ಸಾರಾಂಶ
ಬಾಹ್ಯಾಕಾಶ ವಿಜ್ಞಾನದಲ್ಲಿ ಹಲವು ದಾಖಲೆಗಳನ್ನು ಸೃಷ್ಟಿಸಿರುವ ಭಾರತ, ಬುಧವಾರ ಇನ್ನೊಂದು ಇತಿಹಾಸ ರಚನೆಯತ್ತ ಹೆಜ್ಜೆ ಹಾಕಿದೆ.
ನವದೆಹಲಿ: ಬಾಹ್ಯಾಕಾಶ ವಿಜ್ಞಾನದಲ್ಲಿ ಹಲವು ದಾಖಲೆಗಳನ್ನು ಸೃಷ್ಟಿಸಿರುವ ಭಾರತ, ಬುಧವಾರ ಇನ್ನೊಂದು ಇತಿಹಾಸ ರಚನೆಯತ್ತ ಹೆಜ್ಜೆ ಹಾಕಿದೆ. ಎಲ್ಲವೂ ಅಂದುಕೊಂಡಂತೆ ನಡೆದು, ವಾತಾವರಣವೂ ಸಹಕರಿಸಿದರೆ ಭಾರತೀಯ ವಾಯಪಡೆಯ ಪೈಲಟ್ ಶುಂಭಾಶು ಶುಕ್ಲಾ ಅವರನ್ನು ಹೊತ್ತ ಅಮೆರಿಕದ ಆ್ಯಕ್ಸಿಯಾಮ್ ನೌಕೆ ಬುಧವಾರ ಸಂಜೆ 5.30ರ ವೇಳೆಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದತ್ತ ಪ್ರಯಾಣ ಬೆಳೆಸಲಿದೆ.
ಪ್ರಯಾಣ ಕೈಗೂಡಿದರೆ, 41 ವರ್ಷಗಳ ಬಳಿಕ ಅಂತರಿಕ್ಷ ಯಾನ ಕೈಗೊಳ್ಳುತ್ತಿರುವ ಮೊದಲ ಭಾರತೀಯ ಮತ್ತು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತೆರಳುತ್ತಿರುವ ಮೊದಲ ಭಾರತೀಯ ಎಂಬ ದಾಖಲೆಗೆ ಶುಕ್ಲಾ ಪಾತ್ರವಾಗಲಿದ್ದಾರೆ.
‘ಆ್ಯಕ್ಸಿಯೋಂ-4’ ಯೋಜನೆಯ ಭಾಗವಾಗಿ ಭಾರತೀಯ ಶುಭಾಂಶು ಶುಕ್ಲಾ ಹಾಗೂ ಇನ್ನೂ 3 ಗಗನಯಾತ್ರಿಗಳು ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸೆಕ್ಸ್‌ನ ಫಾಲ್ಕನ್ 9 ರಾಕೆಟ್‌ನಲ್ಲಿ ಐಎಸ್‌ಎಸ್‌ಗೆ ಪ್ರವಾಸ ಕೈಗೊಳ್ಳಲಿದ್ದಾರೆ. ಮೊದಲು, ಇದಕ್ಕೆ ಮಂಗಳವಾರ ಸಂಜೆ 5:52ರ ಮುಹೂರ್ತ ನಿಗದಿ ಮಾಡಲಾಗಿತ್ತು. ಆದರೆ ಸೂಕ್ತ ಹವಾಮಾನ ಇಲ್ಲವಾದ ಕಾರಣ ಮುಂದೂಡಲಾಗಿದೆ.
ಈ ಹಿಂದೆ 1984ರಲ್ಲಿ ರಾಕೇಶ್ ಶರ್ಮಾ, ರಷ್ಯಾದ ಸೂಯೆಜ್ ನೌಕೆಯಲ್ಲಿ ಅಂತರಿಕ್ಷ ಪ್ರವಾಸ ಕೈಗೊಂಡು ಇತಿಹಾಸ ನಿರ್ಮಿಸಿದ್ದರು. ಇದಾದ ನಂತರ ಭಾರತೀಯ ಮೂಲದ ಸುನಿತಾ ವಿಲಿಯಮ್ಸ್ ಹಾಗೂ ಕಲ್ಪನಾ ಚಾವ್ಲಾ ಬಾಹ್ಯಾಕಾಶ ಯಾನ ನಡೆಸಿದ್ದರು. ಆದರೆ ಅವರು ಭಾರತೀಯ ಮೂಲದ ಅಮೆರಿಕ ಪ್ರಜೆಗಳೇ ಹೊರತು ಭಾರತೀಯ ಪ್ರಜೆ ಅಲ್ಲ. ಹೀಗಾಗಿ ಶರ್ಮಾ ನಂತರ ನಭಕ್ಕೆ ಜಿಗಿಯಲಿರುವ ಮೊದಲ ಭಾರತೀಯ ಎಂಬ ಕೀರ್ತಿ ಶುಕ್ಲಾಗೆ ದೊರಕಲಿದೆ.
ಬುಧವಾರ ಪ್ರಯಾಣ ಆರಂಭಿಸಿದ ನೌಕೆ ಸುಮಾರು 28 ಗಂಟೆಗಳ ಪ್ರಯಾಣದ ಬಳಿಕ ಗುರುವಾರ ರಾತ್ರಿ 10 ಗಂಟೆ ವೇಳೆಗೆ ಐಎಸ್‌ಎಸ್ ತಲುಪಿದೆ. ನೌಕೆಯಲ್ಲಿ ಶುಕ್ಲಾ ಜೊತೆಗೆ ಅಮೆರಿಕದ ಪೆಗ್ಗಿ ವಿಟ್ಸನ್, ಪೋಲೆಂಡ್‌ನ ಸ್ಲವೋಝ್ ಉಝ್‌ನಾಸ್ಕಿ, ಹಂಗರಿಯ ಟಿಬರ್ ಕಪು ಕೂಡಾ ಇದ್ದು ಇವರೆಲ್ಲಾ 14 ದಿನಗಳ ಕಾಲ ಅಲ್ಲೇ ಇದ್ದು 60 ರೀತಿಯ ವಿವಿಧ ಪ್ರಯೋಗ ನಡೆಸಲಿದ್ದಾರೆ. ಇದರಲ್ಲಿ ಭಾರತದ ಪರವಾಗಿ ಶುಕ್ಲಾ ನಡೆಸುವ 7 ಪ್ರಯೋಗ ಕೂಡಾ ಸೇರಿದೆ. ತಮ್ಮ ಪ್ರಯಾಣದ ವೇಳೆ ಮೈಸೂರು ಹಲ್ವಾ, ಮಾವಿನ ಹಣ್ಣಿನ ರಸವನ್ನು ಐಎಸ್‌ಎಸ್‌ನ ಸಹಯೋಗಿಗಳಿಗಾಗಿ ಕೊಂಡೊಯ್ಯಲಿದ್ದಾರೆ.
ಶುಕ್ಲಾರನ್ನು ಈ ಪ್ರಯೋಗಕ್ಕೆ ಕಳುಹಿಸಲು ಭಾರತ ಸರ್ಕಾರ ಅಂಧಾಜು 500 ಕೋಟಿ ರು. ವೆಚ್ಚ ಮಾಡಿದೆ.
- ಭಾರತೀಯ ಪ್ರಜೆಯೊಬ್ಬರು ಮೊದಲ ಬಾರಿ ಅಂತರಿಕ್ಷ ಕೇಂದ್ರಕ್ಕೆ ಲಗ್ಗೆ
- ಎಲ್ಲವೂ ಅಂದುಕೊಂಡಂತೆ ಆದರೆ ಇಂದು ಸಂಜೆ 5.30ಕ್ಕೆ ಶುಕ್ಲಾ ನಭಕ್ಕೆ
- ಶುಕ್ಲಾ ಜಯತೆ ಇನ್ನೂ 3 ಗಗನಯಾತ್ರಿಗಳಿಂದ ಬಾಹ್ಯಾಕಾಶ ಯಾನ
- 28 ಗಂಟೆ ಪ್ರಯಾಣದ ಬಳಿಕ ಗುರುವಾರ ರಾತ್ರಿ 10 ಗಂಟೆಕ್ಕೆ ಐಎಸ್‌ಎಸ್‌ಗೆ
- 14 ದಿನಗಳ ಕಾಲ ಅಂತರಿಕ್ಷ ವಾಸ । ಅಲ್ಲೇ ಇದ್ದು 60 ವಿವಿಧ ಪ್ರಯೋಗಗಳು