ಎಫ್‌ಎಟಿಎಫ್‌ ಗ್ರೇ ಲಿಸ್ಟ್‌ಗೆ ಪಾಕ್‌ ಸೇರಿಸಲು ಭಾರತ ಯತ್ನ

| N/A | Published : May 24 2025, 12:16 AM IST / Updated: May 24 2025, 05:30 AM IST

ಎಫ್‌ಎಟಿಎಫ್‌ ಗ್ರೇ ಲಿಸ್ಟ್‌ಗೆ ಪಾಕ್‌ ಸೇರಿಸಲು ಭಾರತ ಯತ್ನ
Share this Article
  • FB
  • TW
  • Linkdin
  • Email

ಸಾರಾಂಶ

ಅಂತಾರಾಷ್ಟ್ರೀಯ ಅಕ್ರಮ ಹಣ ವರ್ಗಾವಣೆ ಮತ್ತು ಭಯೋತ್ಪಾದನೆಗೆ ಹಣಕಾಸು ನೆರವಿನ ಮೇಲೆ ಕಣ್ಗಾವಲು ಇಡುವ ಫೈನಾನ್ಷಿಯಲ್‌ ಆ್ಯಕ್ಷನ್‌ ಟಾಸ್ಕ್‌ ಫೋರ್ಸ್‌  ಮುಂದಿನ ಸಭೆಯಲ್ಲಿ ಪಾಕಿಸ್ತಾನವನ್ನು ಮತ್ತೆ ಬೂದುಪಟ್ಟಿ   ಸೇರಿಸುವಂತೆ ಭಾರತವು ಪ್ರಬಲವಾಗಿ ಒತ್ತಾಯಿಸುವ ನಿರೀಕ್ಷೆ ಇದೆ.

 ನವದೆಹಲಿ: ಅಂತಾರಾಷ್ಟ್ರೀಯ ಅಕ್ರಮ ಹಣ ವರ್ಗಾವಣೆ ಮತ್ತು ಭಯೋತ್ಪಾದನೆಗೆ ಹಣಕಾಸು ನೆರವಿನ ಮೇಲೆ ಕಣ್ಗಾವಲು ಇಡುವ ಫೈನಾನ್ಷಿಯಲ್‌ ಆ್ಯಕ್ಷನ್‌ ಟಾಸ್ಕ್‌ ಫೋರ್ಸ್‌ (ಎಫ್‌ಎಟಿಎಫ್‌) ಮುಂದಿನ ಸಭೆಯಲ್ಲಿ ಪಾಕಿಸ್ತಾನವನ್ನು ಮತ್ತೆ ಬೂದುಪಟ್ಟಿ (ಗ್ರೇ ಲಿಸ್ಟ್‌)ಗೆ ಸೇರಿಸುವಂತೆ ಭಾರತವು ಪ್ರಬಲವಾಗಿ ಒತ್ತಾಯಿಸುವ ನಿರೀಕ್ಷೆ ಇದೆ.

ಈ ಸಂಬಂಧ ಈಗಾಗಲೇ ಸಿದ್ಧತೆಗಳನ್ನೂ ಆರಂಭಿಸಿದೆ ಎನ್ನಲಾಗಿದ್ದು, ಈ ಮೂಲಕ ಉಗ್ರ ಪೋಷಕ ಪಾಕಿಸ್ತಾನವನ್ನು ಆರ್ಥಿಕವಾಗಿ ಕಟ್ಟಿಹಾಕಲು ಭಾರತ ಮತ್ತೊಮ್ಮೆ ಪ್ರಯತ್ನ ನಡೆಸಲಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ಎಫ್‌ಎಟಿಎಫ್‌ನ ಬೂದುಪಟ್ಟಿಗೆ ಯಾವುದೇ ದೇಶ ಸೇರ್ಪಡೆಯಾದರೆ ಆರ್ಥಿಕವಾಗಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆ ದೇಶಗಳ ಹಣಕಾಸು ವ್ಯವಹಾರಗಳ ಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ನಿಗಾ ಇರಿಸಲಾಗುತ್ತದೆ. ಇದು ವಿದೇಶಿ ನೇರ ಹೂಡಿಕೆ ಮತ್ತು ವಿದೇಶಿ ಹಣಕಾಸು ನೆರವಿನ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿರುತ್ತವೆ.

ಈ ಹಿಂದೆ 2018ರಲ್ಲಿ ಪಾಕಿಸ್ತಾನವನ್ನು ಬೂದುಪಟ್ಟಿಗೆ ಸೇರ್ಪಡೆ ಮಾಡಲಾಗಿತ್ತು. ಬಳಿಕ 2022ರಲ್ಲಿ ಆ ಪಟ್ಟಿಯಿಂದ ಹೊರಗಿಡಲಾಗಿತ್ತು. ಸದ್ಯ ವಿಶ್ವಾದ್ಯಂತ 25 ದೇಶಗಳು ಬೂದುಪಟ್ಟಿಯಲ್ಲಿವೆ.

ಮೂಲಗಳ ಪ್ರಕಾರ ಪಾಕಿಸ್ತಾನಕ್ಕೆ ವಿಶ್ವಬ್ಯಾಂಕ್‌ನಿಂದ ಮುಂದಿನ ಬಾರಿ ನೀಡುವ ಹಣಕಾಸು ನೆರವಿಗೂ ಭಾರತ ವಿರೋಧ ವ್ಯಕ್ತಪಡಿಸಲಿದೆ.

Read more Articles on