ಹಿಜ್ಬುಲ್ಲಾ ಉಗ್ರರ ಮೇಲೆ ಇಸ್ರೇಲಿ ಪಡೆಗಳು 100 ವಿಮಾನ ಬಳಸಿ ಭಾರೀ ಪ್ರಮಾಣದ ಕ್ಷಿಪಣಿಗಳ ಮಳೆ ಸುರಿಸಿ ವೈಮಾನಿಕ ದಾಳಿ

| Published : Aug 26 2024, 01:42 AM IST / Updated: Aug 26 2024, 04:16 AM IST

ಸಾರಾಂಶ

ಇಸ್ರೇಲ್‌ ಮತ್ತು ಹಮಾಸ್‌ ನಡುವಣ ಯುದ್ಧದ ವೇಳೆ ಪರೋಕ್ಷವಾಗಿ ಹಮಾಸ್‌ ಉಗ್ರರಿಗೆ ನೆರವು ನೀಡುತ್ತಿರುವ ಲೆಬನಾನ್‌ನ ಹಿಜ್ಬುಲ್ಲಾ ಉಗ್ರರ ಮೇಲೆ ಇಸ್ರೇಲಿ ಪಡೆಗಳು ಭಾನುವಾರ 100 ವಿಮಾನ ಬಳಸಿ ಭಾರೀ ಪ್ರಮಾಣದ ವೈಮಾನಿಕ ದಾಳಿ ನಡೆಸಿ ಕ್ಷಿಪಣಿಗಳ ಮಳೆ ಸುರಿಸಿದೆ.

ಟೆಲ್‌ ಅವಿವ್‌/ಜೆರುಸಲೇಂ: ಇಸ್ರೇಲ್‌ ಮತ್ತು ಹಮಾಸ್‌ ನಡುವಣ ಯುದ್ಧದ ವೇಳೆ ಪರೋಕ್ಷವಾಗಿ ಹಮಾಸ್‌ ಉಗ್ರರಿಗೆ ನೆರವು ನೀಡುತ್ತಿರುವ ಲೆಬನಾನ್‌ನ ಹಿಜ್ಬುಲ್ಲಾ ಉಗ್ರರ ಮೇಲೆ ಇಸ್ರೇಲಿ ಪಡೆಗಳು ಭಾನುವಾರ 100 ವಿಮಾನ ಬಳಸಿ ಭಾರೀ ಪ್ರಮಾಣದ ವೈಮಾನಿಕ ದಾಳಿ ನಡೆಸಿ ಕ್ಷಿಪಣಿಗಳ ಮಳೆ ಸುರಿಸಿದೆ. ಇದಕ್ಕೆ ಪ್ರತಿಯಾಗಿ ಹಿಜ್ಬುಲ್ಲಾ ಉಗ್ರರು ಕೂಡಾ 300ಕ್ಕೂ ಹೆಚ್ಚು ರಾಕೆಟ್‌ ಬಳಸಿ ಪ್ರತಿ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಆಗಿರುವ ಸಾವು-ನೋವಿನ ಬಗ್ಗೆ ವರದಿಯಾಗಿಲ್ಲ.

ಇಸ್ರೇಲ್‌- ಹಮಾಸ್‌ ನಡುವೆ ಕದನ ವಿರಾಮ ಘೋಷಣೆಗೆ ಹಲವು ದೇಶಗಳು ಹಿಂಬಾಗಿಲ ಮಾತುಕತೆ ನಡೆಸುತ್ತಿರುವ ಹೊತ್ತಿನಲ್ಲೇ ನಡೆದ ಈ ಬೆಳವಣಿಗೆ ದೊಡ್ಡದೊಂದು ಯುದ್ಧಕ್ಕೆ ಮುನ್ನುಡಿ ಬರೆಯಬಹುದು ಎಂಬ ಆತಂಕ ಸೃಷ್ಟಿಯಾಗಿತ್ತು. ಆದರೆ ಎರಡೂ ಬಣಗಳು ತಮ್ಮ ದಾಳಿ ಮುಕ್ತಾಯವಾಗಿದೆ ಎಂದು ಘೋಷಿಸಿದ ಕಾರಣ ತಕ್ಷಣಕ್ಕೆ ಅಪಾಯ ದೂರವಾಗಿದೆ.

ಭಾರೀ ದಾಳಿ:

ಇರಾನ್‌ ಬೆಂಬಲಿತ ಹಿಜ್ಬುಲ್ಲಾ ಉಗ್ರರು ತನ್ನ ಮೇಲೆ ದಾಳಿ ನಡೆಸಬಹುದು ಎಂಬ ಸುಳಿವು ಪಡೆದ ಇಸ್ರೇಲಿ ಸೇನೆ, ಭಾನುವಾರ 100ಕ್ಕೂ ಹೆಚ್ಚು ಯುದ್ಧ ವಿಮಾನಗಳನ್ನು ಬಳಸಿ ಲೆಬನಾನ್‌ನ ಉಗ್ರ ನೆಲೆಯ ಮೇಲೆ ಭಾರೀ ಪ್ರಮಾಣದ ವೈಮಾನಿಕ ದಾಳಿ ನಡೆಸಿದೆ. ಇತ್ತೀಚೆಗೆ ಹಿಜ್ಬುಲ್ಲಾ ಕಮಾಂಡರ್‌ ಫೌದ್‌ ಶುಕ್ರ್‌ ಎಂಬಾತ ಇಸ್ರೇಲಿ ದಾಳಿಗೆ ಬಲಿಯಾಗಿದ್ದ. ಹೀಗಾಗಿ ಇದಕ್ಕೆ ಪ್ರತೀಕಾರ ತೆಗೆದುಕೊಳ್ಳಲು ಇಸ್ರೇಲ್‌ ಮೇಲೆ ದಾಳಿಗೆ ಉಗ್ರರು ಸಜ್ಜಾಗಿದ್ದರು. ಆದರೆ ಇದರ ಸುಳಿವು ಪಡೆದ ಇಸ್ರೇಲಿ ಮೊದಲು ತಾನೇ ದಾಳಿ ನಡೆಸಿ ಉಗ್ರರ ಮಟ್ಟಹಾಕುವ ಕೆಲಸ ಮಾಡಿದೆ.

ಆದರೆ ಈ ದಾಳಿಗೂ ಬಗ್ಗದ ಹಿಜ್ಬುಲ್ಲಾ ಉಗ್ರರು, 320 ಕತ್ಯೂಷಾ ರಾಕೆಟ್‌ ಅನ್ನು ಇಸ್ರೇಲಿ ಗಡಿಯೊಳಗೆ ಹಾರಿಸಿವೆ.