ಸಾರಾಂಶ
ಮುಂಬೈ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿದೇಶಿ ವಸ್ತುಗಳ ಮೇಲೆ ದಿನಕ್ಕೊಂದರಂತೆ ತೆರಿಗೆ ಹೆಚ್ಚಳ ಘೋಷಿಸತ್ತಿರುವ ಪರಿಣಾಮ ಬಾಂಬೆ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಶುಕ್ರವಾರ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿವೆ.
ಸೆನ್ಸೆಕ್ಸ್ 1414 ಅಂಕ ಕುಸಿತ ಕಂಡರೆ, ನಿಫ್ಟಿ 420 ಅಂಕ ಇಳಿದಿದೆ. ಇದರಿಂದ ಹೂಡಿಕೆದಾರರಿಗೆ ಒಂದೇ ದಿನ ಬರೋಬ್ಬರಿ 9 ಲಕ್ಷ ಕೋಟಿ ರು. ನಷ್ಟ ಸಂಭವಿಸಿದೆ.
ಷೇರುಪೇಟೆಯಲ್ಲಿ ಸೆನ್ಸೆಕ್ಸ್ ದಿನದಂತ್ಯಕ್ಕೆ 1,414 ಅಂಕ ಕುಸಿದು 73,198ರಲ್ಲಿ ಮುಕ್ತಾಯಗೊಂಡಿದ್ದರೆ, ನಿಫ್ಟಿ 420 ಅಂಕ ಕುಸಿತ ಕಂಡು 22,124ರಲ್ಲಿ ಅಂತ್ಯಗೊಂಡಿದೆ.
ಸೆನ್ಸೆಕ್ಸ್, ನಿಫ್ಟಿ ಕುಸಿತದಲ್ಲಿ ಕಳೆದ 5 ತಿಂಗಳಲ್ಲಿ ದಾಖಲೆ ಬರೆದಿದೆ. ಕಳೆದ ವರ್ಷ ಸೆಪ್ಟೆಂಬರ್ 27ಕ್ಕೆ ಹೋಲಿಸಿದರೆ ಸೆನೆಕ್ಸ್ ಫೆ.27ರ ವೇಳೆಗೆ ಬರೋಬ್ಬರಿ 12,780 ಅಂಕ ಕುಸಿದಿದ್ದರೆ, ನಿಫ್ಟಿ 4151 ಅಂಕ ಇಳಿಕೆ ಕಂಡಿದೆ. ಕಳೆದ ಸೆ.27ರಂದುಸೆನ್ಸೆಕ್ಸ್ ದಾಖಲೆಯ 85,978ಕ್ಕೆ ಏರಿದ್ದರೆ ನಿಫ್ಟಿ 26,277ಕ್ಕೆ ಏರಿತ್ತು.
ಟ್ರಂಫ್ ಅವರು ಕೆನಡಾ ಹಾಗೂ ಮೆಕ್ಸಿಕೋ ವಸ್ತುಗಳ ಮೇಲೆ ಶೇ.25ರಷ್ಟು ತೆರಿಗೆ ಹಾಕುವದಾಗಿ ಹಾಗೂ ಚೀನಾ ವಸ್ತುಗಳ ಮೇಲೆ ಶೇ.10ರಷ್ಟು ಹೆಚ್ಚುವರಿ ತೆರಿಗೆ ಹಾಕುವುದಾಗಿ ಗುರುವಾರ ರಾತ್ರಿ ಘೋಷಿಸಿದ್ದರು. ಇದು ಪೇಟೆ ಮೇಲೆ ಮಂಕು ಮೂಡಿಸಿದೆ. ಜತೆಗೆ ದೇಶಿ ನಿಧಿಯ ಹೊರ ಹರಿವು ಕೂಡ ಕುಸಿತಕ್ಕೆ ಕಾರಣ.
ಕಳೆದ ತ್ರೈಮಾಸಿಕದಲ್ಲಿ ಜಿಡಿಪಿ ಚೇತರಿಕೆ: ಶೇ.6.2ರ ಪ್ರಗತಿ
ನವದೆಹಲಿ: 2024-25ರ 3ನೇ ತ್ರೈಮಾಸಿಕ ಅವಧಿಯಲ್ಲಿ ಭಾರತದ ಜಿಡಿಪಿ ಬೆಳವಣಿಗೆಯು ಶೇ.6.2ರಷ್ಟು ದಾಖಲಾಗಿದೆ. ಈ ಮೂಲಕ 2ನೇ ತ್ರೈಮಾಸಿಕದ ಶೇ.5.6 ಪ್ರಗತಿ ದರಕ್ಕಿಂತ ಸುಧಾರಣೆ ಕಂಡಿದೆ. ಅಲ್ಲದೆ, ಈ ವಿತ್ತ ವರ್ಷದಲ್ಲಿ ಶೇ.6.5ರ ರದದಲ್ಲಿ ದೇಶ ಪ್ರಗತಿ ಕಾಣಲಿದೆ ಎಂದು ಅಂದಾಜಿಸಲಾಗಿದೆ.ಆದರೆ ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.9.5ರಷ್ಟು ಬೆಳವಣಿಗೆ ಸಾಧಿಸಿತ್ತು. ಅದಕ್ಕಿಂತ ಹೋಲಿಸಿದರೆ ಇದು ಕಮ್ಮಿ. ಕೃಷಿ ಕ್ಷೇತ್ರ ಬಿಟ್ಟು ಮಿಕ್ಕಾವ ಕ್ಷೇತ್ರಗಳೂ ಚೇತರಿಕೆ ಕಂಡಿಲ್ಲ. ಗಣಿಗಾರಿಕೆ ಮತ್ತು ಉತ್ಪಾದನಾ ವಲಯದಲ್ಲಿನ ಕುಂಠಿತ ಬೆಳವಣಿಗೆಯು ಜಿಡಿಪಿ ಕುಸಿತಕ್ಕೆ ಕಾರಣವಾಗಿದೆ ಎಂದು ರಾಷ್ಟ್ರೀಯ ದತ್ತಾಂಶ ಕಚೇರಿ (ಎನ್‌ಎಸ್‌ಒ) ಹೇಳಿದೆ.ಇನ್ನು ದೇಶದ ಜಿಡಿಪಿ ಬೆಳವಣಿಗೆ 2024-25ರಲ್ಲಿ ಶೇ.6.4ರಲ್ಲಿ ಇರಲಿದೆ ಎಂದು ಈ ಹಿಂದೆ ಅಂದಾಜಿಸಿದ್ದ ಎನ್‌ಎಸ್‌ಒ, ಎರಡನೇ ವರದಿಯಲ್ಲಿ ಬೆಳವಣಿಗೆಯನ್ನು ಶೇ.6.5ಕ್ಕೆ ಏರಿಸಿದೆ.
‘ವಿಕಸಿತ ಭಾರತ’ಕ್ಕೆ ಶೇ.7.8 ಜಿಡಿಪಿ ಅಗತ್ಯ: ವಿಶ್ವಬ್ಯಾಂಕ್
ನವದೆಹಲಿ: ಭಾರತ 2047 ಹೊತ್ತಿಗೆ ಅಭಿವೃದ್ಧಿ ಹೊಂದಿದ ದೇಶವಾಗಬೇಕಿದ್ದರೆ ನಿರಂತರವಾಗಿ ಶೇ.7.8ರ ಸರಾಸರಿಯಲ್ಲಿ ಬೆಳವಣಿಗೆಯಾಗಬೇಕು ಅಲ್ಲದೇ ತಲಾದಾಯವು 8 ಪಟ್ಟು ಹೆಚ್ಚಾಗಬೇಕು ಎಂದು ಎಂದು ವಿಶ್ವ ಬ್ಯಾಂಕ್ ವರದಿ ಹೇಳಿದೆ.‘ಬಿಕಮಿಂಗ್ ಎ ಹೈಯರ್ ಎಕಾನಮಿ ಇನ್ ಎ ಜೆನರೇಷನ್’ ವರದಿಯಲ್ಲಿ ವಿಶ್ವ ಬ್ಯಾಂಕ್ ಈ ಸಲಹೆಗಳನ್ನು ನೀಡಿದೆ.ಭಾರತವು 2000ದಿಂದ ಈಚೆಗೆ ಶೇ.6.3ರ ಸರಾಸರಿಯಲ್ಲಿ ಆರ್ಥಿಕತೆ ಬೆಳವಣಿಗೆ ಸಾಧಿಸಿದೆ. ಇದು ಉತ್ತಮ. ಆದರೆ 2047ರ ಹೊತ್ತಿಗೆ ವಿಕಸಿತ ದೇಶವಾಗಲು ಇದು ಸಾಲದು. ಅದಕ್ಕಾಗಿ ಹಣಕಾಸು ಮತ್ತು ಭೂಸುಧಾರಣಾ ಕ್ಷೇತ್ರದಲ್ಲಿ ಕ್ರಾಂತಿಕಾರಿ ನೀತಿಗಳು ಬೇಕಾಗುತ್ತವೆ ಎಂದಿದೆ.ಇದೇ ರೀತಿಯ ಮಾರ್ಗದಿಂದ ಚಿಲಿ, ಕೊರಿಯಾ ಮತ್ತು ಪೋಲೆಂಡ್ ದೇಶಗಳು ಅಭಿವೃದ್ಧಿ ಸಾಧಿಸಿದವು ಎಂದು ಉದಾಹರಿಸಿದೆ.
ಇಪಿಎಫ್ ಬಡ್ಡಿದರ ಶೇ.8.25ರಲ್ಲೇ ಮುಂದುವರಿಕೆಗೆ ನಿರ್ಧಾರ
ನವದೆಹಲಿ: ನೌಕರರ ಭವಿಷ್ಯ ನಿಧಿ ಮಂಡಳಿ (ಇಪಿಎಫ್‌ಒ), 2024-25ನೇ ಸಾಲಿನ ನೌಕರರ ಭವಿಷ್ಯ ನಿಧಿ (ಇಪಿಎಫ್) ಠೇವಣಿ ಮೇಲಿನ ಬಡ್ಡಿದರವನ್ನು ಶೇ.8.25ರಲ್ಲಿಯೇ ಮುಂದುವರೆಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿದೆ.
2024ರಲ್ಲಿ ಇಪಿಎಫ್‌ಒ, ಹಿಂದೆ ಶೇ.8.15ರಷ್ಟಿದ್ದ ಬಡ್ಡಿದರವನ್ನು ಶೇ.8.25ಕ್ಕೆ ಹೆಚ್ಚಿಸಿತ್ತು. ಅದೇ ಬಡ್ಡಿದರ ಸದ್ಯ ಮುಂದುವರೆಯಲಿದೆ ಎಂದು ಪಿಎಫ್ ಬಗ್ಗೆ ಉನ್ನತ ನಿರ್ಣಯ ತೆಗೆದುಕೊಳ್ಳುವ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿ (ಸಿಬಿಟಿ) ಸಭೆಯಲ್ಲಿ ನಿರ್ಧರಿಸಲಾಗಿದೆ. ಸಿಬಿಟಿ ನಿರ್ಣಯವನ್ನು ಹಣಕಾಸು ಸಚಿವಾಲಯದ ಒಪ್ಪಿಗೆಗಾಗಿ ಕಳಿಸಲಾಗುತ್ತದೆ. ಕೇಂದ್ರದ ಅನುಮೋದನೆ ನಂತರ 2024-25ನೇ ಸಾಲಿನ ಇಪಿಎಫ್ ಮೇಲಿನ ಬಡ್ಡಿದರವನ್ನು 7 ಕೋಟಿ ಗೂ ಹೆಚ್ಚು ಇಪಿಎಫ್‌ಒ ಚಂದಾದಾರರ ಖಾತೆಗಳಿಗೆ ಜಮೆ ಮಾಡಲಾಗುತ್ತದೆ.