ಸಾರಾಂಶ
ಬೇಹುಗಾರಿಕೆ, ಕಣ್ಗಾವಲು ಸೇರಿದಂತೆ ಹಲವು ಉದ್ದೇಶಗಳಿಗೆ ಮಹತ್ವದ್ದಾದ ಭೂಪರಿವೀಕ್ಷಣಾ ಉಪಗ್ರಹ (ಇಒಎಸ್-09) ಉಡ್ಡಯನ ವಿಫಲವಾಗಿದೆ. ಉಪಗ್ರಹ ಹೊತ್ತುಕೊಂಡು ಯಶಸ್ವಿಯಾಗಿ ಮೇಲೇರಿದ ಕೆಲವೇ ನಿಮಿಷಗಳಲ್ಲಿ ಪಿಎಸ್‌ಎಲ್‌ವಿ ರಾಕೆಟ್‌ನ ಮೂರನೇ ಹಂತದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡು ಉಡ್ಡಯನ ವಿಫಲ
ಶ್ರೀಹರಿಕೋಟ(ಆಂಧ್ರ): ಬೇಹುಗಾರಿಕೆ, ಕಣ್ಗಾವಲು ಸೇರಿದಂತೆ ಹಲವು ಉದ್ದೇಶಗಳಿಗೆ ಮಹತ್ವದ್ದಾದ ಭೂಪರಿವೀಕ್ಷಣಾ ಉಪಗ್ರಹ (ಇಒಎಸ್-09) ಉಡ್ಡಯನ ವಿಫಲವಾಗಿದೆ. ಉಪಗ್ರಹ ಹೊತ್ತುಕೊಂಡು ಯಶಸ್ವಿಯಾಗಿ ಮೇಲೇರಿದ ಕೆಲವೇ ನಿಮಿಷಗಳಲ್ಲಿ ಪಿಎಸ್‌ಎಲ್‌ವಿ ರಾಕೆಟ್‌ನ ಮೂರನೇ ಹಂತದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡು ಉಡ್ಡಯನ ವಿಫಲವಾಗಿದೆ ಎಂದು ಇಸ್ರೋ ಹೇಳಿದೆ.
ಇದು ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ)ದ 101ನೇ ಉಡ್ಡಯನವಾಗಿದ್ದು, ಈ ವೈಫಲ್ಯದ ನಿಖರ ಕಾರಣದ ಕುರಿತು ಅಧ್ಯಯನ ನಡೆಸಿ, ಶೀಘ್ರದಲ್ಲೇ ಮಾಹಿತಿ ನೀಡಲಾಗುವುದು ಎಂದು ಸಂಸ್ಥೆ ತಿಳಿಸಿದೆ. ಈ ನಡುವೆ ಇಸ್ರೋದ ಹಾಲಿ ಮಾಜಿ ವಿಜ್ಞಾನಿಗಳು, ವೈಫಲ್ಯಗಳನ್ನು ಮೆಟ್ಟಿನಿಂತು ಇಸ್ರೋ ಮತ್ತೆ ಪುಟಿದೇಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಾಲ್ಕು ಹಂತಗಳನ್ನು ಹೊಂದಿರುವ ಪಿಎಸ್‌ಎಲ್‌ವಿ ರಾಕೆಟ್ ನಿಗದಿಯಂತೆ ಇಒಎಸ್-09 ಉಪಗ್ರಹವನ್ನು ಹೊತ್ತುಕೊಂಡು ಬೆಳಗ್ಗೆ 5.59 ಗಂಟೆಗೆ ಶ್ರೀಹರಿಕೋಟದ ಸತೀಶ್ ಧವನ್ ಕೇಂದ್ರದಿಂದ ನಭಕ್ಕೇರಿದ್ದು, 2ನೇ ಹಂತದವರೆಗೂ ಯಾವುದೇ ಸಮಸ್ಯೆಯಿಲ್ಲದೆ ಮುಂದೆ ಸಾಗಿತ್ತು. ಆದರೆ 3ನೇ ಹಂತದಲ್ಲಿ ರಾಕೆಟ್‌ನ ಮೋಟಾರ್ ನಿರೀಕ್ಷೆಯಂತೆ ಕಾರ್ಯಾರಂಭಿಸಿದರೂ ನಂತರ ಒತ್ತಡ ಕಡಿಮೆಯಾಗಿ ಉಡ್ಡಯನಗೊಂಡ 12ನೇ ನಿಮಿಷದಲ್ಲಿ ಯೋಜನೆ ವಿಫಲವಾಯಿತು.
ಇಸ್ರೋ ಹಂಚಿಕೊಂಡ ಮಾಹಿತಿ ಪ್ರಕಾರ, ಪಿಎಸ್ಎಲ್‌ವಿಯ ಮೊದಲ ಹಂತವು ರಾಕೆಟ್ ಉಡ್ಡಯನಗೊಂಡ 111.64 ಸೆಕೆಂಡುಗಳಿಗೆ ಬೇರ್ಪಡಬೇಕಿತ್ತು. ಆದರೆ ಇದು 110 ಸೆಕೆಂಡಿಗೆ ಬೇರ್ಪಟ್ಟಿದೆ. ಇನ್ನು ರಾಕೆಟ್‌ನ ಎರಡನೇ ಹಂತದ ಜ್ವಲನ ಪ್ರಕ್ರಿಯೆಯು 111.84 ಸೆಕೆಂಡಿಗೆ ಆರಂಭವಾಗಬೇಕಿತ್ತು. ಆದರೆ, ಕೊಂಚ ಮೊದಲು ಅಂದರೆ 110.2 ಸೆಕೆಂಡಿಗೇ ಆರಂಭವಾಯಿತು. ಅದೇ ರೀತಿ ಎರಡನೇ ಹಂತವು 264.34 ಸೆಕೆಂಡುಗಳಲ್ಲಿ ಪ್ರತ್ಯೇಕವಾಗಬೇಕಿತ್ತು, ಆದರೆ, ಇದು 261.8 ಸೆಕೆಂಡಿನಷ್ಟು ಸಮಯ ತೆಗೆದುಕೊಂಡಿತು. ಎರಡನೇ ಹಂತದ ವರೆಗೂ ಸಣ್ಣಪುಟ್ಟ ವ್ಯತ್ಯಾಸವಾದರೂ ಮೂರನೇ ಹಂತದಲ್ಲಿ ರಾಕೆಟ್‌ನ ಮೋಟಾರ್‌ನಲ್ಲಿ ಒತ್ತಡದ ಸಮಸ್ಯೆ ಕಾಣಿಸಿಕೊಂಡಿತು. ಈ ಹಿನ್ನೆಲೆಯಲ್ಲಿ ರಾಕೆಟ್ 450 ಕಿ.ಮೀ. ಎತ್ತರದಿಂದ ಸಮುದ್ರಕ್ಕೆ ಬಿತ್ತು ಎನ್ನಲಾಗಿದೆ.
ಅಪರೂಪದ ವೈಫಲ್ಯ:
ಇಸ್ರೋದ ಅತ್ಯಂತ ಯಶಸ್ವಿ ರಾಕೆಟ್‌ಗಳ ಪೈಕಿ ಒಂದಾದ ಪಿಎಸ್‌ಎಲ್‌ವಿ ಇದುವರೆಗೂ ಚಂದ್ರಯಾನ 1, ಮಂಗಳಯಾನ ಸೇರಿ 63 ಬಾರಿ ಉಡ್ಡಯನ ಕೈಗೊಂಡಿತ್ತು. ಈ ಪೈಕಿ 1993, 2017 ಮತ್ತು 2025ರ ಜನವರಿಯದ್ದು ಸೇರಿದಂತೆ ಕೇವಲ 3 ಉಡ್ಡಯನಗಳಲ್ಲಿ ಮಾತ್ರ ವಿಫಲವಾಗಿತ್ತು.
ಬೇಹುಗಾರಿಕೆ ಸೇರಿ ಹಲವು ಉದ್ದೇಶ:
ಇಒಎಸ್-09 ಒಂದು ಅತ್ಯಾಧುನಿಕ ಭೂಮಿ ಪರಿವೀಕ್ಷಣಾ ಉಪಗ್ರಹವಾಗಿದ್ದು, ಸಿ-ಬ್ಯಾಂಡ್ ಸಿಂಥೆಟಿಕ್ ಅಪಾರ್ಚರ್ ರೇಡಾರ್ ತಂತ್ರಜ್ಞಾನವನ್ನು ಇದು ಒಳಗೊಂಡಿದೆ. ಇದು ಹಗಲು, ರಾತ್ರಿ, ಯಾವುದೇ ಹವಾಮಾನ ಪರಿಸ್ಥಿತಿಯಲ್ಲೂ ಭೂಮಿಯ ಮೇಲ್ಮೈನ ಹೈರೆಸೊಲ್ಯೂಷನ್ ಚಿತ್ರವನ್ನು ತೆಗೆಯುವ ಸಾಮರ್ಥ್ಯ ಹೊಂದಿದೆ. ಬೇಹುಗಾರಿಕೆ, ಕಣ್ಗಾವಲು ಸೇರಿ ಹಲವು ಉದ್ದೇಶಗಳಿಗೆ ಇದರಿಂದ ನೆರವಾಗುತ್ತದೆ.