ಆಗಸದಲ್ಲೇ ಡ್ರೋನ್‌ ಧ್ವಂಸಗೊಳಿಸಿದ ಭಾರತೀಯ ಸೇನೆ

| N/A | Published : May 10 2025, 05:21 AM IST

Indian Armed forces reple Pak drone (Photo/X@AGDPI)

ಸಾರಾಂಶ

ಆಗಸದಲ್ಲೇ ಡ್ರೋನ್‌ ಧ್ವಂಸಗೊಳಿಸಿದ ಭಾರತೀಯ ಸೇನೆ

ಕಾಶ್ಮೀರದ ಸಮರ ಭೂಮಿಯಿಂದ ಕನ್ನಡಪ್ರಭ ಸಾಕ್ಷಾತ್‌ ವರದಿ

 ಡೆಲ್ಲಿ ಮಂಜು

  ಶ್ರೀನಗರ (ಜಮ್ಮು-ಕಾಶ್ಮೀರ) :  ದೀಪಾವಳಿ ಪಟಾಕಿಗಳಂತೆ ಸಿಡಿದ ಪಾಕಿಸ್ತಾನದ ಡ್ರೋನುಗಳು ಭಾರತದ ಭೂಮಿಗೆ ತಾಕುವ ಮುನ್ನವೇ ಆಗಸದಲ್ಲೇ ಭಸ್ಮವಾದವು. ಬುಲೆಟ್‌ನಂತೆ ಸರಣಿಯಾಗಿ ಗಡಿಭಾಗದಲ್ಲಿ ಅಬ್ಬರಿಸಿದ ಪಾಕಿಸ್ತಾನ ಡ್ರೋನ್‌ಗಳು ಬರೀ ದಿಗಿಲು ಹುಟ್ಟಿಸಲು ಮಾತ್ರ ಯಶಸ್ವಿಯಾದವು.

ಜಮ್ಮು ನೆಲೆಯನ್ನು ದಾಟಿ ಇನ್ನಷ್ಟೇ ಸುಂದರಬನಿ ಸಮೀಪ ಬರುತ್ತಿದ್ದಾಗ ಏಕಾಏಕಿ ನೋಫ್ಲೈಯಿಂಗ್‌ ಝೋನ್‌ನಲ್ಲಿ ಕಾಣಿಸಿಕೊಂಡ ಕೆಂಪು ದೀಪದ ಪಾಕ್ ಡ್ರೋನ್‌ಗಳು ನಮ್ಮ ಕಾರು ಮುಂದೆ ಹಾದುಹೋಗಿದ್ದು ಎದೆ ಝಲ್ ಎನ್ನುವಂತೆ ಮಾಡಿತು.

ಸುಂದರಬನಿಯ ಸಮೀಪ ಶಬ್ದ ಕೇಳಿ ಹೊರಬಂದ ನಾಗರೀಕರು ಮನೆ ಮುಂದಿನ ದೀಪಗಳನ್ನು ಆರಿಸಿದರು. ಹೊರಗಡೆ ಬಂದು ಆತಂಕದಿಂದಲೇ ಮಾತಾಡಿದರು. ಕಳೆದ ಮೂರ್ನಾಲು ದಿನಗಳಿಂದ ಇಂಥ ಶಬ್ದ ಕೇಳುತ್ತಿದ್ದೇವೆ. ಆತಂಕ ಮನೆ ಮಾಡಿದೆ. ಬೆಳಗ್ಗೆಗೆ ಏನೋ ಗೊತ್ತಿಲ್ಲ ಅನ್ನೋ ಸ್ಥಿತಿ ಇದೆ ಎಂದು ‘ಕನ್ನಡಪ್ರಭ’ ಜೊತೆ ಆತಂಕದ ಅನಿಸಿಕೆಗಳನ್ನು ಹಂಚಿಕೊಂಡರು ಯುವಕ ಅರ್ಬಾಜ್.

ಜಮ್ಮುವಿನಲ್ಲಿ ದಾಳಿ ಶುರುವಾದ ಕೂಡಲೇ ರಜೋರಿ, ಸುಂದರಬನಿ, ನೌಷಾರ ಪ್ರದೇಶಗಳಲ್ಲಿ ಸಂಜೆಯಿಂದಲೇ ಸ್ಥಳೀಯ ಆಡಳಿತ ದಿಂದ ಮಾಹಿತಿಗಳು ರವಾನೆಯಾಗಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ಇತ್ತು. ಅಲ್ಲಿಂದ ಮುಂದೆ ಹೊರಟು ನೌಷಾರ ತಲುಪುವ ಹೊತ್ತಲ್ಲಿ ರಸ್ತೆಯಲ್ಲಿ ನೂರಾರು ವಾಹನಗಳು ಓಡಾಡಿದರೂ ಅಲ್ಲಿ ಚಂದ್ರನ ಬೆಳಕೇ ವಾಹನಗಳಿಗೆ ದಾರಿ ತೋರುತ್ತಿತ್ತು. ರಜೋರಿ ಸಮೀಪಿಸುತ್ತಿದೆ ಎನ್ನುವಾಗ ನೌಷಾರ ಬಳಿ ಭಾರೀ ಸ್ಪೋಟದ ಸದ್ದು ಕೇಳಲು ಶುರುವಾಯಿತು.

ಸ್ಥಳೀಯರ ನೆರವಿಂದ ಡಾಬಾ ಮಾದರಿಯ ಶೆಡ್‌ನಲ್ಲಿ ನಿದ್ರೆಗೆ ಅಣಿಯಾದರೆ ಮತ್ತೆ ಶುರುವಾಯ್ತು, ಆತಂಕ ಹುಟ್ಟಿಸುವ ಜೋರು ಶಬ್ದ. ಒಮ್ಮೆ ಸ್ಫೋಟವಾದ್ರೆ ಮಲಗಿದ ನೆಲ ಅಲ್ಲಾಡುತ್ತಿತ್ತು. ಪ್ರತಿಕ್ಷಣವೂ ದಿಗಿಲು ಹೆಚ್ಚಿಸುತ್ತಿತ್ತು.

ಪಾಕ್ ಡ್ರೋನ್‌ಗೆ ಮಿತಿಯೇ ಇಲ್ಲ:

ರಜೋರಿ, ನೌಷಾರ ಸುತ್ತಮುತ್ತ ಪ್ರದೇಶಗಳು ಪಾಕಿಸ್ತಾನದ ಗಡಿಗೆ ಹೊಂದಿಕೊಂಡೇ ಇವೆ. ಜೊತೆಗೆ ದೇಶ ಕಾಯುವ ಯೋಧರ ನೆಲೆಗಳು, ಕ್ಯಾಂಪ್ ಗಳು ಕೂಡ ಅದೇ ಭಾಗದಲ್ಲಿ ಹೆಚ್ಚು.

ಇದೊಂದು ಕಾರಣ ಸಾಕಾಯ್ತು ಪಾಕಿಸ್ತಾನ ದಾಳಿ ನಡೆಸಿ, ಯುದ್ದದ ಸ್ಥಿತಿ ಉಂಟು ಮಾಡಲು. ಅದರಂತೆ ನಾವು ಲೆಕ್ಕ ಹಾಕಿದಂತೆ ಬರೋಬ್ಬರಿ 48 ಭಾರೀ ಪಾಕ್ ಡ್ರೋನ್ ಗಳು ಆಗಸದಲ್ಲೇ ಭಸ್ಮವಾದವು. ಇದಕ್ಕೂ ಮುನ್ನ‌ ಸ್ಫೋಟಗೊಂಡು ಎದೆ ನಡುಗಿಸುವಷ್ಟು ಸದ್ದು ಮಾಡುತ್ತಿದ್ದವು. ಬೆಳಗಿನ ಜಾವ ಅಂದರೆ ಹೆಚ್ಚುಕಮ್ಮಿ 4:30ರ ತನಕ ಡ್ರೋನ್ಗ ಶಬ್ದ ಕೇಳಿಬರುತ್ತಲೇ ಇತ್ತು. ಇದನ್ನು ಕಂಡ ಸ್ಥಳೀಯರು ರಾತ್ರಿಯಾಗುವುದೇ ಬೇಡವಾಗಿದೆ. ಜೀವ ಕೈಯಲ್ಲಿ ಹಿಡಿದು ಮಲಗಬೇಕಿದೆ ಎನ್ನುತ್ತಿದ್ದರು.

ಗಡಿಯಲ್ಲಿ ಆತಂಕವೂ ಇದೆ, ಧೈರ್ಯವೂ ಇದೆ:

ಜಮ್ಮುವಿಗೆ 30 ಕಿಲೋಮಿಟರ್ ದೂರದಲ್ಲಿರುವ ಸುಚೇತ್ ಘಡ್ ಗಡಿಗೆ ಭೇಟಿ ಕೊಟ್ಟಾಗ ಕೊನೆಯ ಗ್ರಾಮದ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು. ಆದ್ರೂ ನಮ್ಮ ಬಿಎಸ್ಎಫ್ ಯೋಧರು ನಮ್ಮ ಜೊತೆಗೆ ಇದ್ದಾರೆ. ನಮ್ಮನ್ನು ಕಾಯುತ್ತಾರೆ ಅಂತಾರೆ ಈ ಊರಿನ ಸರಪಂಚ ಸ್ವರ್ಣಲಾಲ್.

2018ರ ಬಳಿಕ ಸುಚೇತ್‌ಗಢ ಗಡಿಯಲ್ಲಿ ಗುಂಡಿನ ಶಬ್ದ ಕೇಳಿಲ್ಲ. ಆದ್ರೆ ಆತಂಕಿಗಳು ಯಾವುದು ಲೆಕ್ಕ ಹಾಕುವುದಿಲ್ಲ. ಜೀವದ ಮೇಲೆ ನಮಗೆ ಪ್ರೀತಿ ಇರುತ್ತೆ ಅಲ್ವಾ ಹಾಗಾಗಿ ಆತಂಕ ಇರುತ್ತೆ. ನಮ್ಮ ಸೈನ್ಯ, ನಮ್ಮ ಸರ್ಕಾರ ಗಡಿ ಗ್ರಾಮದ ಜನರ ಜೊತೆ ಇದೆ. ಹಲವರು ಗ್ರಾಮ ಬಿಟ್ಟು ಬೇರೆ ಕಡೆ ಸುರಕ್ಷಿತ ಸ್ಥಳಕ್ಕೆ ಹೋಗಿದ್ದಾರೆ. ಉಳಿದವರು ಬಂಕರ್ ಗಳ ಆಶ್ರಯದಲ್ಲಿದ್ದಾರೆ. ಪರಿಸ್ಥಿತಿ ಏನು ಬೇಕಾದರೂ ಎದುರಾಗಬಹುದು ಎದೆಯೊಡ್ಡಲು ನಾವು ಸಿದ್ದರಿದ್ದೇವೆ ಎಂದರು ಸ್ವರ್ಣಲಾಲ್.

ಭೀಕರ ಸದ್ದು, ಆತಂಕ

ಕಳೆದ ಮೂರು ದಿನಗಳಿಂದ ಕಾಶ್ಮೀರ ಗಡಿಯ ಜನರಲ್ಲಿ ಭಾರೀ ಆತಂಕ

ಹಗಲು ಹೊತ್ತಲ್ಲಿ ಶೆಲ್‌, ಗುಂಡು, ರಾತ್ರಿಯಾಗುತ್ತಿದ್ದಂತೆ ಡ್ರೋನ್‌ ದಾಳಿ

ರಾತ್ರಿ ವೇಳೆ ಬ್ಲ್ಯಾಕೌಟ್‌, ಎಲ್ಲೆಲ್ಲೂ ಕಗ್ಗತ್ತಲು, ಜನರಲ್ಲಿ ಆತಂಕ ಭೀತಿ

ಆದರೂ ದೇಶ ಕಾಪಾಡುವ ಯೋಧರಿದ್ದಾರೆ ಎಂಬ ಭರವಸೆ ಜನರಲ್ಲಿ