ಹೈದರಾಬಾದ್‌ನ ಸ್ಟಾರ್ಟ್‌ಅಪ್ ‘ಸ್ಕೈರೂಟ್’ ಏರೋಸ್ಪೇಸ್‌ನ ಬೃಹತ್ ಕ್ಯಾಂಪಸ್ ಹಾಗೂ ಅದು ಸಿದ್ಧಪಡಿಸಿರುವ ಮೊದಲ ಖಾಸಗಿ ಕಂಪನಿಯ ವಾಣಿಜ್ಯ ರಾಕೆಟ್ ವಿಕ್ರಂ-1 ಅನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ವರ್ಚುವಲ್ ಆಗಿ ಅನಾವರಣಗೊಳಿಸಿದರು.
ನವದೆಹಲಿ: ಹೈದರಾಬಾದ್‌ನ ಸ್ಟಾರ್ಟ್‌ಅಪ್ ‘ಸ್ಕೈರೂಟ್’ ಏರೋಸ್ಪೇಸ್‌ನ ಬೃಹತ್ ಕ್ಯಾಂಪಸ್ ಹಾಗೂ ಅದು ಸಿದ್ಧಪಡಿಸಿರುವ ಮೊದಲ ಖಾಸಗಿ ಕಂಪನಿಯ ವಾಣಿಜ್ಯ ರಾಕೆಟ್ ವಿಕ್ರಂ-1 ಅನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ವರ್ಚುವಲ್ ಆಗಿ ಅನಾವರಣಗೊಳಿಸಿದರು. ಇದೇ ವೇಳೆ, ರಾಕೆಟ್ ನಿರ್ಮಾಣಕ್ಕೆ ಶ್ರಮಿಸಿದ ಜೆನ್-ಝಿಗಳನ್ನು ಶ್ಲಾಘಿಸಿದರು. ಅವರು ಗೆನ್-ಝಿ ಪದವನ್ನು ಬಳಸುತ್ತಿರುವುದು ಇದೇ ಮೊದಲು ಎಂಬುದು ಗಮನಾರ್ಹ.
ಅನಾವರಣದ ಬಳಿಕ ಮಾತನಾಡಿದ ಮೋದಿ, ‘ಭಾರತದ ಝೆನ್‌ಜೀಗಳು ಹೊಸತನ್ನು ಸಾಧಿಸುತ್ತಿದ್ದಾರೆ. ಎಂಜಿನಿಯರ್‌ಗಳು, ವಿನ್ಯಾಸಕರು, ಕೋಡರ್‌ಗಳು ಮತ್ತು ವಿಜ್ಞಾನಿಗಳು ಹೊಸ ತಂತ್ರಜ್ಞಾನಗಳನ್ನು ಸೃಷ್ಟಿಸುತ್ತಿದ್ದಾರೆ. ಖಾಸಗಿ ವೈಮಾನಿಕಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುತ್ತಿರುವ ಭಾರತದ ಜೆನ್-ಝೀಗಳನ್ನು ವಿಶ್ವದ ಜೆನ್-ಝೀಗಳು ಮಾದರಿಯಾಗಿ ನೋಡಬೇಕು’ ಎಂದರು.
ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿಯವರಿಗೆ ತೆರೆಯುವ ಐತಿಹಾಸಿಕ ನಡೆ
‘ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿಯವರಿಗೆ ತೆರೆಯುವ ಐತಿಹಾಸಿಕ ನಡೆಯಿಂದ ಸ್ಕೈರೂಟ್‌ನಂತಹ ಸುಮಾರು 300 ಕಂಪನಿಗಳು ತಲೆಯೆತ್ತಲು ಸಾಧ್ಯವಾಗಿದೆ. ಇಲ್ಲಿ ಯುವಕರ ನಾವೀನ್ಯತೆ, ಅಪಾಯ ನಿರ್ವಹಣೆ ಸಾಮರ್ಥ್ಯ ಮತ್ತು ಉದ್ಯಮಶೀಲತೆ ಹೊಸ ಎತ್ತರವನ್ನು ಮುಟ್ಟುತ್ತಿವೆ. ಇದರಿಂದಲೇ ಇಂದು ಭಾರತದ ಬಾಹ್ಯಾಕಾಶ ಕ್ಷೇತ್ರವು ಜಾಗತಿಕ ಹೂಡಿಕೆದಾರರಿಗೆ ಆಕರ್ಷಕವಾಗಿ ಕಂಡುಬರುತ್ತಿದೆ’ ಎಂದು ಮೋದಿ ಹೇಳಿದರು.
ತಿಂಗಳಿಗೊಂದು ರಾಕೆಟ್ ಉತ್ಪಾದನೆ:
ಸ್ಕೈರೂಟ್ ಏರೋಸ್ಪೇಸ್‌ನ ಕ್ಯಾಂಪಸ್ 2 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣವಾಗಿದ್ದು, ಇಲ್ಲಿ ವಿವಿಧ ರಾಕೆಟ್‌ಗಳ ವಿನ್ಯಾಸ, ಅಭಿವೃದ್ಧಿ, ಸಂಯೋಜನೆ ಮತ್ತು ಪರೀಕ್ಷೆ ನಡೆಸಲಾಗುತ್ತದೆ. ಈ ಕ್ಯಾಂಪಸ್ ತಿಂಗಳಿಗೊಂದು ರಾಕೆಟ್ ನಿರ್ಮಿಸುವ ಸಾಮರ್ಥ್ಯ ಹೊಂದಿದೆ ಎಂದು ಸ್ಕೈರೂಟ್‌ನ ಸಹ ಸಂಸ್ಥಾಪಕ ನಾಗ ಭಾರತ್ ಡಾಕಾ ಅವರು ಹೇಳಿದ್ದಾರೆ.
ಸ್ಕೈರೂಟ್ ಸಂಸ್ಥೆ ನವೆಂಬರ್, 2022ರಲ್ಲಿ ಭೂಮಿಯ ಕೆಳಕಕ್ಷೆಗೆ ರಾಕೆಟ್(ವಿಕ್ರಂ-ಎಸ್)ವೊಂದನ್ನು ಯಶಸ್ವಿಯಾಗಿ ಹಾರಿಬಿಟ್ಟಿತ್ತು. ಈ ಮೂಲಕ ರಾಕೆಟ್ ಉಡ್ಡಯನ ನಡೆಸಿದ ದೇಶದ ಮೊದಲ ಖಾಸಗಿ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.
