ಅತ್ಯಂತ ಬೆಚ್ಚಿ ಬೀಳಿಸುವ ಘಟನೆಯೊಂದರಲ್ಲಿ ಅಕ್ರಮ ಸಂಬಂಧ ಹೊಂದಿದ್ದ ಮಧ್ಯಪ್ರದೇಶದ ಇಂದೋರ್‌ನ ನವವಿವಾಹಿತೆಯೊಬ್ಬಳು, ‘ಬಾ ನಲ್ಲ ಮಧುಚಂದ್ರಕೆ’ ಎನ್ನುತ್ತಲೇ ಮಧುಚಂದ್ರದ ವೇಳೆ ಮೇಘಾಲಯದಲ್ಲಿ ತನ್ನ ಗಂಡನನ್ನು ಹತ್ಯೆ ಮಾಡಿದ ಘಟನೆ ನಡೆದಿದೆ.

 ಶಿಲ್ಲಾಂಗ್‌/ಲಖನೌ/ ಇಂದೋರ್‌ : ಅತ್ಯಂತ ಬೆಚ್ಚಿ ಬೀಳಿಸುವ ಘಟನೆಯೊಂದರಲ್ಲಿ ಅಕ್ರಮ ಸಂಬಂಧ ಹೊಂದಿದ್ದ ಮಧ್ಯಪ್ರದೇಶದ ಇಂದೋರ್‌ನ ನವವಿವಾಹಿತೆಯೊಬ್ಬಳು, ‘ಬಾ ನಲ್ಲ ಮಧುಚಂದ್ರಕೆ’ ಎನ್ನುತ್ತಲೇ ಮಧುಚಂದ್ರದ ವೇಳೆ ಮೇಘಾಲಯದಲ್ಲಿ ತನ್ನ ಗಂಡನನ್ನು ಹತ್ಯೆ ಮಾಡಿದ ಘಟನೆ ನಡೆದಿದೆ. ಗಂಡನ ಶವ ಸಿಕ್ಕ 16 ದಿನಗಳ ಬಳಿಕ ಆಕೆ ಉತ್ತರ ಪ್ರದೇಶದ ಘಾಜಿಪುರದಲ್ಲಿ ಶರಣಾಗಿದ್ದಾಳೆ. ತನ್ನ ಪ್ರೇಮಿಗೋಸ್ಕರ ಈಕೆ ಬಾಡಿಗೆ ಹಂತಕರನ್ನು ಆಯೋಜಿಸಿ ಹತ್ಯೆ ಮಾಡಿರುವುದಾಗಿ ಗೊತ್ತಾಗಿದ್ದು ನವವಿವಾಹಿತೆ ಸೋನಂ ಸೇರಿ ನಾಲ್ವರನ್ನು ಬಂಧಿಸಿದ್ದಾರೆ. ಉಳಿದ ಮೂವರು ಹತ್ಯೆಗೆ ಸಹಾಯ ಮಾಡಿದವರಾಗಿದ್ದಾರೆ.

ಮೇ 11ರಂದು ಸೋನಂ (24) ಇಂದೋರ್‌ನಲ್ಲಿ ರಾಜಾ ರಘುವಂಶಿ (29) ಎಂಬಾತನ ಜತೆ ವಿವಾಹವಾಗಿದ್ದಳು. ನಂತರ ಇಬ್ಬರೂ ಮೇ 20ರಂದು ಮಧುಚಂದ್ರಕ್ಕೆಂದು ಮೇಘಾಲಯಕ್ಕೆ ತೆರಳಿದ್ದರು. ಈ ನಡುವೆ, ಮೇ 23ರಿಂದ ಇಬ್ಬರೂ ನಾಪತ್ತೆಯಾಗಿದ್ದರು. ಬಳಿಕ ಜೂ.2ರಂದು, ರಾಜಾ ಅವರ ಶವ ಮೇಘಾಲಯದ ಚಿರಾಪುಂಜಿ ಸನಿಹದ ಪೂರ್ವ ಖಾಸಿ ಬೆಟ್ಟದ ಕಮರಿನಲ್ಲಿ ಪತ್ತೆಯಾಗಿತ್ತು. ಸೋನಂ ಮಾತ್ರ ಸಿಕ್ಕಿರಲಿಲ್ಲ. ಈಗ ಸೋನಂ ಏಕಾಏಕಿ ಪ್ರತ್ಯಕ್ಷಳಾಗಿ ಉತ್ತರ ಪ್ರದೇಶದ ಘಾಜಿಪುರದಲ್ಲಿ ಶರಣಾಗಿದ್ದು, ನಂತರ ಆಕೆಯನ್ನು ಬಂಧಿಸಲಾಗಿದೆ. ‘ಪ್ರೇಮಿ ರಾಜ್‌ ಕುಶ್ವಾಹಾ ಎಂಬಾತನಿಗೋಸ್ಕರ ಆಕೆ ಬಾಡಿಗೆ ಹಂತಕರನ್ನು ಬಳಸಿಕೊಂಡು ಗಂಡನನ್ನು ಕೊಲೆ ಮಾಡಿಸಿದ್ದಾಳೆ. ರಾಜಾನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ ಎಂಬುದಕ್ಕೆ ಪುರಾವೆಗಳಿವೆ’ ಎಂದು ಪೊಲೀಸರು ಹೇಳಿದ್ದಾರೆ.

ಬಳಿಕ ಈಕೆ ನೀಡಿದ ಹೇಳಿಕೆ ಆಧರಿಸಿ ಮೂವರು ಬಾಡಿಗೆ ಹಂತಕರನ್ನು ಹಾಗೂ ಪ್ರೇಮಿ ರಾಜ್‌ ಕುಶ್ವಾಹನನ್ನು ಬಂಧಿಸಲಾಗಿದೆ. ಬಾಡಿಗೆ ಹಂತಕರಲ್ಲಿ ಇಬ್ಬರು ಇಂದೋರ್‌ನವರಾದರೆ ಇನ್ನೊಬ್ಬ ಉತ್ತರ ಪ್ರದೇಶದವ. ಬಂಧಿತರನ್ನು ಆಕಾಶ್ ರಜಪೂತ್, ವಿಕಾಸ್ ಅಲಿಯಾಸ್ ವಿಕ್ಕಿ, ಆನಂದ್‌ ಎಂದು ಗುರುತಿಸಲಾಗಿದೆ. ಇನ್ನೂ ಅನೇಕರ ಬಂಧನಕ್ಕೆ ಯತ್ನ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ಸೋನಂ ಕಂಪನಿಯೊಂದನ್ನು ನಡೆಸುತ್ತಿದ್ದು ಅದರಲ್ಲೇ ಕೆಲಸಕ್ಕಿದ್ದ ರಾಜ್‌ನನ್ನು ಪ್ರೇಮಿಸುತ್ತಿದ್ದಳು. ಇಬ್ಬರೂ ಫೋನ್‌ನಲ್ಲಿ ಸಾಕಷ್ಟು ಮಾತನಾಡುತ್ತಿದ್ದರು ಎಂದು ರಘುವಂಶಿ ಸೋದರ ಆರೋಪಿಸಿದ್ದಾರೆ.

ಪ್ರಕರಣ ಮಧ್ಯಪ್ರದೇಶದಲ್ಲಿ ಸಂಚಲನ ಮೂಡಿಸಿದ್ದ ಕಾರಣ ಸಿಬಿಐ ತನಿಖೆ ನಡೆಸಬೇಕು ಎಂದು ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾಗೆ ಮುಖ್ಯಮಂತ್ರಿ ಮೋಹನ ಯಾದವ್‌ ಕೋರಿದ್ದರು.

ರಿಟರ್ನ್‌ ಟಿಕೆಟ್‌ ಬುಕ್‌ ಆಗಿರಲಿಲ್ಲ!

ದಂಪತಿಗಳು ಆರಂಭದಲ್ಲಿ ಗುವಾಹಟಿಯ ಕಾಮಾಕ್ಯ ದೇವಸ್ಥಾನಕ್ಕೆ ಭೇಟಿ ನೀಡಲು ಯೋಜಿಸಿದ್ದರು. ಆದರೆ ನಂತರ ಪ್ಲಾನ್‌ ಬದಲಿಸಿ ಮೇಘಾಲಯಕ್ಕೆ ತೆರಳಿದ್ದರು. ರಿಟರ್ನ್‌ ಟಿಕೆಟ್‌ ಕೂಡ ಬುಕ್‌ ಮಾಡಿರಲಿಲ್ಲ ಎಂದು ರಾಜಾ ರಘುವಂಶಿಯ ತಾಯಿ ಹಾಗೂ ಸೋದರ ಹೇಳಿದ್ದಾರೆ. ಇದರಿಂದಾಗಿ ಸೋನಂ ಮೊದಲೇ ಕೊಲೆಗೆ ಸಂಚು ರೂಪಿಸಿದ್ದಳು. ಹೀಗಾಗಿ ರಿಟರ್ನ್‌ ಟಿಕೆಟ್ಕ್ಬುಕ್‌ ಮಾಡಿರಲಿಲ್ಲ ಎಂದು ಸಾಬೀತಾಗಿದೆ. ರಿಟರ್ಟ್‌ ಟಿಕೆಟ್ ಬುಕ್‌ ಮಾಡದೇ ಇರುವುದು ಕನ್ನಡದ ‘ಬಾ ನಲ್ಲೆ ಮಧುಚಂದ್ರಕೆ’ ಚಿತ್ರದ ಕತೆಯನ್ನೇ ಹೋಲುತ್ತದೆ.

ಸೋನಂ ಶರಣಾಗತಿಯೋ? ಬಂಧನವೋ?

ಪತಿ ಹಂತಕಿ ಸೋನಂ ಶರಣಾದಳೋ ಅಥವಾ ಬಂಧನವಾಯಿತೋ ಎಂಬ ಬಗ್ಗೆ ಊಹಾಪೋಹಗಳಿವೆ. ಪೊಲೀಸರು ಆಕೆ ಘಾಜಿಪುರದಲ್ಲಿ ಶರಣಾದಳು. ತನ್ನನ್ನು ಅಪಹರಿಸಲಾಗಿತ್ತು ಎಂದು ಕತೆಕಟ್ಟಿದಳು ಎಂದು ಹೇಳಿದ್ದಾರೆ. ಆದರೆ, ಜೂ.8ರಂದು ರಾತ್ರಿ ಆಕೆ ಘಾಜಿಪುರ ತಲುಪಿ ಅಲ್ಲಿನ ಡಾಬಾ ಮಾಲೀಕನ ಫೋನ್‌ ಮೂಲಕ ಇಂದೊರ್‌ನ ತನ್ನ ಸಹೋದರನನ್ನು ವಿಡಿಯೋ ಕಾಲ್‌ ಮೂಲಕ ಸಂಪರ್ಕಿಸಿದಳು. ಆಗ ಕುಟುಂಬದವರ ಫೋನ್‌ ಟ್ರಾಕ್‌ ಮಾಡುತ್ತಿದ್ದ ಪೊಲೀಸರಿಗೆ ಆಕೆ ಘಾಜಿಪುರದಲ್ಲಿ ಇದ್ದುದು ಗೊತ್ತಾಯಿತು. ಕೂಡಲೇ ಉತ್ತರ ಪ್ರದೇಶ ಪೊಲೀಸರಿಗೆ ಸೂಚನೆ ನೀಡಿ ಆಕೆಯ ಬಂಧನ ಆಗುವಂತೆ ನೋಡಿಕೊಳ್ಳಲಾಯಿತು ಎಂದು ಮೂಲಗಳು ಹೇಳಿವೆ.

10 ಲಕ್ಷ ರು. ಚಿನ್ನ ತೊಡಿಸಿ ಕರೆದೊಯ್ದಿದ್ದಳು!

ಈ ದಂಪತಿಗಳು ತಮ್ಮ ಎಲ್ಲಾ ಚಿನ್ನಾಭರಣಗಳನ್ನು ಧರಿಸಿ ಈಶಾನ್ಯ ರಾಜ್ಯಕ್ಕೆ ಪ್ರವಾಸಕ್ಕೆ ತೆರಳಿದ್ದರು. ರಾಜಾ ತನ್ನ ಮನೆಯಿಂದ 10 ಲಕ್ಷ ರುಉ.ಗೂ ಹೆಚ್ಚು ಮೌಲ್ಯದ ಚಿನ್ನಾಭರಣಗಳನ್ನು ಧರಿಸಿದ್ದ, ಅದರಲ್ಲಿ ವಜ್ರದ ಉಂಗುರ, ಸರ ಮತ್ತು ಬಳೆ ಸೇರಿತ್ತು. ‘ಈ ಬಗ್ಗೆ ನಾನು ಅವನನ್ನು ಪ್ರಶ್ನಿಸಿದಾಗ, ‘ಸೋನಂ ಅದನ್ನು ಧರಿಸಬೇಕೆಂದು ಬಯಸಿದ್ದಾಳೆ’ ಎಂದು ರಾಜಾ ಹೇಳಿದ್ದ’ ಎಂದು ಮಾಧ್ಯಮಗಳಿಗೆ ತಾಯಿ ಉಮಾ ಹೇಳಿದ್ದಾರೆ. ಅಲ್ಲದೆ ‘ಸೋನಂಳನ್ನು ಗಲ್ಲಿಗೇರಿಸಬೇಕು. ಘಟನೆಯ ಸಿಬಿಐ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದ್ದಾರೆ.

ಮಗಳು ಕೊಲೆಗಾರಳಲ್ಲ: ಸೋನಂ ತಂದೆ

ಸೋನಂಳ ತಂದೆ ತಮ್ಮ ಮಗಳ ವಿರುದ್ಧದ ಗುತ್ತಿಗೆ ಕೊಲೆ ಆರೋಪಗಳನ್ನು ತಿರಸ್ಕರಿಸಿದ್ದು, ‘ಪೊಲೀಸರು ಸುಳ್ಳು ಹೇಳುತ್ತಿದ್ದಾರೆ. ಈ ಘಟನೆಯ ಬಗ್ಗೆ ಸಿಬಿಐ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದ್ದಾರೆ. ಮೇಘಾಲಯದಿಂದ ತನ್ನನ್ನು ಅಪಹರಿಸಲಾಗಿದೆ ಮತ್ತು ದರೋಡೆ ಮಾಡಲು ಪ್ರಯತ್ನ ನಡೆದಿದೆ ಎಂದು ತಮ್ಮ ಮಗಳು ಹೇಳಿದ್ದಾಳೆಂದು ಅವರು ಹೇಳಿದ್ದಾರೆ.