ಸಾರಾಂಶ
- ಕಳೆದ ವರ್ಷ ಶೇ.31ರಷ್ಟು ಔಷಧೋತ್ಪನ್ನ ಅಮೆರಿಕಕ್ಕೆ ರಫ್ತು
ನಗದೆಹಲಿ: ಭಾರತದ ಔಷಧ ಕಂಪನಿಗಳಿಗೆ ಅಮೆರಿಕವೇ ಅತಿದೊಡ್ಡ ಮಾರುಕಟ್ಟೆ. ಹೀಗಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಔಷಧೋತ್ಪನ್ನಗಳ ಮೇಲೆ ಹೇರಿರುವ ಶೇ.100 ತೆರಿಗೆ ಬಿಸಿ ಭಾರತದ ಔಷಧೋದ್ಯಮಕ್ಕೂ ತಟ್ಟುವ ಸಾಧ್ಯತೆ ಇದೆ.ಭಾರತವು ದೊಡ್ಡ ಪ್ರಮಾಣದಲ್ಲಿ ಅಮೆರಿಕಕ್ಕೆ ಜನರಿಕ್ ಔಷಧಗಳನ್ನು ಪೂರೈಸುತ್ತದೆ. ಭಾರತವು ಕಳೆದ ವರ್ಷ 2.47 ಲಕ್ಷ ಕೋಟಿ ರುಪಾಯಿ ಮೌಲ್ಯದ ಔಷಧಗಳನ್ನು ವಿದೇಶಗಳಿಗೆ ರಫ್ತು ಮಾಡಿದ್ದು, ಇದರಲ್ಲಿ ಶೇ.31 ಅಥವಾ 77,138 ಕೋಟಿ ರು. ಮೌಲ್ಯದ ಔಷಧಗಳನ್ನು ಅಮೆರಿಕಕ್ಕೇ ಕಳುಹಿಸಿಕೊಟ್ಟಿದೆ. ಈ ವರ್ಷದ ಆರಂಭದ ಆರು ತಿಂಗಳಲ್ಲಿ ಈಗಾಗಲೇ 32,505 ಕೋಟಿ ರು. ಮೌಲ್ಯದ ಔಷಧಗಳನ್ನು ಅಮೆರಿಕಕ್ಕೆ ರಫ್ತು ಮಾಡಲಾಗಿದೆ ಎಂದು ಫಾರ್ಮಾಸ್ಯುಟಿಕಲ್ಸ್ ಎಕ್ಸ್‌ಪೋರ್ಟ್ ಪ್ರೊಮೋಷನ್ ಕೌನ್ಸಿಲ್ ಆಫ್ ಇಂಡಿಯಾ ಹೇಳಿದೆ.
ಅಮೆರಿಕದಲ್ಲಿ ಬಳಸುವ ಶೇ.45ರಷ್ಟು ಜನರಿಕ್ ಔಷಧಿಗಳು ಹಾಗೂ ಶೇ.15ರಷ್ಟು ಬಯೋಸಿಮಿಲರ್ ಔಷಧಗಳು ಭಾರತದಿಂದಲೇ ಪೂರೈಕೆಯಾಗುತ್ತವೆ. ಡಾಕ್ಟರ್ ರೆಡ್ಡಿ, ಅರಬಿಂದೋ ಫಾರ್ಮಾ, ಜೈಡಸ್ ಲೈಫ್‌ಸೈನ್ಸ್, ಸನ್ ಫಾರ್ಮಾ ಮತ್ತು ಗ್ಲ್ಯಾಂಡ್ ಫಾರ್ಮಾಗಳು ಅಮೆರಿಕದ ಮಾರುಕಟ್ಟೆಯಿಂದಲೇ ಶೇ.30ರಿಂದ 50ರವರೆಗಿನ ಆದಾಯ ಗಳಿಸುತ್ತವೆ.ಸದ್ಯ ಡೊನಾಲ್ಡ್ ಟ್ರಂಪ್ ಹೇರಿರುವ ತೆರಿಗೆಯು ಬ್ರ್ಯಾಂಡೆಂಡ್ ಮತ್ತು ಪೇಟೆಂಟ್ ಪಡೆದಿರುವ ಔಷಧಗಳಿಗೆ ಸೀಮಿತವಾಗಿದ್ದು, ಬಹುರಾಷ್ಟ್ರೀಯ ಔಷಧ ಕಂಪನಿಗಳ ಮೇಲಷ್ಟೇ ಇದು ಹೆಚ್ಚಿನ ಪರಿಣಾಮ ಬೀರಲಿದೆ ಎನ್ನಲಾಗಿದೆ. ಆದರೆ, ಮುಂದಿನ ದಿನಗಳಲ್ಲಿ ಸಂಕೀರ್ಣ ಜನರಿಕ್ ಔಷಧಗಳು ಮತ್ತು ಸ್ಪೆಷಾಲಿಟಿ ಔಷಧಗಳ ಮೇಲೂ ಇದೇ ರೀತಿ ತೆರಿಗೆ ಹೇರಿದರೂ ಅಚ್ಚರಿ ಇಲ್ಲ ಎಂಬ ಆತಂಕ ಭಾರತೀಯ ಔಷಧಿ ಕಂಪನಿಗಳನ್ನು ಕಾಡುತ್ತಿದೆ. ಅರಬಿಂದೋ ಸೇರಿ ಭಾರತದ ಕೆಲ ಕಂಪನಿಗಳು ಈಗಾಗಲೇ ಅಮೆರಿಕದಲ್ಲಿ ತನ್ನ ಘಟಕಗಳನ್ನು ಹೊಂದಿರುವುದರಿಂದ ಅವುಗಳ ಮೇಲೆ ತೆರಿಗೆ ಹೊಡೆತ ಅಷ್ಟೇನೂ ಪರಿಣಾಮ ಬೀರಲಿಕ್ಕಿಲ್ಲ ಎಂದು ಅಂದಾಜಿಸಲಾಗಿದೆ.
ಜನರಿಕ್ ಮೇಲೆ ಹೇರಿದರೆ ಅಮೆರಿಕಕ್ಕೇ ಹೊಡೆತ?:ಅಮೆರಿಕದ ಗ್ರಾಹಕರು ಭಾರತದಲ್ಲಿ ಉತ್ಪಾದಿಸಿದ ಕಡಿಮೆ ವೆಚ್ಚದ ಜನರಿಕ್ ಔಷಧಿಗಳನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ. ಒಂದು ವೇಳೆ ಅಮೆರಿಕವು ಈ ರೀತಿ ತೆರಿಗೆ ಹೆಚ್ಚಿಸಿದರೆ ಔಷಧಗಳ ಬೆಲೆಯೂ ಏರಿಕೆಯಾಗಲಿದೆ. ಇದರ ನೇರ ಪರಿಣಾಮ ಅಮೆರಿಕದ ಗ್ರಾಹಕರಿಗೇ ಬೀಳಲಿದೆ ಎನ್ನಲಾಗುತ್ತಿದೆ.
==ಷೇರುಪೇಟೆ 3 ವಾರ ಕನಿಷ್ಠಕ್ಕೆ: ಸೆನ್ಸೆಕ್ಸ್ 733 ಅಂಕ ಕುಸಿತ
ಮುಂಬೈ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಔಷಧ ಕ್ಷೇತ್ರದ ಮೇಲೆ ಶೇ.100ರಷ್ಟು ತೆರಿಗೆ ಹೇರಿದ ಪರಿಣಾಮ ಭಾರತೀಯ ಷೇರುಪೇಟೆಯು 3 ವಾರಗಳ ಕನಿಷ್ಠಕ್ಕೆ ಕುಸಿದಿದೆ.30 ಷೇರುಗಳ ಬಾಂಬೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 733.22 ಅಂಕಗಳ ಕುಸಿತ ಕಂಡು 80,426.46ಕ್ಕೆ ತಲುಪಿತು. ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ 236.15 ಅಂಕ ಕುಸಿದು 24,654.70ಕ್ಕೆ ತಲುಪಿತು.ಟ್ರಂಪ್ ಟ್ಯಾಕ್ಸ್ ಪರಿಣಾಮ ಫಾರ್ಮಾ ವಲಯದ ಷೇರು ಕುಸಿದವು, ಇದರ ಜತೆಗೆ ಐಟಿ ಕ್ಷೇತ್ರದ ಷೇರುಗಳೂ ಕುಸಿದವು. ಆತಂಕದಿಂದ ಜನರು ಇವುಗಳ ಷೇರು ಮಾರಿದರು.