ಸಾರಾಂಶ
ಮುಂಬೈ: ಕಾಶ್ಮೀರದ ಪಹಲ್ಗಾಂನಲ್ಲಿ 26 ಅಮಾಯಕ ಪ್ರವಾಸಿಗರನ್ನು ಬಲಿಪಡೆದ ಉಗ್ರದಾಳಿಯ ಮರುದಿನವೇ, ಉಗ್ರಪೋಷಕ ಪಾಕಿಸ್ತಾನದ ವಿರುದ್ಧ ಪ್ರತೀಕಾರದ ಮೊದಲ ಹೆಜ್ಜೆಯಿಟ್ಟಿರುವ ಭಾರತ, ಸಿಂಧೂ ಜಲ ಒಪ್ಪಂದವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸ್ಥಗಿತಗೊಳಿಸಿದೆ.
4 ಯುದ್ಧದ ಬಳಿಕವೂ ಜಾರಿಯಲ್ಲಿದ್ದ ಸಿಂಧೂ ನದಿ ಒಪ್ಪಂದವನ್ನು ಇದೀಗ ಸ್ಥಗಿತಗೊಳಿಸಿರುವುದು ಪಾಕಿಸ್ತಾನದ 24 ಕೋಟಿ ಜನರ ಜೀವನದ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿಯೇ ಭಾರತದ ಕ್ರಮ ಪಾಕ್‌ನಲ್ಲಿ ತಲ್ಲಣಕ್ಕೆ ಕಾರಣವಾಗಿದೆ.
ಏನಿದು ಒಪ್ಪಂದ?
1960ರ ಸೆ.19ರಂದು ಏರ್ಪಟ್ಟ ಸಿಂಧೂ ನದಿ ಒಪ್ಪಂದದ ಪ್ರಕಾರ, ಸಿಂಧೂ ನದಿಯ ಪೂರ್ವ ನದಿಗಳಾದ ಸಟ್ಲೇಜ್, ಬಿಯಾಸ್, ಮತ್ತು ರಾವಿಯ ನೀರನ್ನು ಭಾರತ ಮುಕ್ತವಾಗಿ ಬಳಸಬಹುದು. ಅಂತೆಯೇ, ಪಾಕಿಸ್ತಾನಕ್ಕೆ ಪಶ್ಚಿಮದ ಸಿಂಧೂ, ಝೇಲಂ, ಚೆನಾಬ್ ನದಿಗಳ ನೀರು ಬಳಕೆಗೆ ದೊರಕುತ್ತಿತ್ತು.
ಒಪ್ಪಂದ ರದ್ದಿನ ಪರಿಣಾಮವೇನು?:
ಒಪ್ಪಂದ ರದ್ದತಿಯಿಂದ ಭಾರತ ಸಿಂಧೂ ಹಾಗೂ ಅದರ ಉಪನದಿಗಳ ನೀರನ್ನು ಯಾವುದೇ ಅಡತಡೆಗಳಿಲ್ಲದೆ ಬಳಸಬಹುದು. ಪಶ್ಚಿಮದ ನದಿಗಳ ನೀರನ್ನು ಸಂಗ್ರಹಿಸಬಹುದು. ಪಾಕ್‌ಗೆ ಹರಿಯುತ್ತಿದ್ದ ಜಲವನ್ನೂ ತಡೆಹಿಡಿಯಬಹುದು. ಇದರಿಂದ, ನದಿ ನೀರನ್ನೇ ನಂಬಿಕೊಂಡಿರುವ ಕೃಷಿಕರಿಗೆ ತಂದರೆಯಾಗಲಿದೆ. ಜಲಾಶಯದಲ್ಲಿ ಸಂಗ್ರಹಿಸಲಾಗಿರುವ ನೀರನ್ನು ಒಮ್ಮೆಲೆ ಹರಿಬಿಡಲೂ ಅವಕಾಶವಿದ್ದು, ಇದರಿಂದ, ಈಗ ಬಿತ್ತನೆಯ ಸಮಯವಾದ್ದರಿಂದ ಪಾಕಿಸ್ತಾನದ ಕೃಷಿ ಹಾಗೂ ಆರ್ಥಿಕತೆಗೆ ಹೊಡೆತ ಬೀಳಲಿದೆ.
ಅಂತೆಯೇ, ನಿರ್ಮಾಣ ಹಂತದಲ್ಲಿರುವ ಕಿಶನ್‌ಗಂಗಾ ಮತ್ತು ಝೇಲಂ ನದಿಗಳ ಮೇಲಿನ ಜಲವಿದ್ಯುತ್ ಯೋಜನಾ ಸ್ಥಳಗಳಿಗೆ ಪಾಕ್ ಅಧಿಕಾರಿಗಳ ಭೇಟಿಯನ್ನು ರದ್ದುಗೊಳಿಸಬಹುದು ಹಾಗೂ ಅವರೊಂದಿಗೆ ನದಿ ನೀರಿನ ಮಾಹಿತಿ ಹಂಚಿಕೆಯನ್ನು ನಿಲ್ಲಿಸಬಹುದು.
ತಕ್ಷಣದ ಪರಿಣಾಮ ಇಲ್ಲ
ಭಾರತ ಒಪ್ಪಂದದಿಂದ ತಕ್ಷಣವೇ ಹಿಂದೆ ಸರಿಯುವುದಾಗಿ ಘೋಷಿಸಿದ್ದರು. ತಕ್ಷಣಕ್ಕೇ ಪಾಕ್ ಮೇಲೆ ದೊಡ್ಡ ಪರಿಣಾಮ ಆಗದು. ಕಾರಣ ಪಾಕಿಸ್ತಾನಕ್ಕೆ ಹರಿಯುತ್ತಿರುವ ನೀರನ್ನು ಸಂಪೂರ್ಣವಾಗಿ ನಿಲ್ಲಿಸಲು ಅಥವಾ ನದಿ ಹರಿಯುವ ಮಾರ್ಗವನ್ನು ಬದಲಿಸಲು ಅಗತ್ಯವಾದ ಮೂಲಸೌಕರ್ಯ ಈಗಿಲ್ಲ. ಆದರೆ ಈ ಕುರಿತ ಕಾಮಗಾರಿಗೆ ಈಗ ಚಾಲನೆ ನೀಡಬಹುದು.
ಪಾಕ್ ಏನು ಮಾಡೀತು?
ಈ ಒಪ್ಪಂದಕ್ಕೆ ಕಾಲಮಿತಿ ಇಲ್ಲದ ಕಾರಣ ಪಾಕಿಸ್ತಾನ ಅದನ್ನು ಮತ್ತೆ ಜಾರಿಗೆ ತರುವಂತೆ ಕೋರುವುದು ಅಸಾಧ್ಯ. ಅಂರಾತಾಷ್ಟ್ರೀಯ ಕೋರ್ಟ್‌ನಲ್ಲಿ ಅದು ಭಾರತದ ವಿರುದ್ಧ ದೂರಲೂ ಆಗದು.
ಪಾಕ್ ಜಿಡಿಪಿಗೆ ಕೃಷಿಯಿಂದ ಶೇ.22.7ರಷ್ಟು ಕೊಡುಗೆ
ಶೇ.37.4ರಷ್ಟು ಪಾಕಿಸ್ತಾನಿಯರಿಗೆ ಕೃಷಿಯೇ ಕಸುಬು
ಶೇ.90ರಷ್ಟು ಬೆಳೆಗಳಿಗೆ ಸಿಂಧೂ ನದಿ ನೀರೇ ಆಧಾರ
ಅತ್ಯಧಿಕವಾಗಿ ರಫ್ತಾಗುವ ಗೋಧಿ, ಭತ್ತ, ಹತ್ತಿಗೆ ನೀರು ಅತ್ಯಗತ್ಯ
ವೀಸಾ ರದ್ದು: ಪಾಕ್ ಪ್ರಜೆಗಳಿಗೆ ಪೀಕಲಾಟ
ನವದೆಹಲಿ: ಪಾಕಿಸ್ತಾನ ಪ್ರಾಯೋಜಿತ ಪಹಲ್ಗಾಂ ಉಗ್ರದಾಳಿಗೆ ಪ್ರತಿಯಾಗಿ ಅಲ್ಲಿನ ಪ್ರಜೆಗಳಿಗೆ ನೀಡಲಾಗಿದ್ದ ವೀಸಾವನ್ನು ಭಾರತ ರದ್ದುಗೊಳಿಸಿದೆ. ಇದರಿಂದಾಗಿ ವೈದ್ಯಕೀಯ ಚಿಕಿತ್ಸೆ ಸೇರಿ ಅನೇಕ ಕಾರಣಗಳಿಗೆ ಭಾರತಕ್ಕೆ ಬಂದಿರುವ ಹಾಗೂ ಬರಲಿರುವ ಪಾಕಿಗಳಿಗೆ ಸಮಸ್ಯೆಯಾಗಲಿದೆ. ಅಗ್ಗದ ದರದಲ್ಲಿ ಉತ್ತಮ ಚಿಕಿತ್ಸೆ ದೊರಕುವ ಕಾರಣ ಭಾರತದ ವಿವಿಧ ರಾಜ್ಯಗಳಿಗೆ ಬರುತ್ತಿದ್ದ ಪಾಕ್ ಪ್ರಜೆಗಳ ವೀಸಾ ರದ್ದಾಗಲಿದ್ದು, ಅವರೆಲ್ಲ ಅನಿವಾರ್ಯವಾಗಿ ತಮ್ಮ ತಾಯ್ನಾಡಿಗೆ ಮರಳಬೇಕಾಗಿದೆ. ಜೊತೆಗೆ ಹೊಸದಾಗಿ ಬರಲು ಅವಕಾಶವೂ ಇಲ್ಲದಾಗಲಿದೆ.
ಅಟ್ಟಾರಿ ಗಡಿ ಬಂದಿಂದ 3890 ಕೋಟಿ ವ್ಯಾಪಾರ ಬಂದ್: ಪಾಕ್‌ಗೆ ಪೆಟ್ಟು
ನವದೆಹಲಿ: ಪಾಕಿಸ್ತಾನದ ವಿರುದ್ಧದ ಪ್ರತೀಕಾರದ ಭಾಗವಾಗಿ ಉಭಯ ದೇಶಗಳ ನಡುವಿನ ಅಟ್ಟಾರಿ ಗಡಿಯನ್ನು ಮುಚ್ಚುವ ನಿರ್ಧಾರವನ್ನು ಭಾರತ ಕೈಗೊಂಡಿದೆ. ಇದು, ಭಾರತ ಮತ್ತು ಪಾಕಿಸ್ತಾನಗಳ ಮಧ್ಯೆ ಇರುವ ಏಕೈಕ ಭೂ ವ್ಯಾಪಾರ ಮಾರ್ಗವಾಗಿದೆ. 2023-24ರ ಅವಧಿಯಲ್ಲಿ ಅಟ್ಟಾರಿ ಮಾರ್ಗವಾಗಿ 3,890 ಕೋಟಿ ರು. ಮೌಲ್ಯದ ವ್ಯಾಪಾರ ನಡೆದಿತ್ತು. ಇದರ ಬಹುತೇಕ ಲಾಭ ಪಾಕಿಸ್ತಾನಕ್ಕೆ ಆಗುತ್ತಿತ್ತು. ಈಗ ಇದನ್ನು ಮುಚ್ಚುವುದರಿಂದ ಪಾಕ್ ಪಾಲಿನ ಲಾಭಕ್ಕೆ ಕತ್ತರಿ ಬೀಳಲಿದ್ದು, ಕೆಲ ಅಗತ್ಯ ವಸ್ತುಗಳ ಕೊರತೆಯೂ ಕಾಡಲಿದೆ.