದ್
ಇದು ಪಿಒಕೆಯ ಕೋಟ್ಲಿಯಲ್ಲಿದೆ. ಇಲ್ಲಿ ಹಿಜ್ಬುಲ್ ಮುಜಾಹಿದೀನ್ ಉಗ್ರರಿಗೆ ಪಾಕಿಸ್ತಾನದ ಬಾರ್ಡರ್ ಆ್ಯಕ್ಷನ್ ಟೀಂನಿಂದ ಸ್ನಿಪ್ಪರ್ ದಾಳಿಯ ಬಗ್ಗೆ ತರಬೇತಿ ನೀಡಲಾಗುತ್ತದೆ.ಪಹಲ್ಗಾಂ ನರಮೇಧ ನಡೆಸಿದ
ಉಗ್ರ ತರಬೇತಿ ಕೇಂದ್ರ ಇನ್ನಿಲ್ಲ
ಗಡಿಯಿಂದ 30 ಕಿ.ಮೀದ ದೂರದ ಶವಾಯ್ ನಲ್ಲಾ ಇದು ಕೂಡಾ ಪಿಒಕೆಯಲ್ಲಿದೆ. ಎಲ್‌ಒಸಿಯಿಂದ 30 ಕಿ.ಮೀ ದೂರದಲ್ಲಿನ ಈ ಕೇಂದ್ರವು ಲಷ್ಕರ್‌ನ ಪ್ರಮುಖ ತರಬೇತಿ ಕೇಂದ್ರಗಳ ಪೈಕಿ ಒಂದು. ಇಲ್ಲಿ ತರಬೇತಿ ಪಡೆದ ಉಗ್ರರೇ, ಕಳೆದ ವರ್ಷ ಗುಲ್ಮಾರ್ಗ್ ಮತ್ತು ಸೋನ್ಮಾರ್ಗ್‌ನಲ್ಲಿ ಕಳೆದ ವರ್ಷ ನಾಗರಿಕರು ಮೇಲಿನ ದಾಳಿ ಮತ್ತು ಇತ್ತೀಚಿನ ಪಹಲ್ಗಾಂ ದಾಳಿಯನ್ನು ನಡೆಸಿದ್ದಾರೆ. ಇಲ್ಲಿ ಉಗ್ರರು ಮತ್ತು ಅವರ ತರಬೇತಿದಾರರಿಗೆ ದೊಡ್ಡ ಸೌಕರ್ಯ ಕಲ್ಪಿಸಲಾಗಿದೆ. ಇಲ್ಲಿ ಉಗ್ರರಿಗೆ ದೈಹಿಕ ತರಬೇತಿ, ಜಿಪಿಎಸ್ ಬಳಕೆ, ಭೂಪಟ ಅರಿಯುವುದು, ಅಳೆಯುವುದು ಹೇಗೆ? ರೈಫಲ್, ಗ್ರೆನೇಡ್ ಬಳಕೆ ಬಗ್ಗೆ ತರಬೇತಿ ನೀಡಲಾಗುತ್ತದೆ.
ಬರ್ನಾಲಾ ಕ್ಯಾಂಪ್‌ಗೆ ಬರ್ನಲ್ ಹಚ್ಚಿದ ಭಾರತೀಯ ಸೇನೆ!
ಎಲ್‌ಒಸಿಯಿಂದ 9 ಕಿ.ಮೀ ದೂರಇದು ಜಮ್ಮು ಮತ್ತು ಕಾಶ್ಮೀರದ ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ)ಯಿಂದ 9 ಕಿ.ಮೀ ದೂರದಲ್ಲಿದೆ. ಉಗ್ರ ಕೃತ್ಯಕ್ಕೆ ನೇಮಕಗೊಂಡವರಿಗೆ ಇಲ್ಲಿ ಶಸ್ತ್ರಾಸ್ತ್ರ ಮತ್ತು ಸ್ಫೋಟಕ ಪದಾರ್ಥಗಳ ಬಳಕೆಗೆ ತರಬೇತಿ ನೀಡಲಾಗುತ್ತಿತ್ತು. ಇದಲ್ಲದೆ ದೀರ್ಘಕಾಲೀನ ಕಾರ್ಯಾಚರಣೆ ವೇಳೆ ಕಾಡಿನಲ್ಲಿ ಬದುಕುವುದು ಹೇಗೆ ಎಂಬುದನ್ನೂ ಕಲಿಸಲಾಗುತ್ತದೆ. ಪೂಂಚ್- ರಜೌರಿ ಪ್ರದೇಶಕ್ಕೆ ಉಗ್ರರ ಒಳನುಸುಳುವಿಕೆ, ಶಸ್ತ್ರಾಸ್ತ್ರ ಪೂರೈಕೆಗೆ ಇದೇ ಕೇಂದ್ರವನ್ನು ಬಳಸಿಕೊಳ್ಳಲಾಗುತ್ತಿತ್ತು. ಇಲ್ಲಿ 100-150 ಉಗ್ರರಿಗೆ ನಾನಾ ರೀತಿಯ ತರಬೇತಿ ನೀಡುವ ವ್ಯವಸ್ಥೆ ಇದ್ದು, ಸದಾ ಕಾಲ ಕನಿಷ್ಠ 40-50 ಉಗ್ರರು ತರಬೇತಿ ಪಡೆಯುತ್ತಿರುತ್ತಾರೆ. 2023ರಲ್ಲಿ ಕಾಶ್ಮೀರ ಧಂಗ್ರಿ ಮತ್ತು 2024ರ ರಜೌರಿ ಹತ್ಯಾಕಾಂಡದ ಸಂಚು ನಡೆದಿದ್ದು ಇಲ್ಲೇ. ಲಷ್ಕರ್ ಉಗ್ರರ ಚಟುವಟಿಕೆ ಪರಿಶೀಲಿಸಲು ಉಗ್ರ ನಾಯಕರು ಸದಾ ಇಲ್ಲಿಗೇ ಭೇಟಿ ನೀಡುತ್ತಿರುತ್ತಾರೆ.
ಉಗ್ರರ ಪ್ರಮುಖ ತಾಣ, ತರಬೇತಿ ಕೇಂದ್ರ ಸೇರಿ 9 ಸ್ಥಳಗಳ ಮೇಲೆ ದಾಳಿ । ಖಚಿತ ಗುಪ್ತಚರ ಮಾಹಿತಿ ಆಧರಿಸಿ ನಿರ್ದಿಷ್ಟ ಪ್ರದೇಶಗಳ ಮೇಲೆ ಅಟ್ಯಾಕ್
ಕಸಬ್‌ಗೆ ತರಬೇತಿ ನೀಡಿದ ಕ್ಯಾಂಪ್, ಉಗ್ರರ ಹೆಡ್ಡಾಫೀಸೇ ಪೀಸ್ ಪೀಸ್ । ದಾಳಿಯಲ್ಲಿ ನಾಗರಿಕರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಿದ್ದ ಸೇನೆ
ತನ್ನ ವಾಯುಸೀಮೆ ದಾಟದೆಯೇ ಸಾಮರ್ಥ್ಯ ಪ್ರದರ್ಶಿಸಿದ ಭಾರತೀಯ ಸೇನೆ । ಪಾಕಿಸ್ತಾನದ 4, ಪಾಕ್ ಆಕ್ರಮಿತ ಕಾಶ್ಮೀರದ 5 ಪ್ರದೇಶ ಸೇನೆ ಗುರಿ
ದಾಳಿಗೊಳಗಾದ ಸ್ಥಳಗಳು
ಪಾಕಿಸ್ತಾನ
ಸರ್ಜಲ್ (ಸಿಯಾಲ್‌ಕೋಟ್)
ಮೆಹ್‌ಮೂನಾ ಝೋಯಾ (ಮುರೀದ್‌ಕೆ)
ಮರ್ಕಜ್ ತೈಬಾ (ಮುರೀದ್‌ಕೆ)
ಮರ್ಕಜ್ ಸುಭಾನಲ್ಲಾಹ್ (ಬಹಾವಲ್‌ಪುರ)
ಪಾಕ್ ಆಕ್ರಮಿತ ಕಾಶ್ಮೀರ
ಶವಾಯ್ ನಲ್ಲಾ (ಮುಜಫ್ಫರಾಬಾದ್)
ಸೈದಾನಾ ಬಿಲಾಲ್ (ಮುಜಫ್ಫರಾಬಾದ್)
ಮರ್ಕಜ್ ರಹೀಲ್ ಶಹೀದ್ ಮತ್ತು ಅಬ್ಬಾಸ್ ಕ್ಯಾಂಪ್ (ಕೋಟ್ಲಿ)