ಯುರೋಪ್‌ ದೇಶಗಳ ಮೇಲೆ ಅಮೆರಿಕ ತೆರಿಗೆ ದಾಳಿ, ಇರಾನ್‌, ಗ್ರೀನ್‌ಲ್ಯಾಂಡ್ ಮೇಲೆ ದಾಳಿ ಭೀತಿ, ಮಧ್ಯಪ್ರಾಚ್ಯದಲ್ಲಿನ ಬಿಕ್ಕಟ್ಟಿನ ನಡುವೆಯೇ ಯುಇಎ ಅಧ್ಯಕ್ಷ ಮೊಹಮ್ಮದ್‌ ಬಿನ್‌ ಜಾಯೇದ್‌ ಅಲ್‌ ನಹ್ಯಾನ್‌ ಸೋಮವಾರ ಭಾರತಕ್ಕೆ ಭೇಟಿ ನೀಡಿದ್ದರು.

ನವದೆಹಲಿ: ಯುರೋಪ್‌ ದೇಶಗಳ ಮೇಲೆ ಅಮೆರಿಕ ತೆರಿಗೆ ದಾಳಿ, ಇರಾನ್‌, ಗ್ರೀನ್‌ಲ್ಯಾಂಡ್ ಮೇಲೆ ದಾಳಿ ಭೀತಿ, ಮಧ್ಯಪ್ರಾಚ್ಯದಲ್ಲಿನ ಬಿಕ್ಕಟ್ಟಿನ ನಡುವೆಯೇ ಯುಇಎ ಅಧ್ಯಕ್ಷ ಮೊಹಮ್ಮದ್‌ ಬಿನ್‌ ಜಾಯೇದ್‌ ಅಲ್‌ ನಹ್ಯಾನ್‌ ಸೋಮವಾರ ಭಾರತಕ್ಕೆ ಭೇಟಿ ನೀಡಿದ್ದಸರು.

ಮೂರೂವರೆ ಗಂಟೆಗಳ ಕಿರು ಭೇಟಿಗಾಗಿ ಆಗಮಿಸಿದ್ದ ನಹ್ಯಾನ್‌ ಅವರನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ವಿಮಾನ ನಿಲ್ದಾಣಕ್ಕೆ ತೆರಳಿ ಆತ್ಮೀಯವಾಗಿ ಸ್ವಾಗತಿಸಿದರು. ಬಳಿಕ ಉಭಯ ನಾಯಕರು ಒಂದೇ ಕಾರಿನಲ್ಲಿ ಸಂಚರಿಸುವ ಮೂಲಕ ತಮ್ಮ ನಡುವಿನ ಸ್ನೇಹಕ್ಕೆ ಸಾಕ್ಷಿಯಾದರು.

ಒಪ್ಪಂದಕ್ಕೆ ಸಹಿ:

ಬಳಿಕ ಉಭಯ ದೇಶಗಳ ನಡುವೆ ಸಚಿವರು ಮತ್ತು ಅಧಿಕಾರಿಗಳ ನಡುವೆ ನಡೆದ ದ್ವಿಪಕ್ಷೀಯ ಮಾತುಕತೆ ವೇಳೆ ವ್ಯೂಹಾತ್ಮಕ ರಕ್ಷಣೆ, ಎಲ್‌ಎನ್‌ಜಿ ಖರೀದಿ, ಸುಧಾರಿತ ಪರಮಾಣು ತಂತ್ರಜ್ಞಾನ ಸಂಶೋಧನೆ, ದೊಡ್ಡ ಮತ್ತು ಸಣ್ಣಗಾತ್ರದ ಪರಮಾಣು ರಿಯಾಕ್ಟರ್‌ ಅಭಿವೃದ್ಧಿ, ಸುಧಾರಿತ ರಿಯಾಕ್ಟರ್‌ ವ್ಯವಸ್ಥೆಯಲ್ಲಿ ಸಹಕಾರ ಸೂಪರ್‌ ಕಂಪ್ಯೂಟರ್ ಕ್ಲಸ್ಟರ್‌ ಸ್ಥಾಪನೆ ಮೊದಲಾದ ವಿಷಯಗಳಿಗೆ ಸಂಬಂಧಿಸಿದಂತೆ ಉಭಯ ದೇಶಗಳು ಒಪ್ಪಂದಕ್ಕೆ ಸಹಿಹಾಕಿದವು.

ಅಲ್ಲದೆ 2032ರ ವೇಳೆಗೆ ಉಭಯ ದೇಶಗಳ ನಡುವಿನ ವ್ಯಾಪಾರವನ್ನು ವಾರ್ಷಿಕ 200 ಶತಕೋಟಿ ಡಾಲರ್‌ಗೆ ಹೆಚ್ಚಿಸಲೂ ಉಭಯ ದೇಶಗಳು ಗುರು ರೂಪಿಸಿವೆ.

ಗುಜರಾತ್‌ನ ಉಯ್ಯಾಲೆ ಗಿಫ್ಟ್‌:

ಈ ವೇಳೆ ಪ್ರಧಾನಿ ಮೋದಿ ಅವರ ತಮ್ಮ ತವರು ರಾಜ್ಯ ಗುಜರಾತ್‌ನ ಕುಶಲಕರ್ಮಿಗಳು ತಯಾರಿಸಿರುವ ಮರದ ಉಯ್ಯಾಲೆಯನ್ನು ಯುಎಇ ಅಧ್ಯಕ್ಷರಿಗೆ ಉಡುಗೊರೆಯಾಗಿ ನೀಡಿದರು. ಇದರೊಂದಿಗೆ ಕಾಶ್ಮೀರದ ಪಶ್ಮೀನಾ ಶಾಲ್‌, ತೆಲಂಗಾಣದ ಬೆಳ್ಳಿ ಡಬ್ಬಿಯನ್ನು ಕೊಟ್ಟರು. ಅಧ್ಯಕ್ಷರ ತಾಯಿ ಶೇಖಾ ಫಾತಿಮಾ ಬಿಂಟ್‌ ಮುಬಾರಕ್‌ ಅಲ್‌ ಕೆಟ್ಬಿ ಅವರಿಗೆ ಕಾಶ್ಮೀರದ ಕೇಸರಿ ಮತ್ತು ಶಾಲ್‌ ಕೊಟ್ಟರು.