ಸಾರಾಂಶ
ದಾಬಸ್‍ಪೇಟೆ : ರಾಜ್ಯದ ವಿವಿಧೆಡೆ ಹಸುಗಳ ಹತ್ಯೆ, ಕತ್ತು ಕೊಯ್ಯುವುದು, ಕೆಚ್ಚಲು ಕತ್ತರಿಸುವಂಥ ಅಮಾನುಷ ಕೃತ್ಯಗಳು ಮುಂದುವರಿದಿದ್ದು, ಇದೀಗ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಅರಳಸಂದ್ರ ಗ್ರಾಮದಲ್ಲಿ ಎರಡು ಹಳ್ಳಿಕಾರ್ ನಾಟಿ ಹೋರಿಗಳ ಕತ್ತು ಕೊಯ್ದಿರುವ ದುಷ್ಕೃತ್ಯ ಬೆಳಕಿಗೆ ಬಂದಿದೆ.
ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48ರಿಂದ 2 ಕಿಲೋ ಮೀಟರ್ ದೂರದ ಕುಮುದ್ವತಿ ನದಿಗೆ ಅಡ್ಡಲಾಗಿ ಅರಳಸಂದ್ರದ ಬಳಿ ನಿರ್ಮಿಸಿರುವ ಸೇತುವೆಯ ಮೇಲೆ ಕತ್ತು ಕೊಯ್ದ ಸ್ಥಿತಿಯಲ್ಲಿ ಎರಡು ಹಳ್ಳಿಕಾರ್ ಜಾತಿಯ ನಾಟಿ ಹೋರಿಗಳು ಪತ್ತೆಯಾಗಿವೆ. ಈ ಅಮಾನವೀಯ ವರ್ತನೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದುಷ್ಕರ್ಮಿಗಳು ಲಕ್ಷಾಂತರ ರೂ.ಬೆಲೆ ಬಾಳುವ ಈ ನಾಟಿ ಹೋರಿಗಳ ಕತ್ತು ಕೊಯ್ದು, ಭಾನುವಾರ ರಾತ್ರಿ ಎಸೆದು ಹೋಗಿದ್ದಾರೆ. ಈ ಸ್ಥಳದಲ್ಲಿ ಕತ್ತು ಕೊಯ್ದಿದ್ದರೆ ರಕ್ತ ಚೆಲ್ಲಿರಬೇಕಿತ್ತು. ಆದರೆ, ಯಾವ ರಕ್ತವೂ ಕಂಡು ಬಂದಿಲ್ಲ. ಹೀಗಾಗಿ, ಬೇರೆ ಕಡೆ ಕತ್ತುಕೊಯ್ದು, ಇಲ್ಲಿ ತಂದು ಎಸೆಯಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸತ್ತಿರುವ ಈ ಎರಡು ನಾಟಿ ಹೋರಿಗಳ ದೇಹದ ಮೇಲೆ ಬಣ್ಣದಲ್ಲಿ ಬರೆಯಲಾದ ನಂಬರ್ ಹಾಗೂ ಇಂಗ್ಲಿಷ್ ಅಕ್ಷರಗಳು ಪತ್ತೆಯಾಗಿದ್ದು, ಯಾವ ಕಾರಣಕ್ಕೆ ಕತ್ತು ಕೊಯ್ದು ಎಸೆದು ಹೋಗಿದ್ದಾರೆ ಎಂಬುದು ತಿಳಿದು ಬಂದಿಲ್ಲ. ಇವುಗಳ ದೇಹದ ಮೇಲೆ ನಂಬರ್‌ಗಳು ಪತ್ತೆಯಾಗಿರುವುದರಿಂದ ಬಹುಶ: ಇವುಗಳನ್ನು ಅಕ್ರಮವಾಗಿ ಕಳ್ಳಸಾಗಾಣಿಕೆ ಮಾಡಲಾಗುತ್ತಿತ್ತು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.
ನೆಲಮಂಗಲ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ಮುಂದುವರಿದಿದೆ. ಈ ಮಧ್ಯೆ, ಮರಣೋತ್ತರ ಪರೀಕ್ಷೆ ನಡೆಸಿ, ಸಮೀಪದಲ್ಲಿಯೇ ಅವುಗಳ ಅಂತ್ಯಕ್ರಿಯೆ ನಡೆಸಲಾಗಿದೆ.
2005ರಲ್ಲಿ ನಡೆದ ಕೆಲ ಪೈಶಾಚಿಕ ಕೃತ್ಯ:
ಜನವರಿ 12: ಬೆಂಗಳೂರಿನ ಚಾಮರಾಜಪೇಟೆಯ ವಿನಾಯಕನಗರದಲ್ಲಿ ಮೂರು ಹಸುಗಳ ಕೆಚ್ಚಲು ಕತ್ತರಿಸಿ ಕಿಡಿಗೇಡಿಗಳು ಕ್ರೌರ್ಯ ಮೆರೆದಿದ್ದರು.
ಜನವರಿ 16: ನಂಜನಗೂಡಿನ ನಂಜುಂಡೇಶ್ವರ ದೇವಾಲಯದ ಬಳಿ ಹರಕೆಗೆ ಬಿಟ್ಟ ಹಸುವಿನ ಬಾಲ ಕತ್ತರಿಸಿ ವಿಕೃತಿ ಮೆರೆಯಲಾಗಿತ್ತು.
ಜನವರಿ 19: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಸಾಲ್ಕೋಡು ಗ್ರಾಮದಲ್ಲಿ ಗರ್ಭ ಧರಿಸಿದ್ದ ಹಸುವಿನ ತಲೆ ಕಡಿದು ಬಳಿಕ ಅದರ ದೇಹವನ್ನು ತೆಗೆದುಕೊಂಡು ಹೋಗಲಾಗಿತ್ತು.
ಮೇ 13: ಚಿಕ್ಕಮಗಳೂರಿನ ಬೀರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಸು ಕಳ್ಳತನ ಯತ್ನ ವಿಫಲವಾದಾಗ ರೋಷದಲ್ಲಿ ಹಸುವಿನ ಕೆಚ್ಚಲು ಕತ್ತರಿಸಿ ಕಳ್ಳರು ಪರಾರಿಯಾಗಿದ್ದರು.
ಜೂನ್ 13: ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್ನಲ್ಲಿ ಗರ್ಭಾವಸ್ಥೆಯಲ್ಲಿದ್ದ ಹಸುವಿನ ಕೆಚ್ಚಲು ಕತ್ತರಿಸಿ ವಿಕೃತಿ ಮೆರೆಯಲಾಗಿತ್ತು.
ಜೂನ್ 21: ಬೆಂಗಳೂರು ದಕ್ಷಿಣ ತಾಲೂಕಿನ ಸೂಲಿವಾರ ಗ್ರಾಮದಲ್ಲಿ ಹಾಲಿನ ಡೈರಿ ಅಧ್ಯಕ್ಷರಿಗೆ ಸೇರಿದ ಹಸುವಿನ ಕೆಚ್ಚಲು ಕೊಯ್ದು ದುಷ್ಕರ್ಮಿಗಳು ಕ್ರೌರ್ಯ ಮೆರೆದಿದ್ದರು.
ಜೂನ್ 28: ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ವಿಜಾಪುರ ಗ್ರಾಮದ ತೋಟದಕೊಪ್ಪದಲ್ಲಿ ಹಸುವಿನ ಕೆಚ್ಚಲು ಕೊಯ್ದು ಕಿಡಿಗೇಡಿಗಳ ವಿಕೃತಿ.