ಹಾಡಹಗಲೇ ಮನೆಗಳವು ಮಾಡುತ್ತಿದ್ದ ಮೂವರು ಹೆಂಡಿರ ಮುದ್ದಿನ ಗಂಡ ಮತ್ತೆ ಸೆರೆ

| N/A | Published : May 29 2025, 01:34 AM IST / Updated: May 29 2025, 04:19 AM IST

arrest
ಹಾಡಹಗಲೇ ಮನೆಗಳವು ಮಾಡುತ್ತಿದ್ದ ಮೂವರು ಹೆಂಡಿರ ಮುದ್ದಿನ ಗಂಡ ಮತ್ತೆ ಸೆರೆ
Share this Article
  • FB
  • TW
  • Linkdin
  • Email

ಸಾರಾಂಶ

ಹಾಡಹಗಲೇ ಮನೆಗಳವು ಮಾಡುತ್ತಿದ್ದ ತಂದೆ ಹಾಗೂ ಆತನ ಅಪ್ರಾಪ್ತ ಪುತ್ರನನ್ನು ಎಲೆಕ್ಟ್ರಾನಿಕ್‌ ಸಿಟಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

  ಬೆಂಗಳೂರು : ಹಾಡಹಗಲೇ ಮನೆಗಳವು ಮಾಡುತ್ತಿದ್ದ ತಂದೆ ಹಾಗೂ ಆತನ ಅಪ್ರಾಪ್ತ ಪುತ್ರನನ್ನು ಎಲೆಕ್ಟ್ರಾನಿಕ್‌ ಸಿಟಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆನೇಕಲ್‌ ತಾಲೂಕಿನ ಶಿಕಾರಿಪಾಳ್ಯ ನಿವಾಸಿ ಬಾಬಾ ಜಾನ್‌(35) ಮತ್ತು ಈತನ 16 ವರ್ಷದ ಪುತ್ರ ಬಂಧಿತರು. ಆರೋಪಿಗಳಿಂದ 16.50 ಲಕ್ಷ ರು. ಮೌಲ್ಯದ 188 ಗ್ರಾಂ ಚಿನ್ನಾಭರಣ, 550 ಗ್ರಾಂ ಬೆಳ್ಳಿ ವಸ್ತುಗಳು, 1,500 ರು. ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ.

ಬೆಟ್ಟದಾಸನಪುರ ನಿವಾಸಿ ಮಹಿಳೆ ಮೇ 7ರಂದು ಬೆಳಗ್ಗೆ ಬಟ್ಟೆ ಒಗೆದು ಎರಡನೇ ಮಹಡಿಯಲ್ಲಿ ಬಟ್ಟೆ ಒಣಗಲು ಹಾಕಿ ಕೆಳಗೆ ಇಳಿಯುವಾಗ ಮನೆ ಒಳಗಿನಿಂದ ಅಪರಿಚಿತ ವ್ಯಕ್ತಿ ಹೊರಗೆ ಓಡಿದ್ದಾನೆ. ಬಳಿಕ ಆ ಮಹಿಳೆ ಮನೆಯೊಳಗೆ ಹೋಗಿ ಕೊಠಡಿಯನ್ನು ಪರಿಶೀಲಿಸಿದಾಗ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡು ಬಂದಿದೆ. ಬೀರು ನೋಡಿದಾಗ ಡ್ರಾಯರ್‌ನಲ್ಲಿದ್ದ 49 ಗ್ರಾಂ ಚಿನ್ನಾಭರಣ ಹಾಗೂ 700 ಗ್ರಾಂ ಬೆಳ್ಳಿ ವಸ್ತುಗಳು ಹಾಗೂ 2 ಸಾವಿರ ರು. ನಗದು ಕಳವು ಮಾಡಿರುವುದು ಗೊತ್ತಾಗಿದೆ. ಈ ಸಂಬಂಧ ಆ ಮಹಿಳೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ತನಿಖೆ ವೇಳೆ ಖಚಿತ ಮಾಹಿತಿ ಮೇರೆಗೆ ಮೇ 13ರಂದು ಮೈಲಸಂದ್ರ ಗ್ರಾಮದಲ್ಲಿ ಬಾಬಾ ಜಾನ್‌ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ತನ್ನ ಅಪ್ರಾಪ್ತ ಪುತ್ರನೊಂದಿಗೆ ಸೇರಿಕೊಂಡು ಮನೆಗಳವು ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಬಳಿಕ ಆತನ ವಶದಲ್ಲಿದ್ದ ದ್ವಿಚಕ್ರ ವಾಹನ, 1,500 ರು. ನಗದು ಹಾಗೂ ದ್ವಿಚಕ್ರ ವಾಹನದ ಡಿಕ್ಕಿಯಲ್ಲಿದ್ದ 550 ಗ್ರಾಂ ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

9 ಮನೆಗಳವು ಪ್ರಕರಣ ಪತ್ತೆ : ಹೆಚ್ಚಿನ ವಿಚಾರಣೆ ವೇಳೆ ಈ ಹಿಂದೆಯೂ ಎಲೆಕ್ಟ್ರಾನಿಕ್‌ಸಿಟಿ ಹಾಗೂ ಹೆಬ್ಬಗೋಡಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಮನೆಗಳವು ಮಾಡಿರುವುದಾಗಿ ಬಾಯ್ಬಿಟ್ಟಿದ್ದಾನೆ. ಬಳಿಕ ಆತನ ಅಪ್ರಾಪ್ತ ಪುತ್ರನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ತಂದೆಯೊಂದಿಗೆ ಸೇರಿ ಮನೆಗಳವು ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಬಳಿಕ ಆತನನ್ನು ಬಾಲ ನ್ಯಾಯಮಂಡಳಿಗೆ ಒಪ್ಪಿಸಲಾಗಿದೆ. ಬಳಿಕ ಆರೋಪಿ ಬಾಬಾ ಜಾನ್‌ನಿಂದ ಒಟ್ಟು 188 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಆರೋಪಿಗಳ ಬಂಧನದಿಂದ ಎಲೆಕ್ಟ್ರಾನಿಕ್‌ಸಿಟಿಯ ಏಳು ಹಾಗೂ ಹೆಬ್ಬಗೋಡಿಯ ಎರಡು ಸೇರಿ ಒಟ್ಟು 9 ಮನೆಗಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗೆ ಮೂವರು ಪತ್ನಿಯರು, ಒಂಬತ್ತು ಮಕ್ಕಳು!

ಆರೋಪಿ ಬಾಬಾ ಜಾನ್‌ಗೆ ಮೂವರು ಪತ್ನಿಯರು. ಒಂಬತ್ತು ಮಕ್ಕಳು. ಮೊದಲ ಪತ್ನಿ ಶ್ರೀರಂಗಪಟ್ಟಣ, ಎರಡನೇ ಪತ್ನಿ ಶಿಕಾರಿಪಾಳ್ಯ ಹಾಗೂ ಮೂರನೇ ಪತ್ನಿ ಶಿಡ್ಲಘಟ್ಟದಲ್ಲಿದ್ದಾರೆ. ಆರೋಪಿಯು ವೃತ್ತಿಪರ ಕಳ್ಳನಾಗಿದ್ದು, ಈ ಹಿಂದೆ ತಲಘಟ್ಟಪುರ, ಕೋಲಾರ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಐದು ಮನೆಗಳವು ಪ್ರಕರಣಗಳು ದಾಖಲಾಗಿವೆ. ಕೆಲ ಪ್ರಕರಣಗಳಲ್ಲಿ ಜೈಲು ಸೇರಿದ್ದ ಆರೋಪಿಯು ಜಾಮೀನು ಪಡೆದು ಬಿಡುಗಡೆಯಾದ ಬಳಿಕವೂ ತನ್ನ ಅಪ್ರಾಪ್ತ ಪುತ್ರನೊಂದಿಗೆ ಸೇರಿಕೊಂಡು ಮನೆಗಳವು ಕೃತ್ಯಗಳಲ್ಲಿ ತೊಡಗಿದ್ದ.

ಅಪ್ಪನ ಸ್ಕೆಚ್‌, ಮಗನ ಅನುಷ್ಠಾನ : ಆರೋಪಿ ಬಾಬಾ ಜಾನ್‌ ಹಗಲಿನಲ್ಲಿ ದ್ವಿಚಕ್ರ ವಾಹನದಲ್ಲಿ ತನ್ನ ಮೊದಲ ಪತ್ನಿಯ ಅಪ್ರಾಪ್ತ ಪುತ್ರನೊಂದಿಗೆ ನಗರದ ವಿವಿಧೆಡೆ ಸುತ್ತಾಡಿ ಬಾಗಿಲು ತೆರೆದಿರುವ ಮನೆಗಳನ್ನು ಗಮನಿಸುತ್ತಿದ್ದ. ಕೆಲ ಹೊತ್ತು ಆ ಮನೆಗಳ ಬಳಿ ನಿಂತು ಸದಸ್ಯರ ಚಲನವಲನದ ಮೇಲೆ ನಿಗಾ ವಹಿಸುತ್ತಿದ್ದ. ಮಹಿಳೆಯರು ಬಟ್ಟೆ ಒಣ ಹಾಕಲು ತಾರಸಿಗೆ ಹೋಗುವುದನ್ನೇ ಕಾಯುತ್ತಿದ್ದ. ಬಳಿಕ ತನ್ನ ಅಪ್ರಾಪ್ತ ಪುತ್ರನನ್ನು ಆ ಮನೆಗೆ ಕಳುಹಿಸಿ ಕಳವು ಮಾಡಿಸುತ್ತಿದ್ದ. ಬಳಿಕ ಅಪ್ಪ-ಮಗ ಎಸ್ಕೇಪ್‌ ಆಗುತ್ತಿದ್ದರು. ಕದ್ದ ಮಾಲುಗಳನ್ನು ಬಾಬಾ ಜಾನ್‌ ವಿಲೇವಾರಿ ಮಾಡುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

- ಆರೋಪಿ ಬಾಬಾ ಜಾನ್‌

Read more Articles on