-ಇರಾನ್‌ ನಡೆ ಸ್ವೀಕಾರಾರ್ಹವಲ್ಲ: ಟ್ರಂಪ್

- ಅಮೆರಿಕವೇ ದಾಳಿಗೆ ಹೊಣೆ: ಇರಾನ್‌

ವಾಷಿಂಗ್ಟನ್‌: ಇತ್ತೀಚೆಗೆ 3 ನಾವಿಕರನ್ನು ಬಲಿ ಪಡೆದ ಭಾರತೀಯ ಹಡಗಿನ ಮೇಲೆ ನಡೆದ ದಾಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಇರಾನ್‌ ಅನ್ನು ಹೊಣೆಯಾಗಿಸಿದ್ದಾರೆ. ಅತ್ತ ಇರಾನ್‌ ಈ ಕೃತ್ಯಕ್ಕೆ ಅಮೆರಿಕವೇ ಕಾರಣ ಎಂದು ಆಪಾದಿಸಿದ್ದು, ಜಾಗತಿಕ ಶಾಂತಿಗೆ ಅಮೆರಿಕ ಧಕ್ಕೆ ತರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಶುಕ್ರವಾರ ಟ್ರುತ್ ಸೋಶಿಯಲ್‌ನಲ್ಲಿ ಪೋಸ್ಟ್‌ ಮಾಡಿರುವ ಟ್ರಂಪ್, ‘ಹೋರ್ಮುಜ್ ಜಲಸಂಧಿಯನ್ನು ಬಿಡುತ್ತಿರುವ ಭಾರತೀಯ ಹಡಗುಗಳ ಮೇಲೆ ನಿನ್ನೆ ರಾತ್ರಿ ನಡೆದ ಡ್ರೋನ್ ದಾಳಿಯನ್ನು ಅವರು (ಇರಾನ್) ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಇದನ್ನು ಸ್ವೀಕಾರಾರ್ಹವಲ್ಲ’ ಎಂದು ಕಿಡಿ ಕಾರಿದ್ದಾರೆ.

ಅತ್ತ ಟ್ವೀಟ್‌ ಮಾಡಿರುವ ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್‌ ಬಖೈ, ‘ಭಾರತೀಯ ಹಡಗಿನ ಮೇಲಿನ ದಾಳಿಗೆ ಅಮೆರಿಕವೇ ಹೊಣೆ. ಅದು ಜಾಗತಿಕ ಶಾಂತಿ ಮತ್ತು ಭದ್ರತೆಗೆ ಬೆದರಿಕೆಯನ್ನುಂಟುಮಾಡುತ್ತಲೇ ಇದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಈ ವಾರದಲ್ಲಿ 3 ಭಾರತೀಯ ಹಡಗುಗಳ ಮೇಲೆ ದಾಳಿ ನಡೆದಿದ್ದು, ಮೂವರು ನಾವಿಕರು ಬಲಿಯಾಗಿದ್ದಾರೆ.

==

ನಾವಿಕರ ಜೀವ ಹಾನಿ ತಡೆಯಿರಿ: ಅಮೆರಿಕಕ್ಕೆ ಭಾರತ ಕಟು ತಾಕೀತು

ನವದೆಹಲಿ: ಒಮಾನ್‌ ಕಡಲ ತೀರದಲ್ಲಿ ಭಾರತಕ್ಕೆ ಸೇರಿದ ಮೂರು ಹಡಗುಗಳ ಮೇಲೆ ದಾಳಿ ಮತ್ತು ದಾಳಿಯ ವೇಳೆ ಮೂವರು ಭಾರತೀಯ ನಾವಿಕರ ಜೀವ ಹಾನಿ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಭಾರತ ಸರ್ಕಾರ, ಇಂಥ ದಾಳಿ ವೇಳೆ ಭಾರತೀಯ ಜೀವ ಹಾನಿಯಾಗದಂತೆ ನೋಡಿಕೊಳ್ಳಿ ಎಂದು ಅಮೆರಿಕಕ್ಕೆ ತಾಕೀತು ಮಾಡಿದೆ. ಭಾರತದಲ್ಲಿನ ಅಮೆರಿಕ ವಿದೇಶಾಂಗ ಇಲಾಖೆಯ ಅಮೆರಿಕದ ಉನ್ನತ ಅಧಿಕಾರಿ ಜೇಸನ್ ಮೀಕ್ಸ್ ಅವರನ್ನು ಕರೆಸಿ ವಿದೇಶಾಂಗ ಸಚಿವಾಲಯ ಶುಕ್ರವಾರ ಈ ಪ್ರತಿಭಟನೆ ಸಲ್ಲಿಸಿದೆ. ಇದು ಕಳೆದ 48 ಗಂಟೆಯಲ್ಲಿ ಭಾರತ ಅಮೆರಿಕದ ರಾಯಭಾರ ಕಚೇರಿ ಅಧಿಕಾರಿಗಳಿಗೆ ನೀಡಿದ 2ನೇ ಸಮನ್ಸ್ ಆಗಿತ್ತು.